ವಾಸ್ತವಾಂಶ ತಿಳಿದುಕೊಳ್ಳಲು BR ಪಾಟೀಲ್ ಜೊತೆ ಚರ್ಚೆ….!

ಬೆಂಗಳೂರು:

   ಕೇಂದ್ರ ಸಚಿವ ಸೋಮಣ್ಣ ಅವರ ಮನವಿ ಮೇರೆಗೆ ಇದೇ ತಿಂಗಳು 30ರಂದು ನಡೆಯಬೇಕಿದ್ದ ಹೇಮಾವತಿ ಲಿಂಕ್ ಕೆನಾಲ್ ಸಭೆಯನ್ನು ಜುಲೈ 4-5ಕ್ಕೆ ಮುಂದೂಡಲಾಗಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸೋಮಣ್ಣ ಅವರು ಸ್ಥಳೀಯ ಸಂಸದರೂ ಆಗಿರುವ ಕಾರಣ ಅವರಿಗೆ ಅನುಕೂಲವಾಗುವಂತೆ ಸಭೆ ಮುಂದೂಡಲಾಗಿದೆ. ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ” ಎಂದು ತಿಳಿಸಿದರು.

   ಇಂದು ತುಮಕೂರಿನಲ್ಲಿ ಯೋಜನೆ ಕಾಮಗಾರಿಯ ಗುತ್ತಿಗೆದಾರರ ಸಭೆ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಪರಮೇಶ್ವರ್ ಅವರ ಅನುಪಸ್ಥಿತಿ ಹಿನ್ನೆಲೆಯಲ್ಲಿ ಈ ಸಭೆಯನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ. ಈ ಸಭೆ ನಾಳೆ ಅಥವಾ ನಾಡಿದ್ದು ನಡೆಯಲಿದೆ ಎಂದು ಹೇಳಿದರು.

   ಆದ್ಯತೆ ಮೇರೆಗೆ ಎತ್ತಿನಹೊಳೆ ಯೋಜನೆಯನ್ನು ನಿಗದಿತ ಸಮಯದ ಒಳಗೆ ಪೂರ್ಣಗೊಳಿಸಬೇಕು ಎಂದು ಮುಖ್ಯಮಂತ್ರಿಗಳ ನಿರ್ದೇಶನ ನೀಡಿದ್ದಾರೆ. ಹೀಗಾಗಿ ಈ ಯೋಜನೆ ಕಾಮಗಾರಿ ಪರಿಶೀಲನೆ ಮಾಡಲಾಗುತ್ತಿದೆ. ಈ ಯೋಜನೆಗೆ ಎಲ್ಲೆಲ್ಲಿ ಸಮಸ್ಯೆ ಇದೆ ಎಂದು ಪರಿಶೀಲನೆ ಮಾಡಲು ನಾನು ತುಮಕೂರಿಗೆ ಭೇಟಿ ನೀಡಿದ್ದೇನೆ ಎಂದರು.

