ಅನಂತ್‌ ಕುಮಾರ್‌ ಹೆಗಡೆ ಗನ್‌ಮ್ಯಾನ್, ಚಾಲಕನಿಂದ ಗೂಂಡಾಗಿರಿ: ದೂರು ದಾಖಲು

ನೆಲಮಂಗಲ:

   ತಮ್ಮ ಕಾರನ್ನು ಓವರ್‌ಟೇಕ್‌ ಮಾಡಿದರು ಎಂಬ ಕಾರಣಕ್ಕೆ ಇನ್ನೊಂದು ಕಾರಿನಲ್ಲಿದ್ದವರನ್ನು ಅಡ್ಡಹಾಕಿ ಹಲ್ಲೆ  ನಡೆಸಿದ ಆರೋಪದಲ್ಲಿ ಕೇಂದ್ರದ ಮಾಜಿ ಸಚಿವ, ಉತ್ತರ ಕನ್ನಡ ಕ್ಷೇತ್ರದ ಮಾಜಿ ಸಂಸದ ಅನಂತ್‌ ಕುಮಾರ್‌ ಹೆಗಡೆ  ಅವರ ಗನ್‌ಮ್ಯಾನ್‌, ಚಾಲಕನ ಮೇಲೆ ದೂರು ದಾಖಲಾಗಿದೆ. ಈ ಸಂದರ್ಭದಲ್ಲಿ ಅನಂತ್‌ ಕುಮಾರ್‌ ಸಹ ಕಾರಿನಲ್ಲಿದ್ದು, ಅವರನ್ನೂ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಈ ಘಟನೆಯ ಬಳಿಕ ಸ್ಥಳದಲ್ಲಿ ಜನ ಜಮಾಯಿಸಿದ್ದು, ವಿಚಾರಣೆ ನಡೆಸಿ ಮಾಜಿ ಸಂಸದರನ್ನು ಠಾಣೆಯಿಂದ ಬಿಟ್ಟು ಕಳಿಸಿದ ಪೊಲೀಸರ ಬಗ್ಗೆ ಆಕ್ರೋಶವೂ ವ್ಯಕ್ತವಾಗಿದೆ.

    ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ  ತಾಲೂಕಿನ ಹಳೇ ನಿಜಗಲ್ ಬಳಿ ಇನ್ನೋವಾ ಕಾರಿನಲ್ಲಿದ್ದ ನಾಲ್ವರ ಮೇಲೆ ಹಲ್ಲೆ, ಗೂಂಡಾಗಿರಿ ನಡೆಸಿದ ಆರೋಪದಲ್ಲಿ ಅನಂತ ಕುಮಾರ್ ಹೆಗಡೆ , ಅವರ ಕಾರು ಚಾಲಕ ಹಾಗೂ ಗನ್​ಮ್ಯಾನ್ ಮೇಲೆ ಎಫ್​ಐಆರ್ ದಾಖಲಾಗಿದೆ. ಅನಂತ ಕುಮಾರ್ ಹೆಗಡೆ ಪುತ್ರ ಅಶುತೋಷ್, ಗನ್‌ಮ್ಯಾನ್‌ ಶ್ರೀಧರ್, ಚಾಲಕ ಮಹೇಶ್ ವಿರುದ್ಧ ಹಲ್ಲೆ ಆರೋಪ ಕೇಳಿ ಬಂದಿದ್ದು ಆ ಸಂಬಂಧ ದೂರು ದಾಖಲಾಗಿದೆ. ಘಟನೆ ವೇಳೆ ಅನಂತ ಕುಮಾರ್ ಹೆಗಡೆ ಸಹ ಕಾರಿನಲ್ಲಿದ್ದು, ಅವರನ್ನೂ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

