ಚಂಡೀಗಢ:
ಹರಿಯಾಣದ 10 ಮೇಯರ್ ಸ್ಥಾನಗಳ ಪೈಕಿ ಒಂಬತ್ತು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷ ಭರ್ಜರಿ ಜಯಭೇರಿ ಬಾರಿಸಿದೆ. ವಿರೋಧ ಪಕ್ಷದ ಹಿರಿಯ ರಾಜ್ಯ ನಾಯಕರಲ್ಲಿ ಒಬ್ಬರಾದ ಭೂಪಿಂದರ್ ಹೂಡಾ ಅವರ ಭದ್ರಕೋಟೆಯಾದ ಗುರುಗ್ರಾಮ್ ಮತ್ತು ರೋಹ್ಟಕ್‌ನಲ್ಲಿ ಕಾಂಗ್ರೆಸ್ ಸತತ ಎರಡನೇ ಸೋಲನ್ನು ಕಂಡಿದೆ. ಗುರುಗ್ರಾಮ್, ಹಿಸಾರ್, ಕರ್ನಾಲ್, ರೋಹ್ಟಕ್, ಫರಿದಾಬಾದ್, ಯಮುನಾನಗರ, ಪಾಣಿಪತ್, ಅಂಬಾಲ ಮತ್ತು ಸೋನಿಪತ್‌ಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು, ಮಾನೇಸರ್ ನಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಸ್ವತಂತ್ರ ಅಭ್ಯರ್ಥಿ ಡಾ. ಇಂದರ್ಜಿತ್ ಯಾದವ್ ಸೋಲಿಸಿದ್ದಾರೆ.
ಮಾರ್ಚ್ 2 ರಂದು ಮಾನೇಸರ್, ಗುರುಗ್ರಾಮ್, ಫರಿದಾಬಾದ್, ಹಿಸಾರ್, ರೋಹ್ಟಕ್, ಕರ್ನಾಲ್, ಯಮುನಾನಗರ, ಪಾಣಿಪತ್, ಅಂಬಾಲ ಮತ್ತು ಸೋನಿಪತ್ ನಗರ ಪಾಲಿಕೆಗಳಲ್ಲಿ ಮೇಯರ್ ಮತ್ತು ವಾರ್ಡ್ ಸದಸ್ಯರ ಹುದ್ದೆಗಳಿಗೆ ಚುನಾವಣೆ ನಡೆದಿತ್ತು. ಅಂಬಾಲ ಮತ್ತು ಸೋನಿಪತ್ ಪುರಸಭೆಗಳ ಮೇಯರ್ ಹುದ್ದೆಗೆ ಉಪಚುನಾವಣೆಗಳು ನಡೆದಿದ್ದವು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅನಿರೀಕ್ಷಿತ ಸೋಲು ಕಂಡಿದ್ದ ಕಾಂಗ್ರೆಸ್, ಈಗ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲೂ ಸೋಲು ಅನುಭವಿಸಿದೆ. ಭೂಪಿಂದರ್ ಹೂಡಾ ಅವರ ಭದ್ರಕೋಟೆಯಾದ ಗುರುಗ್ರಾಮ್ ಮತ್ತು ರೋಹ್ಟಕ್‌ನಲ್ಲಿ ಕೂಡ ಕಾಂಗ್ರೆಸ್ ಸೋಲನ್ನು ಕಂಡಿದೆ. ಸೋಲಿನ ಬಗ್ಗೆ ಮಾತನಾಡಿರುವ ಹೂಡಾ, ‘ಹಿಂದೆಯೂ ಸಹ ಪುರಸಭೆಯ ನಿಗಮಗಳಲ್ಲಿ ಬಿಜೆಪಿ ಪ್ರಾಬಲ್ಯ ಹೊಂದಿತ್ತು. ನಾವು ಸ್ಥಾನ ಕಳೆದುಕೊಂಡರೆ ಅದು ಹಿನ್ನಡೆಯಾಗಬಹುದು ಎಂದು ಹೇಳಲಾಗಿತ್ತು. ಆದರೆ ಅದು ಈ ಹಿಂದೆಯೇ ನಮ್ಮೊಂದಿಗೆ ಇರಲಿಲ್ಲ. ಕಾಂಗ್ರೆಸ್ ಕೆಲವು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿರಬೇಕು. ಆದರೆ ಚುನಾವಣೆಯ ಸಮಯದಲ್ಲಿ ನಾನು ಎಲ್ಲಿಯೂ ಪ್ರಚಾರಕ್ಕೆ ಹೋಗಿರಲಿಲ್ಲ ಎಂದು ಹೇಳಿದ್ದಾರೆ.
ಇನ್ನು ಭರ್ಜರಿ ಗೆಲುವಿನ ಬಳಿಕ ಮಾತನಾಡಿದ ಮುಖ್ಯಮಂತ್ರಿ ಸೈನಿ ನಾನು ಜನರಿಗೆ ನನ್ನ ಹೃದಯದಾಳದಿಂದ ಧನ್ಯವಾದ ಹೇಳುತ್ತೇನೆ. ನಮ್ಮ ಸ್ಥಳೀಯ ಸಂಸ್ಥೆ ಸರ್ಕಾರ ಮತ್ತು ಈ ‘ತ್ರಿವಳಿ-ಎಂಜಿನ್’ ಸರ್ಕಾರವು ಪ್ರಧಾನಿ ನರೇಂದ್ರ ಮೋದಿಯವರ ‘ವಿಕಸಿತ ಭಾರತ’, ‘ಅಭಿವೃದ್ಧಿ ಹೊಂದಿದ ಭಾರತ’ದ ದೃಷ್ಟಿಕೋನವನ್ನು ಈಡೇರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ಹೇಳಿದ್ದಾರೆ.
