ಬೆಂಗಳೂರು:
ಕರ್ನಾಟಕದ ಮದ್ಯ ಪ್ರಿಯರಿಗೆ ರಾಜ್ಯ ಸರ್ಕಾರ ಮತ್ತೊಮ್ಮೆ ಲಘುವಾದ ಶಾಕ್ ನೀಡಿದೆ. ರಾಜ್ಯದಲ್ಲಿ ಬಿಯರ್ ಸೇರಿದಂತೆ ಹಲವು ಮದ್ಯಗಳ ಬೆಲೆ ಹೆಚ್ಚಳವಾಗಲಿದೆ. ಬಿಯರ್ ಬೆಲೆ ಹೆಚ್ಚಳ ಮಾಡುವ ಮೂಲಕ ಅಬಕಾರಿ ಇಲಾಖೆ ಈ ವರ್ಷ ಮೂರನೇ ಬಾರಿ ಮದ್ಯ ಪ್ರಿಯರಿಗೆ ಶಾಕ್ ನೀಡಿದೆ. ಪ್ರತಿ ಮೂರು ತಿಂಗಳಿಗೊಮ್ಮೆ ಮದ್ಯದ ಬೆಲೆ ಏರಿಕೆ ಮಾಡುವುದಕ್ಕೆ ಸರಕಾರ ಮುಂದಾಗಿದ್ದು, ಇನ್ನು ಬಿಯರ್ ದರ ಮದ್ಯಪ್ರೇಮಿಗಳ ಜೇಬು ಸುಡಲಿದೆ.
ಅಬಕಾರಿ ಸಚಿವ ಆರ್.ಬಿ. ತಿಮ್ಮಾಪೂರ ಬಾಗಲಕೋಟೆಯಲ್ಲಿ ಈ ಕುರಿತು ಹೇಳಿಕೆ ನೀಡಿದ್ದು, ಬಿಯರ್ ಬೆಲೆಯಲ್ಲಿ ಕೇವಲ 10 ರೂಪಾಯಿಗಳ ಏರಿಕೆ ಮಾಡಲಾಗಿದೆ ಎಂದಿದ್ದಾರೆ. ನೆರೆ ರಾಜ್ಯಗಳಾದ ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ತಮಿಳುನಾಡಿನೊಂದಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಮದ್ಯದ ಬೆಲೆ ಇನ್ನೂ ಕಡಿಮೆ ಇದೆ ಎಂದು ತಿಮ್ಮಾಪೂರ ವಾದಿಸಿದ್ದಾರೆ. ಪ್ರೀಮಿಯಂ ಬ್ರಾಂಡ್‌ಗಳ ಬೆಲೆಯನ್ನು ಏರಿಕೆ ಮಾಡಿಲ್ಲ, ಕೇವಲ ಬಿಯರ್‌ನ ಬೆಲೆಯನ್ನು ಮಾತ್ರ ಸ್ವಲ್ಪ ಹೆಚ್ಚಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಸಚಿವರು, ಈ ಏರಿಕೆಯ ಉದ್ದೇಶವು ಗುಣಮಟ್ಟದ ಮದ್ಯವನ್ನು ಒದಗಿಸುವುದು ಎಂದು ಹೇಳಿದ್ದಾರೆ. ‘ನಾವು ಕ್ವಾಲಿಟಿ ಡ್ರಿಂಕ್ಸ್ ಕೊಡಬೇಕು ಎಂದು ಬೆಲೆ ಏರಿಕೆ ಮಾಡಿದ್ದೇವೆ. ಕರ್ನಾಟಕದ ಮದ್ಯವು ನೆರೆ ರಾಜ್ಯಗಳ ಪೋರ್ಸ್ ಸ್ಲ್ಯಾಬ್‌ಗಿಂತ ಉತ್ತಮ ಗುಣಮಟ್ಟ ಹೊಂದಿದೆ’ ಎಂದು ಸಚಿವರು ಒತ್ತಿ ಹೇಳಿದರು.
ಬಿಯರ್ ಕಂಪನಿಗಳು ಹಾಗೂ ಮದ್ಯ ಪ್ರಿಯರ ವಿರೋಧದ ನಡುವೆ ಸದ್ದಿಲ್ಲದೆ ಬಿಯರ್ ಬೆಲೆ ಹೆಚ್ಚಳ ಮಾಡಲಾಗುತ್ತಿದೆ. ಬಿಯರ್ ಮೇಲೆ ಶೇಕಡಾ 10ರಷ್ಟು ಅಬಕಾರಿ ಟ್ಯಾಕ್ಸ್ ಹೆಚ್ಚಳವಾಗಲಿದೆ. ಅಂದರೆ ಇದರಿಂದ ಪ್ರೀಮಿಯಂ ಬಿಯರ್‌ಗಳ ಬೆಲೆಯು 10ರಿಂದ 15 ರೂಪಾಯಿ ಹೆಚ್ಚಳವಾಗಲಿದೆ. ಅಬಕಾರಿ ತೆರಿಗೆ ಸಂಗ್ರಹ ಮೊತ್ತವನ್ನು ಹೆಚ್ಚಿಸಿಕೊಳ್ಳಲು ಸರಕಾರ ಈ ಉಪಾಯ ಕಂಡುಕೊಂಡಿದೆ. ಈ ಬಗ್ಗೆ ಕರಡು ಅಧಿಸೂಚನೆ ಹೊರಡಿಸಲಾಗಿದ್ದು, ಸಾರ್ವಜನಿಕರಿಂದ ಆಕ್ಷೇಪಣೆ ಸಲ್ಲಿಕೆಗೆ 7 ದಿನಗಳ ಕಾಲಾವಕಾಶ ನೀಡಲಾಗಿದೆ.
ಪ್ರೀಮಿಯಂ ಹಾಗೂ ವಿವಿಧ ಬಿಯರ್ ಬ್ರ್ಯಾಂಡ್‌ಗಳ ಬೆಲೆ ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ ಏರಿಕೆಯಾಗಲಿದೆ. ಪ್ರತಿ ಬಿಯರ್ ಬಾಟಲಿಗೆ ಅಂದಾಜು 10 ರೂ.ಯಿಂದ 15 ರೂಪಾಯಿ ಹೆಚ್ಚಳವಾಗುವ ಸಾಧ್ಯತೆ. ಪ್ರೀಮಿಯಂ ಬ್ರ್ಯಾಂಡ್‌ಗಳ ಬಿಯರ್ ಬೆಲೆಯು ಬಾಟಲಿಗೆ 10 ರೂ. ಜಾಸ್ತಿ. ಕಡಿಮೆ ಬೆಲೆಯ ಅಥವಾ ಸ್ಥಳೀಯ ಬ್ರ್ಯಾಂಡ್‌ಗಳ ಬಿಯರ್ ಬೆಲೆಯು 5 ರೂಪಾಯಿ ಅಥವಾ ಅದಕ್ಕಿಂತ ಜಾಸ್ತಿ ಹೆಚ್ಚಳವಾಗಬಹುದು.








