ಶಾಲೆಗಳ ಫಲಿತಾಂಶ ವೃದ್ಧಿಗೆ BBMP ಮುಂದು….!

ಬೆಂಗಳೂರು:

   ಪಾಲಿಕೆ ವ್ಯಾಪ್ತಿಯ ಶಾಲೆಗಳಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ವೃದ್ಧಿಸಲು ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ನಡೆಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಂದಾಗಿದೆ.

   ಪಾಲಿಕೆಯ 8 ವಲಯಗಳಲ್ಲಿ ಒಟ್ಟು 33 ಪ್ರೌಢಶಾಲೆಗಳಲ್ಲಿ, 2024-25ನೇ ಸಾಲಿನಲ್ಲಿ 3,148 ಬಾಲಕರು, 4,248 ಬಾಲಕಿಯರು ಸೇರಿದಂತೆ ಒಟ್ಟು 7,396 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಶೇಕಡ 100ರಷ್ಟು ಫಲಿತಾಂಶ ದಾಖಲಿಸುವ ಉದ್ದೇಶದಿಂದ ಎಲ್ಲ ಶಾಲೆಗಳಲ್ಲಿಯೂ ಬೆಳಿಗ್ಗೆ ಮತ್ತು ಸಂಜೆ ವೇಳೆಯಲ್ಲಿ 3 ಗಂಟೆಗೂ ಹೆಚ್ಚು ಕಾಲ ವಿಶೇಷ ತರಗತಿಗಳನ್ನು ನಡೆಸಲಾಗುತ್ತಿದೆ.

   ಪ್ರಸಕ್ತ ಸಾಲಿನಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಫಲಿತಾಂಶವನ್ನು ಹೆಚ್ಚಿಸುವ ಉದ್ದೇಶದಿಂದ ಈಗಾಗಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಸಂಬಂಧ ಪ್ರತಿನಿತ್ಯ ಬೆಳಗ್ಗೆ ಹಾಗೂ ಸಂಜೆ ಸೇರಿ 3 ಗಂಟೆಗಳಿಗೂ ಹೆಚ್ಚು ಕಾಲ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ನಡೆಸಲಾಗುತ್ತಿದೆ. ಈ ಸಂಬಂಧ ಶಿಕ್ಷಕರು ಸರಿಯಾದ ಅನುಕ್ರಮದಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ ನೀಡಲು ಸೂಚನೆ ನೀಡಲಾಗಿದೆ.

   ಪಾಲಿಕೆ ವ್ಯಾಪ್ತಿಯಲ್ಲಿರುವ ಶಾಲಾ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವುದರ ಜೊತೆಗೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಪಾಲಿಕೆಯ ಶಾಲಾ, ಕಾಲೇಜುಗಳಲ್ಲಿ ಬೇರೆ ಜಿಲ್ಲೆ, ಬೇರೆ ರಾಜ್ಯಗಳಿಂದ ಬಂದಿರುವ ತೆಲುಗು, ಹಿಂದಿ, ತಮಿಳು ವಿದ್ಯಾರ್ಥಿಗಳೇ ಹೆಚ್ಚಿದ್ದಾರೆ. ಈ ವಿದ್ಯಾರ್ಥಿಗಳಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದು, ಕನ್ನಡ ಭಾಷೆ ಕಲಿಯುವುದು ಕಷ್ಟವಾಗಿರುವ ನಿಟ್ಟಿನಲ್ಲಿ ಆ ಭಾಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸುವ ಸಲುವಾಗಿ ಶಿಕ್ಷಕರಿಂದ ವಿಶೇಷ ತರಗತಿಗಳನ್ನು ಹಮ್ಮಿಕೊಂಡು ನುರಿತ ಶಿಕ್ಷಣವನ್ನು ನೀಡಲಾಗುತ್ತಿದೆ. ಅದಲ್ಲದೆ ಬೇರೆ ಯಾವ ವಿಷಯಗಳಲ್ಲಿ ಹಿನ್ನೆಡೆಯಿದ್ದಾರೆ ಎಂಬುದನ್ನು ಅರಿತು ಆ ವಿಷಯಕ್ಕೆ ಸಂಬಂಧಿಸಿದಂತೆ ಉತ್ತಮ ತರಬೇತಿ ನೀಡಲಾಗುತ್ತಿದೆ.

  ಶಿಕ್ಷಕರು ವಿದ್ಯಾರ್ಥಿಗಳಿಗೆ ಯಾವ ರೀತಿಯಲ್ಲಿ ಬೋದನೆ ಮಾಡುತ್ತಿದ್ದಾರೆಂಬುದುನ್ನು ತಿಳಿಯಲು ಹಿರಿಯ ಅಧಿಕಾರಿಗಳು ತಪಾಸಣೆ ನಡೆಸಲಿದ್ದರೆ, ಇಲ್ಲಿಯವರೆಗೆ, ಲಗ್ಗೆರೆ, ಶಕ್ತಿ ಗಣಪತಿ ನಗರ, ವಿಜಯನಗರ ಮತ್ತು ಮಾಗಡಿ ರಸ್ತೆ ಸೇರಿದಂತೆ ಎಂಟು ಪ್ರೌಢಶಾಲೆಗಳಲ್ಲಿ ತಪಾಸಣೆ ನಡೆಸಲಾಗಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸಮೀಪಿಸುತ್ತಿರುವ ಕಾರಣ ಅಧಿಕಾರಿಗಳು ಮೊದಲು ಎಲ್ಲಾ ಪ್ರೌಢಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ನಂತರ ಒಟ್ಟು 19 ಪದವಿ ಪೂರ್ವ ಕಾಲೇಜುಗಳಲ್ಲಿಯೂ ಪರಿಶೀಲನೆ ನಡೆಸಲಿದ್ದಾರೆಂದು ಎಂದು ತಿಳಿಸಿದೆ. 

   ಮಾರ್ಚ್ 1 ರಿಂದ 20 ರವರೆಗೆ ನಿಗದಿಯಾಗಿರುವ ಪಿಯುಸಿ ಪರೀಕ್ಷೆ -1 ಮತ್ತು ಮಾರ್ಚ್ 21 ರಿಂದ ಏಪ್ರಿಲ್ 4 ರವರೆಗೆ ನಿಗದಿಯಾಗಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆ -1 ನ್ನು ಗಮನದಲ್ಲಿಟ್ಟುಕೊಂಡು, ಬಿಎಂಟಿಸಿ ವಿದ್ಯಾರ್ಥಿಗಳಿಗೆ ಉಚಿತ ಬಸ್ ಸೇವೆಗಳನ್ನು ಒದಗಿಸುತ್ತಿದೆ.

   ಪಿಯುಸಿ ಪರೀಕ್ಷೆ -1 ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆ -1 ಕ್ಕೆ ಹಾಜರಾಗುವ ವಿದ್ಯಾರ್ಥಿಗಳು ತಮ್ಮ ಪ್ರವೇಶ ಪತ್ರವನ್ನು ಹಾಜರುಪಡಿಸಿದರೆ, ತಮ್ಮ ವಾಸಸ್ಥಳದಿಂದ ಪರೀಕ್ಷಾ ಕೇಂದ್ರಗಳಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪರೀಕ್ಷಾ ಕೇಂದ್ರಗಳ ಬಳಿ ನಿಲ್ದಾಣಗಳನ್ನು ಒದಗಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

 

Recent Articles

spot_img

Related Stories

Share via
Copy link