ಬೆಂಗಳೂರು:
ಮಹಾಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿನ ಶಿವನ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಉತ್ಸವಗಳು ನಡೆಯುತ್ತಿವೆ. ಹೀಗಾಗಿ, ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಹಲವು ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದ್ದು ಮಾರ್ಗಬದಲಾವಣೆಯನ್ನು ಬೆಂಗಳೂರು ಸಂಚಾರಿ ಪೊಲೀಸರು ತಿಳಿಸಿದ್ದಾರೆ.
ಯಮಲೂರು ಮುಖ್ಯರಸ್ತೆಯಲ್ಲಿರುವ ಶಿವನ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಹಬ್ಬ ಮತ್ತು ಊರು ಹಬ್ಬದ ಪ್ರಯುಕ್ತ ಪೂಜಾ ಹಾಗೂ ಪಲ್ಲಕ್ಕಿ ಉತ್ಸವ ಕಾರ್ಯಕ್ರಮ ನಡೆಯುತ್ತಿದೆ. ಈ ವೇಳೆ ಸಾರ್ವಜನಿಕರ ಮತ್ತು ವಾಹನ ಸವಾರರ ಹಿತದೃಷ್ಟಿಯಿಂದ ಸಂಚಾರ ಮಾರ್ಪಾಡು ಮಾಡಲಾಗಿದೆ. ಬುಧವಾರ ಬೆಳಗ್ಗೆ 06.00 ಗಂಟೆಯಿಂದ ಗುರುವಾರ ಮಧ್ಯಾಹ್ನ 03.00 ಗಂಟೆಯವರೆಗೆ ಯಮಲೂರು ಮುಖ್ಯ ರಸ್ತೆ, ವಾಹನ ಸಂಚಾರ ನಿರ್ಬಂಧಿಸಲಾಗಿದೆ.
ಪರ್ಯಾಯ ಮಾರ್ಗ:
ಯಮಲೂರು ಕೋಡಿ ಕಡೆಯಿಂದ ವರ್ತೂರು ರಸ್ತೆ ಕಡೆಗೆ ಸಂಚರಿಸುವ ವಾಹನಗಳು ಕೆಂಪಾಪುರ ಮುಖ್ಯರಸ್ತೆ ಮುಖಾಂತರ ಸಾಗಿ ರೋಹನ್ ಅಪಾರ್ಟ್ ಮೆಂಟ್ ಪಕ್ಕದ ರಸ್ತೆಗೆ ತಿರುವು ಪಡೆದು ವರ್ತೂರು ರಸ್ತೆ ಕಡೆಗೆ ಸಂಚರಿಸಬಹುದಾಗಿದೆ. ವರ್ತೂರು ರಸ್ತೆ ಕಡೆಯಿಂದ ಯಮಲೂರು ಕೋಡಿ ರಸ್ತೆ ಕಡೆಗೆ ಸಂಚರಿಸುವ ವಾಹನಗಳು ರೋಹನ್ ಅಪಾರ್ಟ್‌ಮೆಂಟ್ ಪಕ್ಕದ ರಸ್ತೆ ಮುಖಾಂತರ ಸಂಚರಿಸಿ ಕೆಂಪಾಪುರ ಮುಖ್ಯ ರಸ್ತೆಯ ಮೂಲಕ ಸಾಗಿ ಯಮಲೂರು ಕೋಡಿ ಕಡೆಗೆ ಸಂಚರಿಸಬಹುದಾಗಿದೆ.
ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಶಿವೋಹಂ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮ ನಡೆಯುತ್ತಿದೆ. ಸಾರ್ವಜನಿಕರ ಮತ್ತು ವಾಹನ ಸವಾರರ ಹಿತದೃಷ್ಟಿಯಿಂದ ಬುಧವಾರ ಬೆಳಗ್ಗೆ 05.00 ಗಂಟೆಯಿಂದ ರಾತ್ರಿ 12.00 ಗಂಟೆಯವರೆಗೆ, ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗುವ ಸಂಭವ ಇರುವುದರಿಂದ ಈ ರಸ್ತೆಯ ಬದಲಾಗಿ ಪರ್ಯಾಯ ರಸ್ತೆಗಳಾದ ಸುರಂಜನ್ ದಾಸ್ ರಸ್ತೆ, ಹಳೇ ಮದ್ರಾಸ್ ರಸ್ತೆ ಮತ್ತು ಜೆ.ಬಿ.ನಗರ ಮುಖ್ಯ ರಸ್ತೆಗಳಲ್ಲಿ ಸಂಚಾರ ಮಾಡಬಹುದಾಗಿದೆ.
ವಾಹನ ನಿಲುಗಡೆ ಸ್ಥಳಗಳು:
ದೇವಸ್ಥಾನಕ್ಕೆ ವಾಹನಗಳಲ್ಲಿ ಆಗಮಿಸುವ ಭಕ್ತಾದಿಗಳಿಗೆ ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ಸರ್.ಎಂ ವಿಶ್ವೇಶ್ವರಯ್ಯ ಕಾಲೇಜು ಮೈದಾನ. ಹಳೇ ವಿಮಾನ ನಿಲ್ದಾಣ ರಸ್ತೆ ಇಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ .ಕಾಡುಬೀಸನಹಳ್ಳಿ ಜಂಕ್ಷನ್‌ನಲ್ಲಿ ಸಂಚಾರ ದಟ್ಟಣೆಯನ್ನು ನಿಯಂತ್ರಿಸುವ ಸಂಬಂಧ, ಶುಕ್ರವಾರ (ಫೆ.28) ರಿಂದ ಮಾರ್ಚ್ 7ರವರೆಗೆ ಕಾಡುಬೀಸನಹಳ್ಳಿ ಜಂಕ್ಷನ್ ಕಡೆಯಿಂದ ಕರಿಯಮ್ಮನ ಅಗ್ರಹಾರ ಕಡೆಗೆ ಸಂಚರಿಸುವ ಎಲ್ಲಾ ಮಾದರಿಯ ವಾಹನಗಳನ್ನು ನಿರ್ಬಂಧಿಸಲಾಗಿದೆ.
ಪರ್ಯಾಯ ಮಾರ್ಗ:
ಕಾಡುಬೀಸನಹಳ್ಳಿ ಜಂಕ್ಷನ್ ಕಡೆಯಿಂದ ಕರಿಯಮ್ಮನ ಅಗ್ರಹಾರ ಕಡೆಗೆ ಸಂಚರಿಸುವ ವಾಹನಗಳು ದೇವರಬೀಸನಹಳ್ಳಿ ಜಂಕ್ಷನ್ ಕಡೆಗೆ ಸಂಚರಿಸಿ ಯು ಟರ್ನ್ ಪಡೆದು ಸಕ್ರಾ ಆಸ್ಪತ್ರೆ ಮುಖ್ಯ ರಸ್ತೆ ಮೂಲಕ ಕರಿಯಮ್ಮನ ಅಗ್ರಹಾರ ಕಡೆಗೆ ಸಂಚರಿಸಬಹುದಾಗಿದೆ.








