ಬೆಂಗಳೂರು:
ಕನ್ನಡ ಸಿನಿಮಾಗಳಲ್ಲಿ ನಟಿಸಿ ಜನರನ್ನು ನಕ್ಕು-ನಗಿಸಿದ ಹಾಸ್ಯ ನಟ ಬ್ಯಾಂಕ್ ಜನಾರ್ದನ್ (76) ಅವರು ನಿಧನರಾಗಿದ್ದಾರೆ. ಮಧ್ಯರಾತ್ರಿ 2.30ರ ಸುಮಾರಿಗೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಟ ಬ್ಯಾಂಕ್ ಜನಾರ್ದನ್ ಅವರು ಕೊನೆಯುಸಿರೆಳೆದಿದ್ದಾರೆ. ಇಂದು ಬೆಳಗ್ಗೆ 10 ಗಂಟೆಗೆ ನಟ ಬ್ಯಾಂಕ್ ಜನಾರ್ಧನ್ ಅವರ ಮನೆ ಬಳಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಕೆಲ ತಿಂಗಳ ಹಿಂದಷ್ಟೇ ಬ್ಯಾಂಕ್ ಜನಾರ್ದನ್ ಅವರಿಗೆ ಹೃದಯಾಘಾತ ಸಂಭವಿಸಿತ್ತು. ಕಳೆದ 40 ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. ಸುಮಾರು 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ ಸಿನಿಮಾ, ಕಿರುತೆರೆ ಮತ್ತು ರಂಗಭೂಮಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು ಜನಾರ್ದನ್. ಹಾಸ್ಯ ನಟರಾಗಿ ಸಾಕಷ್ಟು ಪಾತ್ರಗಳನ್ನು ಅವರು ನಿರ್ವಹಿಸಿದ್ದಾರೆ.
ಉಪೇಂದ್ರ ನಿರ್ದೇಶನದ ಶ್ ಸಿನಿಮಾ, ತರ್ಲೆ ನನ್ ಮಗ , ಬೆಳ್ಳಿಯಪ್ಪ ಬಂಗಾರಪ್ಪ, ಗಣೇಶ ಸುಬ್ರಹ್ಮಣ್ಯ, ಗೌರವ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಬ್ಯಾಂಕ್ ಜನಾರ್ದನ್ ಗಮನ ಸೆಳೆದಿದ್ದಾರೆ. ಬ್ಯಾಂಕ್ ಜನಾರ್ದನ್ ಇದ್ದಲ್ಲಿ ನಗುವಿಗೆ ಕೊರತೆ ಇರಲಿಲ್ಲ. ಸಿನಿಮಾಗಳ ಬಳಿಕ ಟಿವಿ ಸೀರಿಯಲ್ಗಳಲ್ಲಿಯೂ ನಟ ಬ್ಯಾಂಕ್ ಜನಾರ್ದನ್ ಜನರನ್ನು ನಗಿಸಿದ್ದಾರೆ. ಪಾಪ ಪಾಂಡು, ಮಾಂಗಲ್ಯ, ರೋಬೋ ಫ್ಯಾಮಿಲಿ, ಜೋಕಾಲಿ ಸೀರಿಯಲ್ನಲ್ಲಿ ಬ್ಯಾಂಕ್ ಜನಾರ್ದನ್ ಕಾಣಿಸಿಕೊಂಡಿದ್ರು.








