ಬೆಂಗಳೂರು :
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳೆಯರ ಆರೋಗ್ಯದ ಕುರಿತು ವಿಶೇಷವಾಗಿ ಸ್ತನ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸಲು ಸಂಭ್ರಮ ಶಿಕ್ಷಣ ಸಂಸ್ಥೆ ಮತ್ತು ಇಂಡಿಯನ್ ಕ್ಯಾನ್ಸರ್ ಸೊಸೈಟಿ ವತಿಯಿಂದ ‘ಪಿಂಕ್ ವಾಕಥಾನ್’ ಕಾಲ್ನಡಿಗೆ ಜಾಥಾ ನಡೆಸಲಾಯಿತು.
ಇಂಡಿಯನ್ ಕ್ಯಾನ್ಸರ್ ಸೊಸೈಟಿ ಸಂವಹನ ಮುಖ್ಯಸ್ಥರಾದ ಅಮರಿಂದರ್ ಕೌರ್ ‘ಪಿಂಕ್ ವಾಕಥಾನ್’ ಕಾಲ್ನಡಿಗೆ ಜಾಥಾ ಉದ್ಘಾಟಿಸಿ ಮಾತನಾಡಿದ್ದು “ಇತ್ತೀಚೆಗೆ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಕಾಡುತ್ತಿದೆ,ಸ್ತನ ಕ್ಯಾನ್ಸರ್ನಿಂದಾಗಿ 2022 ರಲ್ಲಿ ಭಾರತದಲ್ಲೇ 98 ಸಾವಿರ ಮಹಿಳೆಯರು ಸಾವೀಗಿಡಾಗಿದ್ದಾರೆ. ಮಹಿಳೆಯರು ಸತತವಾಗಿ ಆರೋಗ್ಯ ತಪಾಸಣೆಗಳನ್ನು ಮಾಡಿಸಿದರೆ ಪ್ರಾಥಮಿಕ ಹಂತದಲ್ಲೇ ಈ ಸಮಸ್ಯೆಗಳನ್ನು ಕಂಡುಕೊಳ್ಳಬಹುದು,ಮತ್ತು ಸೂಕ್ತ ಚಿಕಿತ್ಸೆಯಿಂದ ಪರಿಹಾರ ಕಂಡುಕೊಳ್ಳಬಹದು.ಆದರೆ ಸುಮಾರು ಮಹಿಳೆಯರಲ್ಲಿ ಮಾಹಿತಿ ಕೊರತೆ,ನಿರ್ಲಕ್ಷ್ಯದಿಂದ ಸಮಸ್ಯೆ ಎದುರಿಸುವಂತಾಗಿದೆ.ಆ ನಿಟ್ಟಿನಲ್ಲಿ ಈ ರೀತಿಯ ಜಾಗೃತಿ ಕಾರ್ಯಕ್ರಮ ಅವಶ್ಯಕವಾಗಿದೆ.ಸಾರ್ವಜನಿಕರಿಗೆ ಮತ್ತಷ್ಟು ಆರೋಗ್ಯ ಜಾಗೃತಿ ಮೂಡಬೇಕು” ಎಂದು ತಿಳಿಸಿದರು.
ಸಂಭ್ರಮ ಶಿಕ್ಷಣ ಸಂಸ್ಥೆಯಿಂದ ಎಂ.ಎಸ್.ಪಾಳ್ಯ ವರೆಗಿನ 2 ಕಿ.ಮೀ ಕಾಲ್ನಡಿಗೆ ವಾಕ್ಥಾನ್ನಲ್ಲಿ ಸುಮಾರು 600 ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿ ಜಾಗೃತಿ ಮೂಡಿಸಿದರು.ಈ ಸಂದರ್ಭದಲ್ಲಿ ಎಂ.ಎಸ್.ರಾಮಯ್ಯ ಕಾಲೇಜ್ ಗ್ರಂಥಿಶಾಸ್ತ್ರಜ್ಞ ಡಾ.ಲಿಖಿತ ಲಾವಣ್ಯ,ಗಾಯತ್ರಿ ವೆಂಕಟೇಶ್,ಸಂತೋಷ್ ಕುಮಾರ್, ಸಂಭ್ರಮ ಶಿಕ್ಷಣ ಸಂಸ್ಥೆ ಮುಖ್ಯಸ್ಥರಾದ ಡಾ.ನಾಗರಾಜ್ ಉಪಸ್ಥಿತರಿದ್ದರು.
