ಶ್ರೀನಗರ:
ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಕ್ರೂರ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನ ವಿರುದ್ಧ ಖಡಕ್ ರಾಜತಾಂತ್ರಿಕ ನಿರ್ಧಾರ ತೆಗೆದುಕೊಂಡಿರುವ ಭಾರತ ದೆಹಲಿಯಲ್ಲಿರುವ ಪಾಕ್ ರಾಜತಾಂತ್ರಿಕ ಅಧಿಕಾರಿ ಸಾದ್ ಅಹ್ಮದ್ ವಾರೈಚ್ ಅವರಿಗೆ ಸಮನ್ಸ್ ಜಾರಿಗೊಳಿಸಿದೆ. ರಾತ್ರೋರಾತ್ರಿ ಪಾಕ್‌ನ ಎಲ್ಲಾ ಮಿಲಿಟಲಿ ಅಧಿಕಾರಿಗಳ ವಿರುದ್ದ ವಿದೇಶಾಂಗ ಸಚಿವಾಲಯ ಜಾರಿಗೊಳಿಸಿರುವ ಪರ್ಸೋನಾ ನಾನ್ ಗ್ರಾಟಾ ನೋಟ್ ಅನ್ನು ವಾರೈಚ್ ಅವರಿಗೆ ಹಸ್ತಾಂತರಿಸಲಾಗಿದೆ.
ಆ ಮೂಲಕ ಭಾರತದಲ್ಲಿರುವ ಪಾಕಿಸ್ತಾನಿ ರಕ್ಷಣಾ, ನೌಕಾ ಮತ್ತು ವಾಯುಪಡೆ ಸಲಹೆಗಾರರು ತಕ್ಷಣ ಭಾರತದಿಂದ ಜಾಗ ಖಾಲಿ ಮಾಡಬೇಕಿದೆ. ಅವರಿಗೆಒಂದು ವಾರದ ಸಮಯಾವಕಾಶ ನೀಡಲಾಗಿದೆ. ಅಲ್ಲದೇ ಇಸ್ಲಮಾಬಾದ್‌ನಲ್ಲಿರುವ ಭಾರತೀಯ ಅಧಿಕಾರಿಗಳನ್ನೂ ತಕ್ಷಣ ಕರೆಸಿಕೊಳ್ಳಲು ಭಾರತ ನಿರ್ಧರಿಸಿದೆ.
ಪಹಲ್ಗಾಮ್ ನಲ್ಲಿ ಮಂಗಳವಾರ ನಡೆದ ಉಗ್ರರ ದಾಳಿಯ ನಂತರ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಅವರ ನಿವಾಸದಲ್ಲಿ ಹೈವೋಲ್ಟೇಜ್ ಸಭೆ ನಡೆದಿದೆ. ಎರಡುವರೆಗೆ ಗಂಟೆಗಳ ಕಾಲ ಸಭೆ ನಡೆಸಲಾಗಿದೆ. ಸಭೆಯ ನಂತರ ವಿದೇಶಾಂಗ ಇಲಾಖೆ ಪತ್ರಿಕಾಗೋಷ್ಠಿ ನಡೆಸಿದ್ದು, ಹಲವು ಮಹತ್ವದ ವಿಚಾರಗಳನ್ನು ತಿಳಿಸಿದೆ. ಭಾರತ ಪಾಕಿಸ್ತಾನದ ವಿರುದ್ಧ ರಾಜತಾಂತ್ರಿಕ ಯುದ್ಧವನ್ನು ಸಾರಿದೆ. ಸಿಂಧೂ ನದಿ ಒಪ್ಪಂದವನ್ನು ಅಂತ್ಯಗೊಳಿಸಲು ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. ಪಾಕ್‌ಗೆ ದೊಡ್ಡ ಆಘಾತ ನೀಡಿರುವ ಭಾರತ ಪಾಕಿಸ್ತಾನದ ರಾಜತಾಂತ್ರಿಕ ಅಧಿಕಾರಿಗಳಿಗೆ ಭಾರತವನ್ನು ತೊರೆಯಲು ಸೂಚಿಸಿದೆ.
ಸುಮಾರು ಎರಡುವರೆಗೆ ಗಂಟೆಗಳ ಕಾಲ ಉನ್ನತ ಮಟ್ಟದ ಸಭೆ ನಡೆಸಲಾಗಿದ್ದು, ಕೆಲವು ಮಹತ್ವದ ಕಠಿಣ ನಿರ್ಧಾರಗಳನ್ನು ಮಾಡಲಾಗಿದೆ. ಪಹಲ್ಗಾಮ್ ದಾಳಿಯ ಬೆನ್ನಲ್ಲಿಯೇ ಮೊಟ್ಟಮೊದಲ ಹಂತವಾಗಿ ರಾಜತಾಂತ್ರಿಕವಾಗಿ ಕೆಲವು ನಿರ್ಧಾರಗಳನ್ನು ಮಾಡಲಾಗಿದೆ. ಪ್ರಮುಖವಾಗಿ ಸಭೆಯಲ್ಲಿ 5 ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.
