ಮಹತ್ವದ ತೆರಿಗೆ ಮಸೂದೆಗೆ ಅಮೆರಿಕ ಸಂಸತ್‌ ಅಸ್ತು……!

ವಾಷಿಂಗ್ಟನ್‌:

    ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಹತ್ವಾಕಾಂಕ್ಷಿ ಪ್ರಾಥಮಿಕ ತೆರಿಗೆ ಮತ್ತು ಖರ್ಚು ಮಸೂದೆಗೆ ಅಮೆರಿಕ ಕಾಂಗ್ರೆಸ್‌ನಲ್ಲಿ ಅಂಗೀಕಾರ ದೊರೆತಿದ್ದು, ಅಧಿಕಾರಕ್ಕೆ ಬಂದ ಕೆಲವೇ ತಿಂಗಳಲ್ಲಿ ಟ್ರಂಪ್‌ ಸರ್ಕಾರಕ್ಕೆ ಮಹತ್ವ ಜಯ ದೊರೆಯಿದೆ. ಕಾಂಗ್ರೆಸ್‌ ಅತ್ಯಲ್ಪ ಮತಗಳ ಅಂತರದಿಂದ ಪ್ರಮುಖ ತೆರಿಗೆ ಮಸೂದೆಯನ್ನು ಅಂಗೀಕರಿಸಿದ್ದರೂ, ಈ ಬೆಳವಣಿಗೆ ಡೊನಾಲ್ಡ್‌ ಟ್ರಂಪ್‌ ಅವರ ಎರಡನೇ ಅವಧಿಯ ಆಮೂಲಾಗ್ರ ಕಾರ್ಯಸೂಚಿಯನ್ನು ಬಲಪಡಿಸಿದೆ. ಇಷ್ಟೇ ಅಲ್ಲದೇ ಟ್ರಂಪ್‌ ಆಡಳಿತದ ವಲಸೆ ವಿರೋಧಿ ಅಭಿಯಾನಕ್ಕೆ ಮತ್ತಷ್ಟು ಬಲ ನೀಡಿದೆ ಎನ್ನಲಾಗಿದೆ. 

   ಈ ಮಸೂದೆ ಬಗ್ಗೆ ಅಧ್ಯಕೀಯ ಚುನಾವಣೆ ನಡೆಯುವುದಕ್ಕೂ ಮುನ್ನ ಪ್ರಚಾರದ ಸಭೆಯಲ್ಲಿ ಟ್ರಂಪ್‌ ಪ್ರಸ್ತಾಪಿಸಿದ್ದರು. ಆ ಪ್ರಕಾರ ಈ ಮಸೂದೆ ಮಿಲಿಟರಿ ವೆಚ್ಚವನ್ನು ಹೆಚ್ಚಿಸುವುದು, ಅಕ್ರಮ ವಲಸಿಗರ ಸಾಮೂಹಿಕ ಗಡಿಪಾರು ಪ್ರಕ್ರಿಯೆಗೆ ಹಣಕಾಸು ಒದಗಿಸುವುದು ಮತ್ತು ಅವರ ಮೊದಲ ಅವಧಿಯ ತೆರಿಗೆ ಪರಿಹಾರವನ್ನು ವಿಸ್ತರಿಸಲು 4.5 ಟ್ರಿಲಿಯನ್ ಅಮೆರಿಕನ್‌ ಡಾಲರ್‌ ಅನುದಾನ ನೀಡುವುದು ಇದರಲ್ಲಿ ಸೇರಿದೆ. 

