ನವದೆಹಲಿ:
ಮನೆಗಳಿಗೆ ವಿಭಿನ್ನ, ಆಕರ್ಷಕವಾದ ತೂಗುದೀಪ ಅಥವಾ ದೀಪಗುಚ್ಛ ಅಳವಡಿಸಿರುವುದನ್ನು ನೀವು ನೋಡಿರಬಹುದು. ಆದರೆ, ಎಂದಾದರೂ ದುಬಾರಿ ಕಾರಿನ ತೂಗುದೀಪ ಅಳವಡಿಸಿರುವುದನ್ನು ಬಹುಶಃ ಎಲ್ಲೂ ನೋಡಿರಲಿಕ್ಕಿಲ್ಲ. ದುಬೈನ ಉದ್ಯಮಿ ಮತ್ತು ಡಿಜಿಟಲ್ ಕ್ರಿಯೇಟರ್ ಆಗಿರುವ ಸಿರಿವಂತ ವ್ಯಕ್ತಿಯೊಬ್ಬರು ತಮ್ಮ ಬಂಗಲೆಯಲ್ಲಿ ಡಾಲರ್ 50,000 ಮೌಲ್ಯದ ಐಷಾರಾಮಿ ಫೆರಾರಿ ಕಾರನ್ನು ನೇತುಹಾಕಿದ್ದಾರೆ. ಅದನ್ನು ತನ್ನ ಹೊಸ ದೀಪಗುಚ್ಛ ಎಂದು ಕರೆದಿದ್ದಾರೆ. ಇದರ ವಿಡಿಯೋ ಈಗ ಭಾರಿ ವೈರಲ್(Viral Video) ಆಗಿದೆ.
ಮನೆಯ ಛಾವಣಿಗೆ ದೀಪಗುಚ್ಛದಂತೆ ಐಷಾರಾಮಿ ಫೆರಾರಿ ಕಾರನ್ನು ನೇತುಹಾಕಿರುವ ವಿಡಿಯೋ ನೋಡಿದ ನೆಟ್ಟಿಗರಿಗೆ ಅಚ್ಚರಿಯಾಗಿದೆ. ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ ಎಂದು ಕೆಲವು ಬಳಕೆದಾರರು ಪ್ರತಿಕ್ರಿಯಿಸಿದ್ದರೆ, ಇನ್ನು ಕೆಲವರು ಕಾರು ನಕಲಿ ಪ್ಲಾಸ್ಟಿಕ್ ಆಟಿಕೆ ಆಗಿರಬಹುದು ಎಂದು ಊಹಿಸಿದ್ದಾರೆ.
ಶ್ರೀಮಂತ ಉದ್ಯಮಿ ಕಾರನ್ನು ಛಾವಣಿ (ಸೀಲಿಂಗ್) ಗೆ ನೇತುಹಾಕಿದ್ದಾರೆ. @movlogs ಎಂಬ ಹೆಸರಿನ ಇನ್ಸ್ಟಾಗ್ರಾಂ ಪೇಜ್‌ನಲ್ಲಿ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ, ಪುರುಷರ ಗುಂಪೊಂದು ಕಾರನ್ನು ಎತ್ತಿಕೊಂಡು ಹೋಗುತ್ತಿರುವುದನ್ನು ಕಾಣಬಹುದು. ಕೆಂಪು ಬಣ್ಣದ ಕಾರನ್ನು ಮನೆಯೊಳಗೆ ಎತ್ತಿಕೊಂಡು ಹೋದ ತಂಡ, ಬಂಗಲೆಯ ಸೀಲಿಂಗ್‌ಗೆ ವಿದ್ಯುತ್ ದೀಪಗುಚ್ಛದಂತೆ ನೇತುಹಾಕಿದ್ದಾರೆ.
ವಿಡಿಯೋ ನೋಡಿದ ನೆಟ್ಟಿಗರು ತರಹೇವಾರಿಯಾಗಿ ಪ್ರತಿಕ್ರಿಯಿಸಿದ್ದಾರೆ. ತೂಗುದೀಪ ಅಥವಾ ಗೊಂಚಲು ದೀಪದಂತೆ ನೇತುಹಾಕಲು ಕಾರು ನಕಲಿಯಾಗಿರಬಹುದು ಎಂದು ಕೆ, ಲವರು ಹೇಳಿದ್ದಾರೆ. ಕೆಲವರು ಪ್ಲಾಸ್ಟಿಕ್ ಆಟಿಕೆ ಎಂದರೆ, ಬಳಕೆದಾರರೊಬ್ಬರು ಅಪಘಾತಕ್ಕೀಡಾದ ಕಾರನ್ನು ಸರಿಪಡಿಸಿ ಈ ರೀತಿ ಪರಿವರ್ತಿಸಿರಬಹುದು, ನೋಡಲು ಭಯಾನಕವಾಗಿ ಕಾಣುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ. ಭೂಕಂಪದ ಸಮಯದಲ್ಲಿ ಅದು ಬೀಳದಿರಲಿ ಎಂದು ಹಾರೈಸುವುದಾಗಿ ಬಳಕೆದಾರರೊಬ್ಬರು ತಮಾಷೆ ಮಾಡಿದ್ದಾರೆ. ಇದು ಕೇವಲ ಒಂದು ಮಾಡೆಲ್ ಅಥವಾ ಮಾದರಿಯಷ್ಟೇ, ಈ ಕಾರಿಗೆ ಯಾವುದೇ ಬಾಗಿಲುಗಳಿಲ್ಲ, ಹೀಗಾಗಿ ಇದು ನಕಲಿ ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ.
