ಮೈಸೂರಿನಲ್ಲಿ ನಡುರಸ್ತೆಯಲ್ಲೇ ಕುಟುಂಬದ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ

ಮೈಸೂರು:

  ಮೈಸೂರಿನಲ್ಲಿ  ಬೆಚ್ಚಿ ಬೀಳಿಸುವಂಥ ಮಾರಣಾಂತಿಕ ಹಲ್ಲೆ  ಘಟನೆಯೊಂದು ಜನನಿಬಿಡ ರಸ್ತೆಯಲ್ಲೇ ನಡೆದಿದೆ. ಚಲಿಸುತ್ತಿದ್ದ ಆಟೋವನ್ನು ಅಡ್ಡಹಾಕಿದ ಗೂಂಡಾಗಳ ಗುಂಪೊಂದು ಅದರಲ್ಲಿದ್ದವರ ಮೇಲೆ ಮಚ್ಚಿನಿಂದ ಏಕಾಏಕಿ ದಾಳಿ ಮಾಡಿದೆ. ಘಟನೆಯ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೈಸೂರಿನ  ಹೃದಯ ಭಾಗದಲ್ಲಿರುವ ಅಗ್ರಹಾರ ರಸ್ತೆಯಲ್ಲಿ ಈ ಘಟನೆ ಗುರುವಾರ ರಾತ್ರಿ 9:20ರ ಸುಮಾರಿಗೆ ನಡೆದಿದ್ದು, ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ.

   ಅಗ್ರಹಾರ ರಸ್ತೆಯ ಜನದಟ್ಟಣೆ ಇರುವ ರಾಮಾನುಜ ರಸ್ತೆಯಲ್ಲಿ ಆಟೋ ಒಂದು ಅದರ ಪಾಡಿಗೆ ಹೋಗುತ್ತಾ ಇರುತ್ತದೆ. ಆಟೋವನ್ನೇ ಹಿಂಬಾಲಿಸಿಕೊಂಡು ಬಂದ ಕಪ್ಪು ಬಣ್ಣದ ಕಾರು ಏಕಾಏಕಿ ಆಟೋವನ್ನು ಅಡ್ಡಹಾಕಿದೆ. ಮಚ್ಚು ಸಮೇತ ಕಾರಿನಿಂದ ಇಳಿದು ಬಂದವರು ಆಟೋದೊಳಗಿದ್ದವರ ಮೇಲೆ ಮನಬಂದಂತೆ ಮಚ್ಚು ಬೀಸಿದ್ದಾರೆ. ಸ್ಥಳೀಯರು ಇದೇನಾಗುತ್ತಿದೆ ಎಂದು ನೋಡುವಷ್ಟರಲ್ಲಿ ಆಟೋದೊಳಗಿದ್ದ ಮೂವರು ಮಹಿಳೆಯರು ಹಾಗೂ ಒಬ್ಬ ಯುವಕನ ಮೇಲೆ ಯದ್ವಾತದ್ವಾ ಮಚ್ಚಿನಿಂದ ಹಲ್ಲೆ ಮಾಡಲಾಗಿದೆ. ನಂತರ ಅದೇ ಕಾರಿನಲ್ಲಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

   ಘಟನೆಯಲ್ಲಿ ಆಟೋದಲ್ಲಿದ್ದ ಇಬ್ಬರು ಮಹಿಳೆಯರು ಹಾಗೂ ಒಬ್ಬ ಯುವಕನಿಗೆ ಗಂಭೀರ ಗಾಯಗಳಾಗಿವೆ. ಈ ಸಿನಿಮೀಯ ಶೈಲಿಯ ದಾಳಿಯ ದೃಶ್ಯ ಅಲ್ಲೇ ಇದ್ದ ಸಿಸಿ ಕ್ಯಾಮರಾ ಹಾಗೂ ಸ್ಥಳೀಯರ ಮೊಬೈಲ್​​​ನಲ್ಲಿ ರೆಕಾರ್ಡ್ ಆಗಿದೆ. ಮೈಸೂರಿನಲ್ಲಿ ಜನ ಸಂಚಾರ ಹೆಚ್ಚಾಗಿರುವ ಹೊತ್ತಿನಲ್ಲೇ ಇಂಥದ್ದೊಂದು ಘಟನೆ ಸಂಭವಿಸಿರುವುದು ಸಾರ್ವಜನಿಕರಲ್ಲಿ ಭೀತಿ ಮೂಡಿಸಿದೆ.

   ಪೋಕ್ಸೋ‌ ಕೇಸೊಂದರ ರಾಜಿ ಸಂಧಾನ ವಿಫಲವಾದ ಕಾರಣ ದಾಳಿ ನಡೆದಿದೆ ಎಂಬ ಮಾಹಿತಿ ದೊರೆತಿದೆ. ಪ್ರಕರಣದ ಸಂತ್ರಸ್ತೆಯ ಕುಟುಂಬಸ್ಥರು ಆರೋಪಿತರ ಕುಟುಂಬದವರ ಮೇಲೆ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಹಲ್ಲೆಗೊಳಗಾದವರು ಕುಮುದಾ, ವಿಶಾಲಾಕ್ಷಿ, ರೇಣುಕಮ್ಮ, ರಾಜಣ್ಣ ಎಂದು ತಿಳಿದುಬಂದಿದ್ದು, ಇವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Recent Articles

spot_img

Related Stories

Share via
Copy link