ಬೆಂಗಳೂರು
ರಾಜ್ಯದ ಮೈತ್ರಿ ಸರ್ಕಾರವನ್ನು ಉರುಳಿಸಲು ಮೂವರು ಬಿಜೆಪಿ ನಾಯಕರು ಜೆಡಿಎಸ್ ಶಾಸಕರಿಗೆ ತಲಾ 80 ಕೋಟಿ ರೂ. ಆಮಿಷವೊಡ್ಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಬಿಜೆಪಿ ನಾಯಕರಾದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಅರವಿಂದ ಲಿಂಬಾವಳಿ, ಸಿ.ಎನ್. ಆಶ್ವಥ್ ನಾರಾಯಣ ಅವರು ಜೆಡಿಎಸ್ ಶಾಸಕರನ್ನು ಸಂಪರ್ಕಿಸಿ ರಾಜೀನಾಮೆ ಕೊಟ್ಟು ಬಂದರೆ 50 ಕೋಟಿ ರೂ. ನಗದು, ಸಚಿವ ಸ್ಥಾನ, ಮತ್ತೆ ಚುನಾವಣೆ ಖರ್ಚಿಗಾಗಿ 30 ಕೋಟಿ ರೂ. ನೀಡುವುದಾಗಿ ಆಮಿಷವೊಡ್ಡಿದ್ದಾರೆ. ಈ ವಿಚಾರವನ್ನು ಮುಖ್ಯಮಂತ್ರಿಯವರು ಹಿರಿಯ ನಾಯಕರೊಂದಿಗೆ ಚರ್ಚಿಸಿದ್ದಾರೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.
ಬಿಜೆಪಿ ಯಾವ ಮಟ್ಟಕ್ಕೆ ಇಳಿಯುತ್ತಿದೆ, ಅವರಲ್ಲಿ ಅಧಿಕಾರ ದಾಹ ಎಷ್ಟಿದೆ ಎಂಬುದು ಅವರ ಈ ನಡವಳಿಕೆಯಿಂದಲೇ ಗೊತ್ತಾಗುತ್ತಿದೆ. ಬಿಜೆಪಿ ಶಾಸಕರನ್ನು ಸೆಳೆಯಲು ನನಗೇನೂ ಗೊತ್ತಿಲ್ಲವೇ..ಆದರೆ ನಾನು ಅಧಿಕಾರ ದುರುಪಯೋಗ ಮಾಡಿಕೊಳ್ಳಬಾರದು ಎಂಬ ಕಾರಣದಿಂದ ಯಾವುದೇ ಬಿಜೆಪಿ ಶಾಸಕರನ್ನು ಸೆಳೆಯಲು ಹೋಗಿಲ್ಲ, ಆಮಿಷವೊಡ್ಡಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಇದಕ್ಕೆ ತದ್ವಿರುದ್ಧವಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬಿಜೆಪಿ ಶಾಸಕರನ್ನು ಸಂಪರ್ಕಿಸಿ ಮಂತ್ರಿ ಸ್ಥಾನ ಕೊಡುತ್ತೇನೆ, ಬಿಜೆಪಿಗೆ ರಾಜೀನಾಮೆ ಕೊಟ್ಟು ಬನ್ನಿ ಎಂದೂ ಹೇಳಿದ ಮೇಲೆಯೇ ನಾವು ನಮ್ಮ ಶಾಸಕರನ್ನು ಜೋಪಾನವಾಗಿಟ್ಟುಕೊಳ್ಳುವ ಗಮನಕೊಟ್ಟಿದ್ದೇವೆ. ಆದ್ದರಿಂದ ಅವರನ್ನು ರೇಸಾರ್ಟ್‍ಗೆ ಕರೆದೊಯ್ದಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಕಲಬುರಗಿ ಜಿಲ್ಲೆಯ ಬಿಜೆಪಿ ಶಾಸಕರೊಬ್ಬರಿಗೆ ಮುಖ್ಯಮಂತ್ರಿ ನೇರವಾಗಿ ಮಂತ್ರಿ ಸ್ಥಾನದ ಆಮಿಷವೊಡ್ಡಿದ್ದಾರೆ ಎಂದು ಯಡಿಯೂರಪ್ಪ ನೇರ ಆರೋಪ ಮಾಡಿದ್ದಾರೆ.
ಈ ವಿಚಾರದಲ್ಲಿ ಆರೋಪ-ಪ್ರತ್ಯಾರೋಪಗಳು ಪರಾಕಾಷ್ಠೆಗೆ ತಲುಪಿದೆ. ಇವೆಲ್ಲದರ ನಡುವೆ ಸಮನ್ವಯ ಸಮಿತಿ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್‍ನಲ್ಲಿ ಯಾವುದೇ ಬಿಕ್ಕಟ್ಟಿಲ್ಲ.ಎಲ್ಲಾ ಶಾಸಕರೂ ಒಗ್ಗಟ್ಟಾಗಿದ್ದಾರೆ. ಬಿಜೆಪಿಯ ಪ್ರಯತ್ನ ಫಲ ಕೊಡುವುದಿಲ್ಲ ಎಂದು ಹೇಳಿದ್ದಾರೆ.
ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಕೂಡ ಅಖಾಡಕ್ಕಿಳಿದಿದ್ದು, ಮೈತ್ರಿ ಸರ್ಕಾರ ರಕ್ಷಣೆಗೆ ಕಾರ್ಯತಂತ್ರ ರೂಪಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