    ಅನಂತ್‌ ಕುಮಾರ್‌ ಹೆಗಡೆ ಅವರು ತೆರಳುತ್ತಿದ್ದ ಕಾರನ್ನು ಓವರ್​ ಟೇಕ್​ ಮಾಡಲಾಯಿತು ಎಂಬ ಕಾರಣಕ್ಕೆ ಇನ್ನೋವಾ ಕಾರಿನಲ್ಲಿದ್ದ ನಾಲ್ವರ ಮೇಲೆ, ಅನಂತ್ ಕುಮಾರ್​ ಹೆಗಡೆ ಪುತ್ರ ಅಶುತೋಷ್, ಚಾಲಕ ಹಾಗೂ ಗನ್​​ಮ್ಯಾನ್​ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇನ್ನೋವಾ ಕಾರಿನಲ್ಲಿ ಸಲ್ಮಾನ್, ಸೈಫ್‌, ಇಲಿಯಾಜ್ ಖಾನ್‌ ಹಾಗೂ ಉನ್ನೀಸಾ ಎಂಬವರ ಮೇಲೆ ಹಲ್ಲೆ ನಡೆದಿದ್ದು, ಅವರಿಗೆ ದಾಬಸ್‌ಪೇಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

   ಘಟನೆ ಬಳಿಕ ನೆಲಮಂಗಲ ಗ್ರಾಮಾಂತರ ಠಾಣೆಯ ಡಿವೈಎಸ್​ಪಿ ಕಚೇರಿಯಲ್ಲಿ ಅನಂತ್ ಕುಮಾರ್ ಹೆಗಡೆ ಅವರನ್ನು ವಿಚಾರಣೆಗೆ ಒಳಪಡಿಸಲಾಯಿತು. ಇದೇ ವೇಳೆ ಅವರು, ಓವರ್​ ಟೇಕ್‌​ ವೇಳೆ ಕಾರಿಗೆ ಮತ್ತೊಂದು ಕಾರ್ ಟಚ್ ಆಗಿದ್ದಕ್ಕೆ ಗಲಾಟೆ ನಡೆದೆ ಎಂದು ತಿಳಿಸಿದ್ದಾರೆ. ತಾವು ಕಾರಿನಲ್ಲಿದ್ದುದಾಗಿಯೂ, ಹಲ್ಲೆ ಮಾಡಿಲ್ಲ ಎಂದೂ ಅವರು ಸ್ಪಷ್ಟನೆ ನೀಡಿದ್ದಾರೆ.

   ಘಟನೆ ಬಗ್ಗೆ ಮಾಹಿತಿ ಗೊತ್ತಾಗುತ್ತಿದ್ದಂತೆಯೇ ಪೊಲೀಸ್​ ಠಾಣೆ ಬಳಿ ರಾತ್ರಿಯೇ ಜನರು ದೌಡಾಯಿಸಿದರು. ತುಮಕೂರು ಗ್ರಾಮಾಂತರ ಶಾಸಕ ಸುರೇಶ್ ಕೂಡ ಆಗಮಿಸಿದರು. ಠಾಣೆ ಎದುರು ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಗಿತ್ತು. ಅನಂತ್‌ ಕುಮಾರ್‌ ಅವರನ್ನು ಬಂಧಿಸುವಂತೆ ಜನ ಒತ್ತಾಯಿಸಿದರು. ಹಲ್ಲೆಗೊಳಗಾಗಿದ್ದ ಸೈಫ್ ನೀಡಿದ ದೂರಿನ ಮೇರೆಗೆ ದಾಬಸ್​​ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ಅನಂತಕುಮಾರ್ ಹೆಗಡೆ A1, ಗನ್‌ಮ್ಯಾನ್ ಶ್ರೀಧರ್‌ A2, ಕಾರು ಚಾಲಕ ಮಹೇಶ್‌ A3 ಮತ್ತು ಇತರರ ವಿರುದ್ಧ ಎಫ್​ಐಆರ್ ದಾಖಲಿಸಲಾಗಿದೆ. ಬಿಎನ್​ಎಸ್ ಕಾಯ್ದೆಯ 6 ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Recent Articles

spot_img

Related Stories

Share via
Copy link