   ಟ್ರಂಪ್‌ ಅವರ ಈ ಮಸೂದೆಗೆ ಅಮೆರಿಕದಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಟ್ರಂಪ್ ಅವರ ಸ್ವಂತ ರಿಪಬ್ಲಿಕನ್ ಪಕ್ಷದ ಹಲವಾರು ಸದಸ್ಯರು ಅಮೆರಿಕದ ರಾಷ್ಟ್ರೀಯ ಸಾಲ ಮತ್ತು ಆರೋಗ್ಯ ರಕ್ಷಣೆಯ ಮೇಲಿನ ಪರಿಣಾಮ ಸೇರಿದಂತೆ ಹಲವಾರು ಕಾರಣಗಳಿಗಾಗಿ ಮಸೂದೆಯನ್ನು ಟೀಕಿಸಿದ್ದಾರೆ. ಅಲ್ಲದೇ ವಿರೋಧ ಪಕ್ಷದ ಡೆಮೋಕ್ರಾಟ್‌ಗಳ ಪರವಾಗಿ ನಿಂತಿದ್ದಾರೆ. ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳನ್ನು ಕಡಿತಗೊಳಿಸುವ ಮತ್ತು ಸುಮಾರು 3 ಟ್ರಿಲಿಯನ್ ಡಾಲರ್‌ನಷ್ಟು ರಾಷ್ಟ್ರೀಯ ಸಾಲ ಹೆಚ್ಚಾಗುವ ಭೀತಿ ಇದೆ ಎಂದು ಹಲವರ ಅಭಿಪ್ರಾಯವಾಗಿದೆ. ಈ ಮಸೂದೆ ಫೆಡರಲ್ ಆಹಾರ ಸಹಾಯ ಕಾರ್ಯಕ್ರಮವನ್ನು ಕುಗ್ಗಿಸುತ್ತದೆಯಲ್ಲದೇ, ಕಡಿಮೆ ಆದಾಯ ಹೊಂದಿರುವ ಯುಎಸ್‌ ನಾಗರಿಕರಿಗಾಗಿ ಜಾರಿ ಮಾಡಲಾಗಿರುವ ಆರೋಗ್ಯ ವಿಮಾ ಯೋಜನೆಗೆ ಅತಿದೊಡ್ಡ ಕಡಿತಗಳನ್ನು ಒತ್ತಾಯಿಸುತ್ತದೆ ಎಂದು ವಿರೋಧಿಗಳು ಆರೋಪಿಸಿದ್ದಾರೆ. ಕೆಲವು ಅಂದಾಜಿನ ಪ್ರಕಾರ ಮಸೂದೆಯ ಅಡಿಯಲ್ಲಿ ತಮ್ಮ ವಿಮಾ ರಕ್ಷಣೆಯನ್ನು ಕಳೆದುಕೊಳ್ಳುವ ಒಟ್ಟು ಅಮೆರಿಕನ ಪ್ರಜೆಗಳ ಸಂಖ್ಯೆ 17 ಮಿಲಿಯನ್ ಎಂದು ಹೇಳಲಾಗಿದೆ. ಹಲವಾರು ಗ್ರಾಮೀಣ ಆಸ್ಪತ್ರೆಗಳು ಕೂಡ ಮುಚ್ಚುವ ನಿರೀಕ್ಷೆಯಿದೆ. 

