ಅನಿರ್ದಿಷ್ಟಾವಧಿ ಉಪವಾಸ ಅಂತ್ಯಗೊಳಿಸಿದ ರೈತ ನಾಯಕ ದಲ್ಲೆವಾಲ್….!

ನವದೆಹಲಿ:

    ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ರೈತ ನಾಯಕ ಜಗಜಿತ್ ಸಿಂಗ್ ದಲ್ಲೆವಾಲ್ ಅವರು ಶುಕ್ರವಾರ ಬೆಳಗ್ಗೆ ನೀರು ಕುಡಿಯುವ ಮೂಲಕ ಉಪವಾಸ ಅಂತ್ಯಗೊಳಿಸಿದ್ದಾರೆ ಎಂದು ಪಂಜಾಬ್ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

   ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಎನ್ ಕೋಟೀಶ್ವರ್ ಸಿಂಗ್ ಅವರ ಪೀಠಕ್ಕೆ ಮಾಹಿತಿ ನೀಡಿದ ಪಂಜಾಬ್ ಪರ ಅಡ್ವೊಕೇಟ್ ಜನರಲ್ ಗುರ್ಮಿಂದರ್ ಸಿಂಗ್ ಅವರು, ಖಾನೌರಿ ಮತ್ತು ಶಂಭು ಗಡಿಗಳಲ್ಲಿ ಪ್ರತಿಭಟನಾ ನಿರತ ರೈತರನ್ನು ಚದುರಿಸಲಾಗಿದೆ ಮತ್ತು ಎಲ್ಲಾ ನಿರ್ಬಂಧಿತ ರಸ್ತೆಗಳು ಹಾಗೂ ಹೆದ್ದಾರಿಗಳನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ ಎಂದು ಹೇಳಿದರು.

   ದಲ್ಲೆವಾಲ್ ಅವರ ಪ್ರಯತ್ನಗಳನ್ನು ಶ್ಲಾಘಿಸಿದ ಪೀಠ, ಅವರು ಯಾವುದೇ ರಾಜಕೀಯ ಕಾರ್ಯಸೂಚಿಯಿಲ್ಲದ ನಿಜವಾದ ರೈತ ನಾಯಕ ಎಂದು ಹೇಳಿದೆ. “ಕೆಲವು ಜನ ರೈತರ ಕುಂದುಕೊರತೆಗಳನ್ನು ಇತ್ಯರ್ಥಪಡಿಸಲು ಬಯಸಲಿಲ್ಲ ಎಂದು ನಮಗೆ ಗೊತ್ತು. ನಾವು ದಂತ ಗೋಪುರದಲ್ಲಿ ಕುಳಿತಿಲ್ಲ. ನಮಗೆ ಎಲ್ಲವೂ ತಿಳಿದಿದೆ” ಎಂದ ಸುಪ್ರೀಂ ಪೀಠ, ಪ್ರಸ್ತುತ ಶಂಭು ಮತ್ತು ಖಾನೌರಿ ಗಡಿಯಲ್ಲಿನ ಪರಿಸ್ಥಿತಿಯ ಬಗ್ಗೆ ವರದಿ ಸಲ್ಲಿಸುವಂತೆ ಪಂಜಾಬ್ ಮತ್ತು ಹರಿಯಾಣ ಸರ್ಕಾರಕ್ಕೆ ಸೂಚಿಸಿದೆ.

   ಮಾಜಿ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದ ಉನ್ನತ ಅಧಿಕಾರ ಸಮಿತಿಯು ರೈತರ ಕುಂದುಕೊರತೆಗಳನ್ನು ಪರಿಶೀಲಿಸುವಂತೆ ಮತ್ತು ಪೂರಕ ಸ್ಥಿತಿಗತಿ ವರದಿಯನ್ನು ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ.ಇದೇ ವೇಳೆ ದಲ್ಲೆವಾಲ್‌ಗೆ ವೈದ್ಯಕೀಯ ನೆರವು ನೀಡುವ ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸದ ಪಂಜಾಬ್ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರ ವಿರುದ್ಧದ ನ್ಯಾಯಾಂಗ ನಿಂದನೆ ಕ್ರಮಗಳನ್ನು ಸಹ ಕೈಬಿಟ್ಟಿದೆ.

 

Recent Articles

spot_img

Related Stories

Share via
Copy link