- ಸಿಂಧೂ ನದಿ ನೀರು ಒಪ್ಪಂದವನ್ನು ಸ್ಥಗಿತ: 1960 ರಲ್ಲಿ ಮಾಡಿಕೊಂಡಿದ್ದ ಸಿಂಧೂ ನದಿ ನೀರು ಒಪ್ಪಂದವನ್ನು ಈ ಕೂಡಲೇ ರದ್ದು ಮಾಡಲಾಗುವುದು ಎಂದು ವಿದೇಶಾಂಗ ಇಲಾಖೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದೆ.
- ಅಟ್ಟಾರಿ ಗಡಿ ಬಂದ್: ಅಟ್ಟಾರಿ ಗಡಿಯನ್ನು ಬಂದ್ ಮಾಡುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದ್ದು, ಅಲ್ಲಿ ನಡೆಯುತ್ತಿದ್ದ ಎಲ್ಲಾ ಸೇನಾ ಕಾರ್ಯಕ್ರಮಗಳನ್ನು ರದ್ದು ಮಾಡುವಂತೆ ತಿಳಿಸಿದೆ. ಒಪ್ಪಿಗೆಯೊಂದಿಗೆ ಇಲ್ಲಿಂದ ಗಡಿಯನ್ನು ದಾಟಿದವರು ಮೇ 1 ರ ಒಳಗಾಗಿ ಈ ಮಾರ್ಗದ ಮೂಲಕವೇ ವಾಪಾಸಗಬೇಕು ಎಂದು ತಿಳಿಸಲಾಗಿದೆ.
- ವೀಸಾ ರದ್ದು: ಸಾರ್ಕ್ ವೀಸಾ ವಿನಾಯಿತಿ ಯೋಜನೆಯಡಿಯಲ್ಲಿ ಪಾಕಿಸ್ತಾನಿ ಪ್ರಜೆಗಳಿಗೆ ಭಾರತಕ್ಕೆ ಪ್ರಯಾಣಿಸಲು ಇನ್ನುಮುಂದೆ ಅನುಮತಿ ಇರುವುದಿಲ್ಲ. ಪಾಕಿಸ್ತಾನಿ ಪ್ರಜೆಗಳಿಗೆ ಹಿಂದೆ ನೀಡಲಾದ ಎಲ್ಲಾ SPES ವೀಸಾಗಳನ್ನು ರದ್ದುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ. ಪ್ರಸ್ತುತ ಭಾರತದಲ್ಲಿರುವ ಪಾಕಿಸ್ತಾನದವರಿಗೆ ಭಾರತವನ್ನು ತೊರೆಯಲು 48 ಗಂಟೆಗಳ ಗಡುವನ್ನು ನೀಡಲಾಗಿದೆ. ಸರ್ಕಾರದ ಎದುರು ಮಿಲಿಟರಿ ಕ್ರಮದ ಆಯ್ಕೆಯೂ ಇದ್ದು, ಇದರ ಬಗ್ಗೆಯೂ ಸಿಸಿಎಸ್‌ನಲ್ಲಿ ಚರ್ಚೆಯಾಗಿದೆ. ಈ ಬಗ್ಗೆ ವಿದೇಶಾಂಗ ವ್ಯವಹಾರಗಳ ಇಲಾಖೆ ಯಾವುದೇ ಮಾಹಿತಿಯನ್ನು ನೀಡಿಲ್ಲ.
- ನವದೆಹಲಿಯಲ್ಲಿರುವ ಪಾಕಿಸ್ತಾನಿ ಹೈಕಮಿಷನ್‌ನಲ್ಲಿರುವ ರಕ್ಷಣಾ, ಮಿಲಿಟರಿ, ನೌಕಾ ಮತ್ತು ವಾಯು ಸಲಹೆಗಾರರನ್ನು ಪರ್ಸನಾ ನಾನ್ ಗ್ರಾಟಾ ಎಂದು ಘೋಷಿಸಲಾಗಿದೆ. ಅವರು ಭಾರತವನ್ನು ಬಿಡಲು ಒಂದು ವಾರ ಕಾಲಾವಕಾಶ ನೀಡಲಾಗಿದೆ.
- ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್‌ನ ಸೇನಾಪಡೆ, ನೌಕಾಪಡೆ ಮತ್ತು ವಾಯುಪಡೆಯ ಅಧಿಕಾರಿಗಳನ್ನು ಭಾರತ ವಾಪಾಸ್ ಕರೆಸಿಕೊಳ್ಳಲಿದೆ. ಆಯಾ ಹೈಕಮಿಷನ್‌ಗಳಲ್ಲಿನ ಈ ಹುದ್ದೆಗಳನ್ನು ರದ್ದುಗೊಳಿಸಲಾಗಿದೆ. ಆಯಾ ಹೈಕಮಿಷನ್‌ಗಳ ಒಟ್ಟಾರೆ ಬಲವನ್ನು 30 ಕ್ಕೆ ಇಳಿಸಲಾಗುತ್ತದೆ ಎಂದು ತಿಳಿಸಲಾಗಿದೆ.
