ಇಂದು ಭಾರತಕ್ಕೆ ತಹವ್ವುರ್ ರಾಣಾ ಹಸ್ತಾಂತರ

ವಾಷಿಂಗ್ಟನ್‌:

    ಪಾಕಿಸ್ತಾನ ಮೂಲದ ಉಗ್ರ ಹಾಗೂ 26/11 ಮುಂಬೈ ಭಯೋತ್ಪಾದಕ ದಾಳಿಯ ಪ್ರಮುಖ ಆರೋಪಿ ತಹವ್ವುರ್ ರಾಣಾನನ್ನು  ಬುಧವಾರ (ಏಪ್ರಿಲ್ 9) ಭಾರತಕ್ಕೆ ಹಸ್ತಾಂತರಿಸುವ ನಿರೀಕ್ಷೆಯಿದೆ. ಏಪ್ರಿಲ್ 7 ರಂದು ಅಮೆರಿಕದ ಸುಪ್ರೀಂ ಕೋರ್ಟ್ ರಾಣಾ ಮನವಿ ಮಾಡಿದ್ದ ಗಡಿಪಾರು ತಡೆ ಕೋರಿದ ಅರ್ಜಿಯನ್ನು ತಿರಸ್ಕರಿಸಿದ ನಂತರ ಈ ಬೆಳವಣಿಗೆ ನಡೆದಿದೆ. ರಾಣಾ ಹಸ್ತಾಂತರದ ಬಳಿಕ NIA ಅಧಿಕಾರಿಗಳು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಿದ್ದಾರೆ. ಅಮೆರಿಕದ ನ್ಯಾಯಾಲಯದ ಶಿಫಾರಸ್ಸಿನಂತೆ ದಿಲ್ಲಿ ಮತ್ತು ಮುಂಬಯಿನ ಜೈಲಿನಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

    ಭಾರತ ಸರ್ಕಾರಿ ಮೂಲಗಳ ಪ್ರಕಾರ, ಭಾರತದಿಂದ NIA ಅಧಿಕಾರಿಗಳ ತಂಡ ಮೆರಿಕಕ್ಕೆ ಹೋಗಿದ್ದು, ಎಲ್ಲಾ ದಾಖಲೆಗಳು ಮತ್ತು ಕಾನೂನುಬದ್ಧತೆಗಳನ್ನು ಅಮೆರಿಕದ ಅಧಿಕಾರಿಗಳೊಂದಿಗೆ ಪೂರ್ಣಗೊಳಿಸಲಾಗುತ್ತಿದೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಗೃಹ ಸಚಿವಾಲಯದ ಅಧಿಕಾರಿಗಳು ‌ತಹವ್ವುರ್ ರಾಣಾ ಮೇಲ್ವಿಚಾರಣೆ ನಡೆಯಲಿದೆ. 2019ರಿಂದ ಮೋದಿ ಸರ್ಕಾರವು ರಾಣಾನನ್ನು ಭಾರತಕ್ಕೆ ಕರೆತರುವ ಪ್ರಯತ್ನ ಮಾಡುತ್ತಿತ್ತು. ಸತತ ಪ್ರಯತ್ನದ ಫಲವಾಗಿ ಅಮೆರಿಕ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರಾಣಾನನ್ನು ಭಾರತಕ್ಕೆ ಕಳುಹಿಸಲು ಒಪ್ಪಿಗೆ ನೀಡಿದ್ದಾರೆ. 

