ಬೆಂಗಳೂರು
ಬೆಂಗಳೂರಿನ ಸಸ್ಯಕಾಶಿ ಲಾಲ್ ಬಾಗ್ನಲ್ಲಿ ಪ್ರವಾಸಿಗರಿಗೆ, ಅದರಲ್ಲಿಯೂ ಹೆಚ್ಚು ನಡೆದಾಡಲು ಕಷ್ಟವಾಗುವವರಿಗೆ ವಿಸ್ತಾರವಾದ ಉದ್ಯಾನವನ್ನು ಸುತ್ತಲು ಪರಿಸರಸ್ನೇಹಿ ಎಲೆಕ್ಟ್ರಿಕ್ ಸ್ಕೂಟರ್ಗಳ ವ್ಯವವಸ್ಥೆ ಒದಗಿಸುವ ಹೊಸ ಯೋಜನೆ ಜಾರಿಗೊಳಿಸಲು ತೋಟಗಾರಿಕಾ ಇಲಾಖೆ ಮುಂದಾಗಿದೆ. ಸದ್ಯ ಪ್ರಾಯೋಗಿಕ ಯೋಜನೆಗೆ ಚಾಲನೆ ನೀಡಲಾಗಿದೆ. ‘ಫೆಚ್ ಮೊಬಿಲಿಟಿ’ ಬ್ರಾಂಡ್ ಅಡಿಯಲ್ಲಿ ಸ್ಟಾರ್ಟ್ಅಪ್ ವೋಲ್ಟ್ರಾನ್ ಡೈನಾಮಿಕ್ಸ್ ಈ ಉಪಕ್ರಮವನ್ನು ಆರಂಭಿಸಿದೆ.
ಲಾಲ್ ಬಾಗ್ ನೋಡಲು ಹಲವು ಗಂಟೆಗಳು ಸುತ್ತಿ ಸುಸ್ತಾಗುತ್ತಿದ್ದ ಮಂದಿ ಈಗ ಎಲೆಕ್ಟ್ರಿಕ್ ಸ್ಕೂಟರ್ಗಳನ್ನು ಏರಿ ಜಾಲಿ ರೈಡ್ ಮಾಡುತ್ತಿದ್ದಾರೆ. ಸದ್ಯಕ್ಕೆ, 20 ನಿಮಿಷಗಳ ಸವಾರಿಗೆ 50 ರೂಪಾಯಿ ದರ ನಿಗದಿಪಡಿಸಲಾಗಿದೆ. ಈ ಸ್ಕೂಟರ್ಗಳು ಒಂದೇ ಚಾರ್ಜ್ನಲ್ಲಿ 25 ಕಿ.ಮೀ ದೂರ ಕ್ರಮಿಸಲಿವೆ. ಪ್ರಸ್ತುತ 10 ಇ ಸ್ಕೂಟರ್ ಗಳ ಕಾರ್ಯಾಚರಣೆ ಇದ್ದು, ಮುಂದಿನ ದಿನಗಳಲ್ಲಿ ಲಾಲ್ ಬಾಗ್ನ ಎಲ್ಲಾ ಗೇಟ್ಗಳ ಮೂಲಕ ಮೂವತ್ತಕ್ಕೂ ಹೆಚ್ಚು ಇ ಸ್ಕೂಟರ್ಗಳನ್ನು ಕಾರ್ಯಾಚರಣೆಗೆ ಇಳಿಸುವ ಸಾಧ್ಯತೆ ಇದೆ.
ಸಸ್ಯಕಾಶಿ ಲಾಲ್ ಬಾಗ್ನಲ್ಲಿ ಪ್ರವಾಸಿಗರಿಗೆ ನಾಯಿ ಕಾಟದ ಸಂಕಷ್ಟ ಶುರುವಾಗಿದೆ. ಲಾಲ್ ಬಾಗ್ನಲ್ಲಿ ಬೀದಿನಾಯಿಗಳ ಸಂಖ್ಯೆ ಹೆಚ್ಚಾಗಿದ್ದು, ಸಸ್ಯಕಾಶಿಯ ಸೌಂದರ್ಯ ಸವಿಯಲು ಬರುವ ಪ್ರವಾಸಿಗರಿಗೆ ಭಯದ ವಾತಾವರಣ ನಿರ್ಮಾಣವಾಗುತ್ತಿದೆ. ಎಲ್ಲೆಂದರಲ್ಲಿ ಬೀದಿನಾಯಿಗಳ ಕಾಟ ಹೆಚ್ಚಾಗುತ್ತಿರುವುದರಿಂದ ಮಕ್ಕಳು, ವಯೋವೃದ್ಧರು ಓಡಾಡಲು ಭಯ ಪಡುವಂತಾಗಿದೆ. ಇತ್ತ ಕಲ್ಲಿನ ಬಂಡೆ, ಗಾಜಿನ ಮನೆ ಎಲ್ಲಾ ಕಡೆ ಶ್ವಾನ ಪಡೆ ಬೀಡು ಬಿಟ್ಟಿದ್ದರೂ ಅವುಗಳನ್ನು ಸ್ಥಳಾಂತರ ಮಾಡದ ಪಾಲಿಕೆ ಹಾಗೂ ತೋಟಗಾರಿಕೆ ಇಲಾಖೆ ನಡೆಗೆ ಜನಸಾಮಾನ್ಯರು ಬೇಸರ ಹೊರಹಾಕಿದ್ದಾರೆ.
ಒಟ್ಟಿನಲ್ಲಿ ಬೆಂಗಳೂರಿಗೆ ಲಾಲ್ ಬಾಗ್ ಆಕ್ಸಿಜನ್ ಪ್ಲಾಂಟ್ ಎಂಬಂತೆ ಇದ್ದು, ಅಪಾರ ಸಸ್ಯ ಸಂಪತ್ತು ಹಾಗೂ ಪಕ್ಷಿ ಸಂಪತ್ತು ಹೊಂದಿದೆ. ಒಂದೆಡೆ ಇ ಸ್ಕೂಟರ್ ಮೂಲಕ ಬೃಹತ್ ಉದ್ಯಾನವನ ಸುತ್ತಲು ವ್ಯವಸ್ಥೆ ಮಾಡಿಕೊಡಲಾಗುತ್ತಿದ್ದರೆ, ಮತ್ತೊಂದೆಡೆ ಬೀದಿ ನಾಯಿಗಳ ಉಪಟಳ ಜನರಿಗೆ ತಲೆ ನೋವು ತಂದಿದೆ.
