ಹಣಕ್ಕಾಗಿ ಪತ್ನಿ, ಗೆಳೆಯನಿಂದ ನಿರಂತರ ಕಿರುಕುಳ: ವ್ಯಕ್ತಿ ಆತ್ಮಹತ್ಯೆ

ರೋಹ್ಟಕ್:

     ಪತ್ನಿ ಮತ್ತು ಆಕೆಯ ಗೆಳೆಯ ಹಣಕ್ಕಾಗಿ ಕಿರುಕುಳ ನೀಡುತ್ತಿದ್ದುದರಿಂದ ಬೇಸೆತ್ತ 30 ವರ್ಷದ ವ್ಯಕ್ತಿಯೊಬ್ಬ ಆತ್ಮಹತ್ಯೆ  ಮಾಡಿಕೊಂಡಿರುವ ಘಟನೆ ಹರಿಯಾಣದ  ರೋಹ್ಟಕ್‌ನ  ದೋಭ್ ಗ್ರಾಮದಲ್ಲಿ ನಡೆದಿದೆ. ಕೃಷಿಕನಾಗಿದ್ದ ಮಗನ್ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಪತ್ನಿ ಮತ್ತು ಆಕೆಯ ಗೆಳೆಯ ಕಿರುಕುಳ ನೀಡುತ್ತಿರುವ ಬಗ್ಗೆ ಆತ ಸಾಮಾಜಿಕ ಮಾಧ್ಯಮದಲ್ಲಿ  ವಿಡಿಯೊವನ್ನು ಹಂಚಿಕೊಂಡು ಬಳಿಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸ್ಥಳೀಯ ಪೊಲೀಸರು ಬುಧವಾರ ತಿಳಿಸಿದ್ದಾರೆ.

   ಜೂನ್ 18ರಂದು ಆತ್ಮಹತ್ಯೆ ಮಾಡಿಕೊಂಡಿದ್ದ ಮಗನ್ ಇದಕ್ಕೂ ಮೊದಲು ನಾಲ್ಕು ನಿಮಿಷಗಳ ವಿಡಿಯೊ ರೆಕಾರ್ಡ್ ಮಾಡಿದ್ದಾನೆ. ಅದರಲ್ಲಿ ಆತ ತನ್ನ ಪತ್ನಿ ದಿವ್ಯಾ ಮತ್ತು ಆಕೆಯ ಗೆಳೆಯ ಹಣಕ್ಕಾಗಿ ತನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾನೆ. 

   ಮಗನ್ ರೆಕಾರ್ಡ್ ಮಾಡಿರುವ ವಿಡಿಯೊದಲ್ಲಿ, ”ಮಹಾರಾಷ್ಟ್ರ ಪೊಲೀಸರೇ ದಿವ್ಯಾ ಮತ್ತು ಆಕೆಯ ಗೆಳೆಯನ ಕಾರಣದಿಂದಾಗಿ ನಾನು ನನ್ನ ಜೀವನವನ್ನು ಅಂತ್ಯಗೊಳಿಸುತ್ತಿದ್ದೇನೆ. ಅವರಿಬ್ಬರು ಹಣಕ್ಕಾಗಿ ನನಗೆ ಕಿರುಕುಳ ನೀಡುತ್ತಿದ್ದಾರೆ. ಇಬ್ಬರೂ ಮಹಾರಾಷ್ಟ್ರದ ಇಗತ್ಪುರಿಯಲ್ಲಿ ಒಟ್ಟಿಗೆ ವಾಸಿಸುತ್ತಿದ್ದಾರೆ. ನಾನು ನನ್ನ ತಂದೆಯನ್ನು ಕೊಂದು ಬಳಿಕ ಪೂರ್ವಜರ ಭೂಮಿಯನ್ನು ಮಾರಾಟ ಮಾಡಲು ಒತ್ತಾಯಿಸುತ್ತಿದ್ದಾರೆ. ಆ ಭೂಮಿಯಿಂದ ಸಿಗುವ ಹಣದಿಂದ ಮುಂಬೈಯಲ್ಲಿ ಭೂಮಿಯನ್ನು ಖರೀದಿಸುವುದಾಗಿ ಹೇಳುತ್ತಿದ್ದಾರೆ. ಅವರಿಂದ ನನಗೆ ತುಂಬಾ ತೊಂದರೆಯಾಗಿದೆ. ನಾನು ನನ್ನ ತಂದೆಯನ್ನು ಕೊಲ್ಲಲು ಸಾಧ್ಯವಿಲ್ಲ. ಆದ್ದರಿಂದ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆʼʼ ಎಂದು ಮಗನ್ ತಿಳಿಸಿದ್ದಾನೆ.