    ಲಷ್ಕರ್-ಎ-ತೊಯ್ಬಾ   ಸಂಘಟನೆಯ ಸಕ್ರಿಯ ಸದಸ್ಯನಾದ ತಹವ್ವುರ್ ರಾಣಾ, ಡೇವಿಡ್ ಹೆಡ್ಲಿ ಆತ್ಮೀಯ ಎಂದು ವರದಿಯಾಗಿದೆ. 2008ರ ನವೆಂಬರ್ 26ರ ಮುಂಬೈ ದಾಳಿಯ ಮಾಸ್ಟರ್‌ ಮೈಂಡ್‌ ಈತನೇ ಎಂದು ತಿಳಿದು ಬಂದಿತ್ತು. ಈತ ಪಾಕಿಸ್ತಾನಿ ಮೂಲದ ಕೆನಡಾದ ಪ್ರಜೆಯಾಗಿದ್ದಾನೆ. 2008 ರಲ್ಲಿ ಮುಂಬೈನ ತಾಜ್‌ ಹೋಟೆಲ್‌ ಮೇಲೆ ನಡೆದ ದಾಳಿಯಲ್ಲಿ 166 ಜನ ಅಮಾಯಕರು ಜೀವ ಬಿಟ್ಟಿದ್ದರು. ಈ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪವನ್ನು ಹೊತ್ತಿದ್ದಾನೆ. ದಾಳಿಯ ಹಿಂದಿನ ಮಾಸ್ಟರ್‌ಮೈಂಡ್‌ಗಳಲ್ಲಿ ಒಬ್ಬನಾಗಿದ್ದ ಪಾಕಿಸ್ತಾನಿ-ಅಮೆರಿಕನ್ ಭಯೋತ್ಪಾದಕ ಡೇವಿಡ್ ಕೋಲ್ಮನ್ ಹೆಡ್ಲಿಯೊಂದಿಗೆ ಈತ ಸಂಪರ್ಕ ಹೊಂದಿದ್ದ ಎಂದು ತನಿಖೆಯಲ್ಲಿ ತಿಳಿದು ಬಂದಿದೆ. 

    2024ರಲ್ಲಿಯೇ ಭಾರತಕ್ಕೆ ತಹವ್ವುರ್ ಹುಸೇನ್ ರಾಣಾನನ್ನು ಹಸ್ತಾಂತರ ಮಾಡಲಾಗುತ್ತದೆ ಎಂಬ ಮಾಹಿತಿ ಇತ್ತು. ಆದರೆ ಈ ಪ್ರಕ್ರಿಯೆಗಳನ್ನು ಕೈಗೊಳ್ಳಲು ಅಮೆರಿಕ ಸುಪ್ರೀಂಕೋರ್ಟ್ ಒಪ್ಪಿಗೆ ನೀಡಿರಲಿಲ್ಲ. ಸೆಪ್ಟೆಂಬರ್‌ನಲ್ಲಿ ಗಡಿಪಾರು ಮಾಡದಂತೆ ಕೋರಿ ತಹವ್ವುರ್ ಹುಸೇನ್ ರಾಣಾ ಸಲ್ಲಿಕೆ ಮಾಡಿದ್ದ ಮನವಿಯನ್ನು ಕೋರ್ಟ್ ವಜಾಗೊಳಿಸಿತ್ತು. ಹಸ್ತಾಂತರ ಒಪ್ಪಂದದ ಅಡಿಯಲ್ಲಿ ಭಾರತಕ್ಕೆ ಹಸ್ತಾಂತರ ಮಾಡಲು ಅವಕಾಶವಿದೆ ಎಂದು ಹೇಳಿತ್ತು. ಜನವರಿ 21 ರಂದು, ಅಮೆರಿಕದ ಸುಪ್ರೀಂ ಕೋರ್ಟ್ ರಾಣಾ ಸಲ್ಲಿಸಿದ್ದ ಪರಿಶೀಲನಾ ಅರ್ಜಿಯನ್ನು ತಿರಸ್ಕರಿಸಿತು. ಕಳೆದ ತಿಂಗಳು, ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರಾಣಾನನ್ನು ಗಡಿಪಾರು ಮಾಡಲು ತಮ್ಮ ಆಡಳಿತ ಅನುಮೋದನೆ ನೀಡಿದೆ ಎಂದು ಘೋಷಿಸಿದ್ದರು.

Recent Articles

spot_img

Related Stories

Share via
Copy link