   ನಾನು ಈಗಾಗಲೇ ದೊಡ್ಡಬಳ್ಳಾಪುರ, ಕೊರಟಗೆರೆಗೆ ಭೇಟಿ ನೀಡಿದ್ದೇನೆ. ಸಚಿವ ಸಂಪುಟ ಉಪ ಸಮಿತಿ ಅಧ್ಯಕ್ಷರಾಗಿದ್ದ ಪರಮೇಶ್ವರ್ ಅವರ ಜೊತೆ ಚರ್ಚೆ ಮಾಡಿದ್ದೇನೆ. ಈ ಭಾಗದಲ್ಲಿ ನೀರನ್ನು ಯಾವ ರೀತಿ ಸಂಗ್ರಹಿಸುವುದು ಎಂಬ ತಾಂತ್ರಿಕ ಸಾಧ್ಯತೆಗಳ ಪರಿಶೀಲನೆ ನಡೆಸುತ್ತಿದ್ದೇವೆ. ಈಗಾಗಲೇ ಸ್ಥಳೀಯ ನಾಯಕರು, ಗ್ರಾಮಸ್ಥರ ಜೊತೆ ಚರ್ಚೆ ಮಾಡಿ ಅಭಿಪ್ರಾಯ ಸಂಗ್ರಹಿಸಿದ್ದೇನೆ. ಸಾರ್ವಜನಿಕರು ತಮ್ಮ ನೋವು ಹೇಳಿಕೊಂಡಿದ್ದಾರೆ. ಒಂದು ಕಡೆ ಅಣೆಕಟ್ಟು ನಿರ್ಮಾಣ ಮಾಡಬೇಕೆ, ಎರಡು ಕಡೆ ಮಾಡಬೇಕೆ ಅಥವಾ ಜನರ ಸಲಹೆಯಂತೆ ಕೆರೆಗಳನ್ನು ಬಳಸಿಕೊಂಡು ನೀರು ಸಂಗ್ರಹಿಸಬಹುದೇ ಎಂಬ ಸಾಧ್ಯತೆಗಳನ್ನು ಅಧ್ಯಯನ ಮಾಡಲಾಗುವುದು” ಎಂದು ತಿಳಿಸಿದರು. 

   ಶಾಸಕ ಬಿ.ಆರ್ ಪಾಟೀಲ್ ಅವರ ಭೇಟಿ ಬಗ್ಗೆ ಕೇಳಿದಾಗ, “ಪಕ್ಷದ ಅಧ್ಯಕ್ಷನಾಗಿ ನಾನು ವಾಸ್ತವಾಂಶ ತಿಳಿಯಬೇಕಾಗಿತ್ತು. ಹೀಗಾಗಿ ಅವರನ್ನು ಕರೆಸಿ ಮಾತನಾಡಿದೆ. ಅವರು ತಮ್ಮ ವಿಚಾರ ಹೇಳಿದ್ದಾರೆ. ನಾನು ಸಿಎಂ ಜೊತೆ ಚರ್ಚೆ ಮಾಡುತ್ತೇನೆ. ಸಚಿವ ಜಮೀರ್ ಅವರೊಂದಿಗೂ ಮಾತನಾಡುತ್ತೇವೆ. ಈ ಮಧ್ಯೆ ನಮ್ಮ ಪಕ್ಷದ ವರಿಷ್ಠರೂ ಕೂಡ ಆಗಮಿಸುತ್ತಿದ್ದು, ಎಲ್ಲರ ಜೊತೆ ಮಾತನಾಡಿ ಮಾಹಿತಿ ಪಡೆಯಲಿದ್ದಾರೆ” ಎಂದು ತಿಳಿಸಿದರು.

   ಹಲವು ಶಾಸಕರು ಸರ್ಕಾರದ ವಿರುದ್ಧ ಧ್ವನಿ ಎತ್ತಿದ್ದು, ಇದು ಮುಖ್ಯಮಂತ್ರಿಗಳು ಆಡಳಿತದಲ್ಲಿ ಹಿಡಿತ ಕಳೆದುಕೊಳ್ಳುತ್ತಿದ್ದಾರೆಯೇ ಎಂದು ಕೇಳಿದಾಗ, “ಈ ವಿಚಾರವಾಗಿ ನನಗೆ ಮಾಹಿತಿ ಇಲ್ಲ. ಏನಾದರೂ ಇದ್ದರೆ ನಮ್ಮ ಪಕ್ಷದ ವರಿಷ್ಠರ ಜೊತೆ ನಾನು ಹಾಗೂ ಮುಖ್ಯಮಂತ್ರಿಗಳು ಮಾತನಾಡುತ್ತೇವೆ. ಆಡಳಿತದಲ್ಲಿ ಯಾವುದೇ ಹಿಡಿತ ಕಳೆದುಕೊಂಡಿಲ್ಲ. ಇದು ಮಾಧ್ಯಮಗಳ ಸೃಷ್ಟಿ” ಎಂದು ತಿಳಿಸಿದರು.

