ದುಬೈ:
ಭಾನುವಾರ ನಡೆದ ಭಾರತ ಮತ್ತು ಪಾಕಿಸ್ತಾನ ತಂಡದ ನಡುವಿನ ಚಾಂಪಿಯನ್ಸ್ ಟ್ರೋಫಿ ಜಿದ್ದಾಜಿದ್ದಿನ ಹಣಾಹಣಿಯಲ್ಲಿ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ತೋರಿದ ಕ್ರೀಡಾಸ್ಪೂರ್ತಿಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ವಿರೋಧಿ ತಂಡ, ತಾನೊಬ್ಬ ಸ್ಟಾರ್ ಆಟಗಾರ ಎನ್ನುವ ಯಾವುದೇ ಅಹಂ ತೋರದ ಕೊಹ್ಲಿ, ಪಾಕ್ ಯುವ ವೇಗಿ ನಸೀಮ್ ಶಾ ಅವರ ಬಿಚ್ಚಿದ ಶೂ ಲೇಸ್ ಕಟ್ಟುವ ಮೂಲಕ ಕ್ರೀಡಾ ಸ್ಪೂರ್ತಿ ಮೆರೆದರು. ಪಂದ್ಯ ಆರಂಭಕ್ಕೂ ಮುನ್ನವೂ ಕೊಹ್ಲಿ ಪಾಕ್ ಆಟಗಾರರನ್ನು ಆಲಿಂಗಿಸಿ, ಕೈಲುಕಿ ಆತ್ಮೀಯವಾಗಿ ವರ್ತಿಸಿದರು.
ವಿರಾಟ್ ಕೊಹ್ಲಿ ಕ್ರೀಡಾಸ್ಪೂರ್ತಿ ಮೆರೆದರೂ ಪಾಕ್ ಆಟಗಾರರು ಮಾತ್ರ ತಮ್ಮ ಕುತಂತ್ರಿ ಬುದ್ಧಿಯನ್ನು ಮಾತ್ರ ಬಿಡಲಿಲ್ಲ. ಕೊಹ್ಲಿಗೆ ಶತಕ ತಪ್ಪಿಸುವ ನಿಟ್ಟಿನಲ್ಲಿಯೇ ಉದ್ದೇಶ ಪೂರ್ವಕವಾಗಿ ಸತತ ವೈಡ್ ಎಸೆತಗಳನ್ನು ಎಸೆದರು. ಆದರೂ ಕೊಹ್ಲಿ ಕೊನೆಗೆ ಶತಕ ಪೂರ್ತಿಗೊಳಿಸಿದರು. ಈ ಪಂದ್ಯದಲ್ಲಿ ಕೊಹ್ಲಿ ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ಸೇರಿ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದರು.
ಕಳೆದ 14 ತಿಂಗಳಿನಿಂದ ತೀವ್ರ ರನ್ ಬರಗಾಲ ಅನುಭವಿಸಿದ್ದ ಕಿಂಗ್ ಕೊಹ್ಲಿ ಈ ಪಂದ್ಯದಲ್ಲಿ ಶತಕ ಬಾರಿಸಿ ಸಂಭ್ರಮಿಸಿದರು. ಜತೆಗೆ ತಮ್ಮ ನಿವೃತ್ತಿ ಬಗ್ಗೆ ಮಾತನಾಡುತ್ತಿದ್ದವರಿಗೆ ನನ್ನಲ್ಲಿ ಇನ್ನೂ ಆಡುವ ಸಾಮರ್ಥ್ಯವಿದೆ ಎನ್ನುವ ಸ್ಪಷ್ಟ ಸಂದೇಶ ನೀಡಿದರು. ಇದು ಕೊಹ್ಲಿ ಬಾರಿಸಿದ 51ನೇ ಏಕದಿನ ಶತಕ. ಒಟ್ಟಾರೆಯಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 82ನೇ ಶತಕ.
ಲೀಲಾಜಾಲವಾಗಿ ಬ್ಯಾಟ್ ಬೀಸಿದರು. ಕೊಹ್ಲಿ ಅಂತಿಮ ಹಂತದವರೆಗೂ ಬ್ಯಾಟಿಂಗ್ ನಡೆಸಿ 111 ಎಸೆತಗಳಿಂದ ಭರ್ತಿ 100 ರನ್ ಬಾರಿಸಿ ಅಜೇಯರಾಗಿ ಉಳಿದರು. ಕೊಹ್ಲಿ(287 ಇನಿಂಗ್ಸ್) 15 ರನ್ ಗಳಿಸುತ್ತಿದ್ದಂತೆ ಏಕದಿನ ಕ್ರಿಕೆಟ್ನಲ್ಲಿ ಅತಿ ವೇಗವಾಗಿ 14 ಸಾವಿರ ಪೂರೈಸಿದ ವಿಶ್ವದ ಮೊದಲ ಬ್ಯಾಟರ್ ಎನಿಸಿಕೊಂಡರು. ಸವಿನ್ ತೆಂಡೂಲ್ಕರ್(350 ಇನಿಂಗ್ಸ್) ಮತ್ತು ಕುಮಾರ ಸಂಗಕ್ಕರ (378 ಇನಿಂಗ್ಸ್) ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿದ್ದಾರೆ.
ಫೀಲ್ಡಿಂಗ್ನಲ್ಲಿಯೂ ಮಿಂಚಿದ ಕೊಹ್ಲಿ ಏಕದಿನ ಕ್ರಿಕೆಟ್ನಲ್ಲಿ ಅತ್ಯಧಿಕ ಕ್ಯಾಚ್ ಪಡೆದ ಮೊದಲ ಭಾರತೀಯ ಹಾಗೂ ವಿಶ್ವದ ಮೂರನೇ ಫೀಲ್ಡರ್ ಎನಿಸಿಕೊಂಡರು. ಇದೇ ವೇಳೆ ಮಾಜಿ ನಾಯಕ ಹಾಗೂ ಆಟಗಾರ ಮೊಹಮ್ಮದ್ ಅಜರುದ್ದೀನ್(156) ದಾಖಲೆ ಪತನಗೊಂಡಿತು. ಕೊಹ್ಲಿ 158* ಕ್ಯಾಚ್ ಹಿಡಿದಿದ್ದಾರೆ. ವಿಶ್ವ ದಾಖಲೆ ಶ್ರೀಲಂಕಾದ ಮಾಜಿ ಆಟಗಾರ ಮಹೇಲಾ ಜಯವರ್ಧನೆ(218) ಹೆಸರಿನಲ್ಲಿದೆ.








