ಬಾಗಲಕೋಟೆ:
ದೇಶವನ್ನೇ ಬೆಚ್ಚಿಬೀಳಿಸಿದ್ದ ಕೋಲ್ಕತಾ ಕಾಲೇಜು ಹಾಸ್ಟೆಲ್‌ನಲ್ಲಿ ಯುವತಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಎ1 ಆರೋಪಿ ಬಾಗಲಕೋಟೆ ಮೂಲದ ಪರಮಾನಂದ ಟೋಪಣ್ಣವರ ಎಂಬ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ . ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಲೋಕಾಪುರ ನಿವಾಸಿಯಾಗಿರುವ ಪರಮಾನಂದನನ್ನು ಜು. 12ರಂದೇ ಪೊಲೀಸರು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೋಲ್ಕತ್ತಾದ ಐಐಎಂ ಕಾಲೇಜಿನಲ್ಲಿ 2ನೇ ವರ್ಷದ ಎಂಬಿಎ ವಿದ್ಯಾರ್ಥಿಯಾಗಿರುವ ಪರಮಾನಂದ ಹಾಸ್ಟೆಲ್‌ನಲ್ಲಿ ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ. ವಿದ್ಯಾರ್ಥಿನಿಯನ್ನು ಹಾಸ್ಟೆಲ್‌ಗೆ ಕರೆಸಿಕೊಂಡು ಪಿಜ್ಜಾ ತಿನ್ನಿಸಿ ಮತ್ತು ಬರುವ ಪಾನೀಯ ಕುಡಿಸಿ ಅತ್ಯಾಚಾರ ಮಾಡಿರುವ ಆರೋಪವಿದೆ.
ಪರಮಾನಂದ ಸ್ನೇಹಿತರಿಂದ ಆತನ ಬಂಧನದ ಬಗ್ಗೆ ಕುಟುಂಬಸ್ಥರಿಗೆ ಮಾಹಿತಿ ಲಭಿಸಿದ್ದು, ಪಾಲಕರು ಕೋಲ್ಕತಾಗೆ ತೆರಳಿದ್ದಾರೆ. ಹೀಗಾಗಿ ಸದ್ಯ ಪರಮಾನಂದನ ಲೋಕಾಪುರ ಮನೆ ಖಾಲಿ ಖಾಲಿಯಾಗಿದೆ.
ಕೋಲ್ಕತಾ ಐಐಎಂ ಕ್ಯಾಂಪಸ್‌ನ ಹುಡುಗರ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಯೊಬ್ಬ ಮಾದಕ ದ್ರವ್ಯ ಬೆರೆಸಿದ ಪಾನೀಯ ಕುಡಿಸಿ ಅತ್ಯಾಚಾರ ಎಸಗಿದ್ದಾನೆ ಎಂದು ಯುವತಿಯೊಬ್ಬಳು ಇತ್ತೀಚೆಗೆ ಪೊಲೀಸರಿಗೆ ದೂರು ನೀಡಿದ್ದಳು. ಈ ವಿಚಾರ ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು. ಕೌನ್ಸೆಲಿಂಗ್ ನೆಪದಲ್ಲಿ ಹುಡುಗರ ಹಾಸ್ಟೆಲ್‌ಗೆ ಕರೆಸಿ ಕೃತ್ಯ ಎಸಗಿದ್ದಾನೆ ಎಂದು ಆಕೆ ದೂರಿನಲ್ಲಿ ತಿಳಿಸಿದ್ದಳು.
ʼಕೌನ್ಸೆಲಿಂಗ್‌ಗಾಗಿ ನನ್ನನ್ನು ಹಾಸ್ಟೆಲ್‌ಗೆ ಕರೆಸಲಾಗಿತ್ತು. ನಂತರ ಹಾಸ್ಟೆಲ್‌ನಲ್ಲಿ ಮಾದಕ ದ್ರವ್ಯ ಬೆರೆಸಿದ ಪಾನೀಯ ನೀಡಲಾಗಿತ್ತು. ಪಾನೀಯ ಸೇವಿಸಿದ ಬಳಿಕ ಪ್ರಜ್ಞಾಹೀನಳಾದೆ. ಪ್ರಜ್ಞೆ ಮರಳಿದ ನಂತರ ಅತ್ಯಾಚಾರ ನಡೆದಿದೆ ಎಂದು ಅರಿವಾಯಿತುʼʼ ಎಂದು ಸಂತ್ರಸ್ತೆ ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದ್ದಳು. ಈ ವಿಷಯವನ್ನು ಯಾರಿಗಾದರೂ ಬಹಿರಂಗಪಡಿಸಿದರೆ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಆರೋಪಿ ಬೆದರಿಕೆ ಹಾಕಿದ್ದಾನೆ ಎಂದು ಆಕೆ ಆರೋಪಿಸಿದ್ದಳು.
ನಂತರ ಪರಮಾನಂದನನ್ನು ವಶಕ್ಕೆ ಪಡೆದಿದ್ದ ಕೋಲ್ಕತ್ತಾ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಕೋಲ್ಕತ್ತಾ ನ್ಯಾಯಾಲಯವು ಆರೋಪಿಯ ಜಾಮೀನು ತಿರಸ್ಕರಿಸಿ, 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿತ್ತು. ಜು.19ರಂದು ಕಸ್ಟಡಿ ಅವಧಿ ಮುಗಿಯಲಿದೆ.
ಅದಕ್ಕೂ ಕೆಲವು ದಿನಗಳ ಹಿಂದೆ ಕೋಲ್ಕತಾ ಲಾ ಕಾಲೇಜಿನಲ್ಲಿ ಮತ್ತೊಂದು ಸಾಮೂಹಿಕ ಅತ್ಯಾಚಾರ ಪ್ರಕರಣ ನಡೆದಿತ್ತು. ಸೌತ್ ಕೋಲ್ಕತಾ ಲಾ ಕಾಲೇಜಿನಲ್ಲಿ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ವಿದ್ಯಾರ್ಥಿ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳು ಬ್ಲ್ಯಾಕ್‌ಮೇಲ್ ಮಾಡಿ ವಿಡಿಯೋ ಮಾಡಿದ್ದರು ಎಂದು ಸಂತ್ರಸ್ತೆ ಆರೋಪಿಸಿದ್ದರು. ಆರೋಪಿಗಳಲ್ಲಿ 31 ವರ್ಷದ ಮೊನೊಜಿತ್ ಮಿಶ್ರಾ, 19 ವರ್ಷದ ಜೈಬ್ ಅಹ್ಮದ್ ಮತ್ತು 20 ವರ್ಷದ ಪ್ರಮಿತ್ ಮುಖರ್ಜಿ ಸೇರಿದ್ದಾರೆ.