   ಮಗನ್ ಪತ್ನಿ ದಿವ್ಯಾಗೆ ಮೊದಲೇ ಮದುವೆಯಾಗಿತ್ತು. ಈ ವಿಚಾರ ಮಗನ್‌ಗೆ ಮದುವೆಯ ಬಳಿಕ ತಿಳಿದು ಬಂದಿತ್ತು. ಇದರಿಂದ ಆತ ತೀವ್ರ ಮಾನಸಿಕ ಆಘಾತಕ್ಕೆ ಒಳಗಾಗಿದ್ದ ಎನ್ನಲಾಗಿದೆ. ʼʼದಿವ್ಯಾಳಿಗೆ ಮದುವೆಯಾಗಿ ಒಬ್ಬ ಮಗನಿದ್ದಾನೆ. ಮೊದಲ ಪತಿಯಿಂದ ಆಕೆ ಕಾನೂನು ಬದ್ದವಾಗಿ ವಿಚ್ಛೇದನ ಪಡೆದಿಲ್ಲ. ಇದು ನನಗೆ ಮದುವೆಯಾದ ಒಂದು ವರ್ಷದ ಬಳಿಕ ತಿಳಿಯಿತುʼʼ ಎಂದು ಮಗನ್ ಹೇಳಿದ್ದಾನೆ.

   ಈ ಕುರಿತು ಕಾನೂನು ಸಲಹೆ ಪಡೆಯಲು ಮಗನ್ ಮುಂದಾದಾಗ ದಿವ್ಯಾ ವಿರುದ್ಧ ಪ್ರಕರಣ ದಾಖಲಿಸಲು ವಕೀಲರು ಸಲಹೆ ನೀಡಿದರು. ʼʼನಾನು ಆಕೆಯ ಮೊದಲ ಪತಿಯೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಲು ಅವಳಿಗೆ ಹಣ ನೀಡಿದ್ದೆ. ಆದರೆ ಆಕೆ ಈಗ ಮತ್ತೊಬ್ಬ ಪುರುಷನೊಂದಿಗೆ ಇದ್ದಾಳೆ. ಮಾರ್ಚ್‌ನಲ್ಲಿ ಕೆಲಸದ ನೆಪ ಹೇಳಿ ಮನೆ ಬಿಟ್ಟು ಹೋದವಳು ಮರಳಿ ಮನೆಗೆ ಬಂದಿಲ್ಲ. ಅವರಿಬ್ಬರು ತನ್ನಲ್ಲಿ 5 ಲಕ್ಷ ರೂ. ಗೆ ಬೇಡಿಕೆ ಇಟ್ಟಿದ್ದಾರೆ. ಅದರಲ್ಲಿ ಸ್ವಲ್ಪ ಹಣವನ್ನು ಚಿನ್ನಾಭರಣ ಅಡ ಇಟ್ಟು ಪಾವತಿಸಿದ್ದೇನೆʼʼ ಎಂದು ಮಗನ್ ವಿಡಿಯೊದಲ್ಲಿ ಹೇಳಿಕೊಂಡಿದ್ದಾನೆ.

   ಮಗನ್ ನೇಣು ಹಾಕಿಕೊಳ್ಳುವ ಮೊದಲು ದಿವ್ಯಾ ನೃತ್ಯ ಮಾಡುತ್ತಿದ್ದ ವಿಡಿಯೊ ಪೊಲೀಸರ ಕೈಗೆ ಸಿಕ್ಕಿದ್ದು, ಇದನ್ನು ಆಕೆಯ ಗೆಳೆಯ ರೆಕಾರ್ಡ್ ಮಾಡಿದ್ದ ಎನ್ನಲಾಗಿದೆ. ವಿಡಿಯೊದ ಕೊನೆಯಲ್ಲಿ ಮಗನ್ ಅಳುತ್ತಾ, ಕಾಂಗ್ರೆಸ್‌ನ ರೋಹ್ಟಕ್ ಸಂಸದ ದೀಪೇಂದರ್ ಸಿಂಗ್ ಹೂಡಾ ಮತ್ತು ಮೆಹಮ್ ಶಾಸಕ ಬಲರಾಮ್ ಡಾಂಗಿ ಅವರ ಬಳಿ ತನ್ನ ಮರಣದ ಅನಂತರ ಮಗ ತನ್ನ ಹೆತ್ತವರೊಂದಿಗೆ ಇರುವಂತೆ ಮಾಡಿ ಎಂದು ಮನವಿ ಮಾಡಿದ್ದಾನೆ.

    ಈ ಕುರಿತು ಮಾಹಿತಿ ನೀಡಿದ ರೋಹ್ಟಕ್ ಸಹಾಯಕ ಸಬ್-ಇನ್ಸ್‌ಪೆಕ್ಟರ್ ಸಂಜಯ್ ಕುಮಾರ್, ʼʼಮಗನ್ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು ಪ್ರಕರಣ ದಾಖಲಿಸಲಾಗಿದೆ. ದಿವ್ಯಾಳಿಗಾಗಿ ಹುಡುಕಾಟ ನಡೆಯುತ್ತಿದೆʼʼ ಎಂದು ತಿಳಿಸಿದ್ದಾರೆ.

Recent Articles

spot_img

Related Stories

Share via
Copy link