   ಕಾಂಗ್ರೆಸ್ ಶಾಸಕರಿಗೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಅವರು ಪತ್ರ ಬರೆದಿರುವ ಬಗ್ಗೆ ಕೇಳಿದಾಗ, “ಸುರೇಶ್ ಬಾಬು ಅವರು ಮೊದಲು ತಮ್ಮ ಪಕ್ಷ ಸರಿಪಡಿಸಿಕೊಳ್ಳಲಿ. ತಮ್ಮ ಕಾವಲಿಯಲ್ಲಿರುವ ತೂತು ಮುಚ್ಚಿಕೊಳ್ಳಲಿ. ಜಿ.ಟಿ ದೇವೇಗೌಡ ಸೇರಿದಂತೆ ಬೇರೆ ಶಾಸಕರ ವಿಚಾರ ಸರಿಪಡಿಸಲಿ” ಎಂದು ತಿರುಗೇಟು ನೀಡಿದರು.

   ಇಂದಿರಾ ಗಾಂಧಿ ಅವರನ್ನು ಬಿಜೆಪಿ ಹಿಟ್ಲರ್ ಗೆ ಹೋಲಿಕೆ ಮಾಡಿದ್ದು, ಪ್ರಕರಣ ದಾಖಲಿಸಲಾಗಿದೆ ಎಂದು ಕೇಳಿದಾಗ, “ಬಿಜೆಪಿಯಲ್ಲಿ ಸಮಸ್ಯೆ ಇದೆ. ತುರ್ತುಪರಿಸ್ಥಿತಿ ನಂತರ ದೇಶದ ಜನ ಇಂದಿರಾ ಗಾಂಧಿ ಅವರ ನಾಯಕತ್ವದಲ್ಲೇ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿದೆ. 1980ರಲ್ಲೂ ಇಂದಿರಾ ಅವರು ದೇಶವನ್ನು ಮುನ್ನಡೆಸಿದ್ದಾರೆ. ಆ ಸಮಯದಲ್ಲಿ ಜನತಾ ಪರಿವಾರ ಅಥವಾ ಬೇರೆಯವರು ಸರ್ಕಾರ ರಚಿಸಲು ಸಾಧ್ಯವಾಗಲಿಲ್ಲ. ಇಂದಿರಾ ಅವರು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ಈಗ ಪ್ರಚಾರಕ್ಕಾಗಿ ಬಿಜೆಪಿ ಈ ವಿಚಾರವನ್ನು ಚರ್ಚೆಗೆ ತರುತ್ತಿದ್ದಾರೆ” ಎಂದು ಹೇಳಿದರು.

  “ತುರ್ತುಪರಿಸ್ಥಿತಿ ಬಂದು 50 ವರ್ಷ ಆಗಿದೆ. ಈಗ ಅದು ಮುಗಿದ ಅಧ್ಯಾಯ. ಆಗಿನಿಂದ ಈಗಿನವರೆಗೂ ಕಾಂಗ್ರೆಸ್ ಆಡಳಿತದಲ್ಲಿ ದೇಶ ಬಲಿಷ್ಠವಾಗಿ ನಿಂತಿದೆ. ಬಿಜೆಪಿ ಆಡಳಿತದಲ್ಲಿ ಯಾವ ಪರಿಸ್ಥಿತಿ ಇದೆ ಎಂದು ನಮ್ಮ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗೆ ನಮ್ಮ ಸಹಮತವಿದೆ. ದೇಶ ಯಾವ ಪರಿಸ್ಥಿತಿಯಲ್ಲಿದೆ ಎಂದು ಬಿಜೆಪಿಯ ಸಂಸದರನ್ನೇ ವೈಯಕ್ತಿಕವಾಗಿ ಕೇಳಿ. ಅವರೇ ಹೇಳುತ್ತಾರೆ” ಎಂದು ತಿಳಿಸಿದರು.

Recent Articles

spot_img

Related Stories

Share via
Copy link