ಬೆಂಗಳೂರು:
ಸಂಸದ ತೇಜಸ್ವಿ ಸೂರ್ಯ ಗೋವಾದಲ್ಲಿ ನಡೆದ ಐರನ್‌ಮ್ಯಾನ್ 70.3 ಎಂಡ್ಯೂರೆನ್ಸ್ ಓಟವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಮೊದಲ ಜನ ಪ್ರತಿನಿಧಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಸ್ಫರ್ಧೆಯು 1900 ಮೀಟರ್ ಈಜು, 90 ಕಿ.ಮೀ ಸೈಕ್ಲಿಂಗ್ ಮತ್ತು 21.1 ಕಿ.ಮೀ ಓಟ ಹೀಗೆ 3 ವಿಭಾಗಗಳಲ್ಲಿ ನಡೆಯಿತು. ಸ್ಪರ್ಧೆಯಲ್ಲಿ ಪಾಲ್ಗೊಂಡ ತೇಜಸ್ವಿ ಸೂರ್ಯ ಅವರುಸ 8 ಗಂಟೆ, 27 ನಿಮಿಷ ಮತ್ತು 32 ಸೆಕೆಂಡುಗಳಲ್ಲಿ ಈ ಎಲ್ಲ ಚಟುವಟಿಕೆಗಳನ್ನು ಪೂರ್ಣಗೊಳಿಸುವ ಮೂಲಕ ಗೆಲುವು ಸಾಧಿಸಿದರು. ಈ ಮೂಲಕ ಐರನ್ ಮ್ಯಾನ್ 70.3 ರೇಸ್ ಯಶಸ್ವಿಯಾಗಿ ಪೂರೈಸಿದ ಮೊದಲ ಜನಪ್ರತಿನಿಧಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.ತೇಜಸ್ವಿ ಸೂರ್ಯ ಅವರು ತಮ್ಮ ಸಾಧನೆಯನ್ನು ಭಾರತದ ಕ್ರೀಡಾಪಟುಗಳು ಮತ್ತು ಕ್ರೀಡಾ ಆಟಗಾರರಿಗೆ ಅರ್ಪಿಸಿದರು.
‘ಗೋವಾ ಐರನ್ ಮ್ಯಾನ್ ಕ್ರೀಡೆಗೆ ಹೆಸರುವಾಸಿ. 50ಕ್ಕೂ ಹೆಚ್ಚು ದೇಶಗಳ ಕ್ರೀಡಾಪಟುಗಳು ಈ ರೇಸ್‌ನಲ್ಲಿ ಪಾಲ್ಗೊಂಡಿರುವುದು ವಿಶೇಷ. ಈ ಸ್ಪರ್ಧೆಯಲ್ಲಿ ಭಾಗವಹಿಸುವುದು ಕಠಿಣ ಸವಾಲಾಗಿದ್ದು, ಕಳೆದ 4 ತಿಂಗಳಿಂದ ಕಠಿಣ ತರಬೇತಿ ಪಡೆದಿದ್ದೆ. ಸ್ವಾಮಿ ವಿವೇಕಾನಂದ ಅವರ ಸ್ಫೂರ್ತಿದಾಯಕ ಸಂದೇಶ ಹಾಗೂ ಪ್ರಧಾನಿ ಮೋದಿ ಅವರ ‘ಫಿಟ್ ಇಂಡಿಯಾ’ ಉಪಕ್ರಮವು ಇಂತಹ ಸವಾಲನ್ನು ಕೈಗೊಳ್ಳಲು ಪ್ರೇರಕ. ಫಿಟ್ ಇಂಡಿಯಾ ಅಭಿಯಾನ ನನ್ನ ಇಂದಿನ ಅಭಿಯಾನಕ್ಕೆ ಸ್ಪೂರ್ತಿ.
ನನ್ನ ದೈಹಿಕ ಸಾಮರ್ಥ್ಯವು ದೇಶದ ಅಭ್ಯುದಯಕ್ಕೆ ಸಹಕಾರಿಯಾಗಲಿದೆ ಎಂಬ ವಿಶ್ವಾಸ ಮೂಡಿದೆ. ದೊಡ್ಡ ಮಹತ್ವಾಕಾಂಕ್ಷೆಗಳನ್ನು ಬೆನ್ನಟ್ಟುತ್ತಿರುವ ಭಾರತವು ಯುವ ರಾಷ್ಟ್ರವಾಗಿ ರೂಪುಗೊಳಿಸುವಲ್ಲಿ ನಮ್ಮ ದೈಹಿಕ ಸಾಮರ್ಥ್ಯ ಪೋಷಿಸುವಲ್ಲಿ ಹೆಚ್ಚಿನ ಉತ್ತೇಜನ ದೊರಕಿದ್ದು, ಭಾರತವನ್ನು ಆರೋಗ್ಯಕರ ರಾಷ್ಟ್ರವಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಈ ಮೂಲಕ ನಮ್ಮ ದೈಹಿಕ ಸಾಮರ್ಥ್ಯವನ್ನು ಸ್ಥಿರವಾಗಿಸಿಕೊಳ್ಳುವ ಮೂಲಕ ಯಾವುದೇ ಉದ್ಯಮದಲ್ಲಿ ಯಶಸ್ಸಿನ ಸಾಧ್ಯತೆಗಳನ್ನು ಸುಧಾರಿಸಬಹುದಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಪ್ರಶಂಸನೀಯ ಸಾಧನೆ!. ಫಿಟ್‌ನೆಸ್ ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಇದು ಅನೇಕ ಯುವಕರಿಗೆ ಸ್ಪೂರ್ತಿ ನೀಡಲಿದೆ ಎಂಬ ಖಾತರಿ ನನಗಿದೆ’ ಎಂದು ಹೇಳಿದ್ದಾರೆ .ಮೋದಿಯವರ ಈ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ತೇಜಸ್ವಿ ಸೂರ್ಯ ಅವರು, ನಿಮ್ಮ ಫಿಟ್ನೆಸ್ ಮತ್ತು ಶಕ್ತಿ ನಮಗೆಲ್ಲರಿಗೂ ಸ್ಫೂರ್ತಿಯಾಗಿದೆ. ನಿಮ್ಮ ಈ ಮಾತುಗಳಿಗೆ ಧನ್ಯವಾದಗಳು. ಖೇಲೋ ಇಂಡಿಯಾ ಮತ್ತು ಫಿಟ್ ಇಂಡಿಯಾ ಆಂದೋಲನವು ದೈಹಿಕ ಸಾಮರ್ಥ್ಯಕ್ಕೆ ಆದ್ಯತೆ ನೀಡುವ ಸಂಸ್ಕೃತಿಯನ್ನು ಹೊಂದಿದ್ದು, ಇದರಿಂದ ಇಡೀ ದೇಶವು ಪ್ರಯೋಜನ ಪಡೆಯುತ್ತಿದೆ. ನಿಮ್ಮ ಸಂದೇಶವನ್ನು ಮತ್ತಷ್ಟು ಮುಂದೆ ಕೊಂಡೊಯ್ಯಲು ಮತ್ತು ಹೆಚ್ಚಿನ ಯುವಕರನ್ನು ಫಿಟ್‌ನೆಸ್ ಅನುಸರಿಸುವಂತೆ ಮಾಡುವ ಉದ್ದೇಶವನ್ನು ನಾನು ಹೊಂದಿದ್ದೇನೆಂದು ಹೇಳಿದ್ದಾರೆ.