   ಇನ್ನು ಈ ಮಸೂದೆ ವಿಚಾರಕ್ಕೆ ಟೆಸ್ಲಾ ಮುಖ್ಯಸ್ಥ ಎಲಾನ್‌ ಮಸ್ಕ್‌ ಮತ್ತು ಟ್ರಂಪ್‌ ನಡುವಿನ ಸಂಬಂಧ ಮುರಿದು ಬಿದ್ದಿತ್ತು. ಮಿಲಿಟರಿ ಮತ್ತು ಗಡಿ ಭದ್ರತೆಗೆ ಹೆಚ್ಚುವರಿ ವೆಚ್ಚವನ್ನು ಶುದ್ಧ ಇಂಧನ ಮತ್ತು ವಿದ್ಯುತ್ ವಾಹನ ಸಬ್ಸಿಡಿಗಳನ್ನು ಕಡಿತಗೊಳಿಸಲು ಈ ಮಸೂದೆ ಅನುವು ಮಾಡಿಕೊಟ್ಟಿದೆ. ಇದರಿಂದ ಮಸ್ಕ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಕೆಲವು ದಿನಗಳ ಹಿಂದೆ ಯುಎಸ್‌ ಕಾಂಗ್ರೆಸ್‌ ಒನ್‌ ಬಿಗ್‌ ಬ್ಯೂಟಿಫುಲ್‌ ಬಿಲ್‌ನ್ನು ಅಂಗೀಕರಿಸಿದ ಮರುದಿನವೇ ಅಮೆರಿಕನ್‌ ಪಾರ್ಟಿ ಹೆಸರಿನ ಹೊಸ ರಾಜಕೀಯ ಪಕ್ಷ ಉದಯವಾಗಲಿದೆ ಎಂದು ಮಸ್ಕ್‌ ಟ್ರಂಪ್‌ಗೆ ಬಹಿರಂಗ ಎಚ್ಚರಿಕೆಯನ್ನೂ ನೀಡಿದ್ದರು. 

   ಇನ್ನು ಈ ಮಸೂದೆ ಭಾರತವೂ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಆತಂಕ ಸೃಷ್ಟಿಸಿದೆ. ಏಕೆಂದರೆ ಡೊನಾಲ್ಡ್‌ ಟ್ರಂಪ್‌ ವಿದೇಶಗಳಿಗೆ ಹಣ ವರ್ಗಾವಣೆ ಮೇಲೆ ಶೇ.3.5ರಷ್ಟು ತೆರಿಗೆ ವಿಧಿಸಿದೆ. ಇದು ಅಮೆರಿಕದಿಂದ ಅತಿಹೆಚ್ಚು ಹಣ ವರ್ಗಾವಣೆಯನ್ನು ಸ್ವೀಕರಿಸುವ ಭಾರತದ ಮೇಲೆ ಅತಿ ದೊಡ್ಡಮಟ್ಟದ ಪರಿಣಾಮ ಬೀರುತ್ತದೆ. ಅಲ್ಲದೇ ಈ ಮಸೂದೆ ಅಂಗೀಕಾರಗೊಂಡಿರುವುದರಿಂದ ಅಮೆರಿಕದಲ್ಲಿರುವ ಭಾರತೀಯರು, ಭಾರತದಲ್ಲಿರುವ ತಮ್ಮ ಕುಟುಂಬಕ್ಕೆ ಹಣ ರವಾನಿಸುವುದು ಇದೀಗ ತುಸು ಕಷ್ಟವಾಗಿದೆ. ಗ್ರೀನ್ ಕಾರ್ಡ್ ಹೊಂದಿರುವವರು, H-1B ಅಥವಾ H-2A ನಂತಹ ತಾತ್ಕಾಲಿಕ ವೀಸಾಗಳಲ್ಲಿರುವ ಜನರು ಮತ್ತು ವಿದೇಶಿ ವಿದ್ಯಾರ್ಥಿಗಳು ಸೇರಿದಂತೆ ಅಮೆರಿಕ ನಾಗರಿಕರಲ್ಲದ ಎಲ್ಲಾ ಅಮೆರಿಕ ನಿವಾಸಿಗಳಿಗೆ ಈ ನಿಯಮ ಅನ್ವಯಿಸುತ್ತದೆ. ಎಲ್ಲಾ ಅಂತರರಾಷ್ಟ್ರೀಯ ಹಣ ವರ್ಗಾವಣೆಯ ಮೇಲಿನ ತೆರಿಗೆ ಅಮೆರಿಕದಲ್ಲಿ ವಾಸಿಸುವ ಸುಮಾರು 45 ಲಕ್ಷ ಭಾರತೀಯರ ಮೇಲೆ ಪರಿಣಾಮ ಬೀರಲಿದೆ.

Recent Articles

spot_img

Related Stories

Share via
Copy link