ಮಡಿಕೇರಿ
ಕೊಡಗು ಜಿಲ್ಲೆಯಲ್ಲಿ ಮಂಗಳವಾರ ಕೂಡ ವರುಣಾರ್ಭಟ ಮುಂದುವರಿದಿದೆ. ಪರಿಣಾಮವಾಗಿ ಸಾಕಷ್ಟು ಅವಾಂತರಗಳೂ ಸಂಭವಿಸಿವೆ. ವಿರಾಜಪೇಟೆಯಲ್ಲಿ ಈಗಾಗಲೇ ಕಾಳಜಿ ಕೇಂದ್ರ ಸ್ಥಾಪಿಸಿದ್ದು, ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ಕಳೆದ ಮೂರುದಿನಗಳಿಂದ ಅಬ್ಬರಿಸುತ್ತಾ ಇರುವ ಮಳೆಯ ಕಾರಣ ಕೊಡಗು ಜಿಲ್ಲೆಯಲ್ಲಿ ಸಾಕಷ್ಟು ಹಾನಿ ಸಂಭವಿಸಿದೆ. ಜಿಲ್ಲೆಯಲ್ಲಿ ನೂರಾರು ಮರಗಳು ಧರೆಗುರುಳಿದಗ್ದು, 400 ಕ್ಕೂ ಅಧಿಕ ವಿದ್ಯುತ್ ಕಂಬಗಳು ನಾಶವಾಗಿವೆ. ಹಾಗಾಗಿ ಜಿಲ್ಲೆಯ ವಿದ್ಯುತ್ ಸಂಪರ್ಕ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ . ಚೆಸ್ಕಾಂ ಇಲಾಖೆ ವಿದ್ಯುತ್ ವ್ಯವಸ್ಥೆ ಮರುಸ್ಥಾಪನೆಗೆ ಇನ್ನಿಲ್ಲ ಕಸರತ್ತು ನಡೆಸಿದೆ. ಸಂಕಷ್ಟದ ಸಂದರ್ಭದಲ್ಲಿ ಲೈನ್ಮನ್ಗಳಿಲ್ಲದೆ ಇಲಾಖೆ ಅಕ್ಷರಶಃತತ್ತರಿಸಿಹೋಗಿದೆ.
ಚೆಸ್ಕಾಂ ಕಷ್ಟಕ್ಕೆ ಸ್ಪಂದಿಸಿರುವ ಶಾಸಕ ಪೊನ್ನಣ್ಣ ಹಾಸನ, ಚಾಮರಾಜನಗರ ಮೈಸೂರು ಮಂಡ್ಯದಿಂದ ಹೆಚ್ಚುವರಿ ಸಿಬ್ಬಂದಿಯನ್ನು ಕೊಡಗಿಗೆ ನಿಯೋಜಿಸವಂತೆ ಚೆಸ್ಕಾಂ ನಿಗಮಕ್ಕೆ ಸೂಚಿಸಿದ್ದಾರೆ. ಅದರಂತೆ 74 ಮಂದಿ ಲೈನ್ಮನ್ಗಳು ಈಗಾಗಲೇ ಕೊಡಗಿನತ್ತ ಆಗಮಿಸಿದ್ದಾರೆ. ಈ ಮಧ್ಯೆ, ಮಳೆ ಅನಾಹುತ ಮುಂದುವರಿದಿದ್ದು ವಿರಾಜಪೇಟೆ ನಗರದ ನೆಹರು ನಗರದಲ್ಲಿ ಬೃಹತ್ ಮರವೊಮದು ಮಾಜಿ ಸೈನಿಕ ಗಣೇಶ್ ಎಂಬುವರ ಮನೆ ಮೇಲೆ ಉರುಳಿದೆ. ಪರಿಣಾಮ ಮನೆ ಬಾಗಶಃ ಹಾನಿಯಾಗಿದೆ.
ವಿರಾಜಪೇಟೆ ನಗರದ ಅಯ್ಯಪ್ಪ ಬೆಟ್ಟ, ಮಲೆತಿರಿಕೆ ಬೆಟ್ಟ ನೆಹರು ನಗರದಲ್ಲಿ ಅಪಾಯ ಹೆಚ್ಚಿರುವ ಕಾರಣ ಕಾಳಜಿ ಕೇಂದ್ರ ಸ್ಥಾಪಿಸಲಾಗಿದೆ. ನಗರದ ಸಂತ ಅನ್ನಮ್ಮ ಶಾಲೆಯ ಸಭಾಂಗಣದಲ್ಲಿ ವಿರಾಜಪೇಟೆ ಪುರಸಭೆ ವತಿಯಿಂದ ಕಾಳಜಿ ಕೇಂದ್ರ ತೆರೆಯಲಾಗಿದೆ. ಜನರಿಗೆ ಅಗತ್ಯವಾಗಿ ಬೇಕಾಗಿರುವ ದಿನಬಳಕೆ ವಸ್ತುಗಳನ್ನ ಕೂಡ ಸಂಗ್ರಹಿಸಿಡಲಾಗಿದೆ. ಬೆಟ್ಟ ಪ್ರದೇಶಗಳಲ್ಲಿ ನೆಲೆಸಿರುವವರು ಕಾಳಜಿ ಕೇಂದ್ರಕ್ಕೆ ತೆರಳುವಂತೆ ಸೂಚಿಸಲಾಗಿದೆ. ಕರಿಕೆ-ಭಾಗಮಂಡಲ ಮುಖ್ಯರಸ್ತೆಯ ಮೇಲೆ ಲಘು ದಿಣ್ಣೆ ಕುಸಿತವಾಗಿದೆ. ಇದೇ ವೇಳೆ ಎನ್ಡಿಆರ್ಎಫ್ ಕೂಡ ಮಡಿಕೇರಿಗೆ ಆಗಮಿಸಿದೆ. ಬೆಂಗಳೂರಿನ 10ನೇ ಬೆಟಾಲಿಯನ್ನಿನ 30 ಸಿಬ್ಬಂದಿ ಅಗತ್ಯ ಸಲಕರಣೆಗಳೊಂದಿಗೆ ನಗರದ ಮೈತ್ರಿ ಹಾಲ್ನಲ್ಲಿ ವಾಸ್ತವ್ಯ ಹೂಡಿದ್ದಾರೆ.
