ನಟ ವಿಜಯ್‌ ದೇವರಕೊಂಡ ಆರೋಗ್ಯದಲ್ಲಿ ದಿಢೀರ್‌ ಏರುಪೇರು- ಆಸ್ಪತ್ರೆಗೆ ದಾಖಲು

ಹೈದರಾಬಾದ್‌:

   ಟಾಲಿವುಡ್ ನಟ ವಿಜಯ್ ದೇವರಕೊಂಡ ಆಸ್ಪತ್ರೆಗೆ ದಾಖಲಾಗಿದ್ದಾರೆ. ತಮ್ಮ ಮುಂಬರುವ ಚಿತ್ರ ಕಿಂಗ್‌ಡಮ್ ಬಿಡುಗಡೆಗೆ ಸಜ್ಜಾಗುತ್ತಿರುವ ಬೆನ್ನಲ್ಲೇ ನಟನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಜಯ್‍ಗೆ ಡೆಂಗ್ಯೂ ಇರುವುದು ಪತ್ತೆಯಾಗಿದ್ದು, ಮುಂದಿನ ಕೆಲವು ದಿನಗಳವರೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ ಎನ್ನಲಾಗಿದೆ. ಅವರ ಬಹುನಿರೀಕ್ಷಿತ ‘ಕಿಂಗ್‌ಡಮ್’ ಸಿನಿಮಾ ಜುಲೈ 31 ರಂದು ಬಿಡುಗಡೆಯಾಗಲಿದ್ದು, ಭಾಗ್ಯಶ್ರೀ ಬೋರ್ಸೆ ಮತ್ತು ಸತ್ಯದೇವ್ ಕೂಡ ನಟಿಸಿದ್ದಾರೆ.

   ವರದಿಯ ಪ್ರಕಾರ, ವಿಜಯ್ ಅವರಿಗೆ ಡೆಂಗ್ಯೂ ಪತ್ತೆಯಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ, ಅವರ ಕುಟುಂಬ ಸದಸ್ಯರು ಕೂಡ ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಪ್ರಸ್ತುತ ಅವರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಆದಷ್ಟು ಶೀಘ್ರ ಅವರು ಗುಣಮುಖರಾಗುವ ನಿರೀಕ್ಷೆಯಿದೆ. ಈ ಬಗ್ಗೆ ವಿಜಯ್ ಅಥವಾ ಅವರ ಚಿತ್ರತಂಡ ಅವರ ಆರೋಗ್ಯದ ಬಗ್ಗೆ ಇನ್ನೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಅಂದಹಾಗೆ, ವಿಜಯ್ ತಮ್ಮ ಮುಂಬರುವ ಚಿತ್ರ ಕಿಂಗ್‌ಡಮ್‌ನ ಪ್ರೊಮೋಶನ್‌ ಕಾರ್ಯದಲ್ಲಿ ಬ್ಯುಸಿ ಆಗಿದ್ದಾರೆ. ಈ ಸಿನಿಮಾದಲ್ಲಿ ಅವರನ್ನು ಹಿಂದೆಂದೂ ಕಾಣದ ಅವತಾರದಲ್ಲಿ ಕಾಣಬಹುದಾಗಿದೆ. ಈ ಚಿತ್ರವು ಸ್ವಾತಂತ್ರ್ಯಾ ನಂತರದ ಸಿಂಹಳ-ತಮಿಳು ಸಂಘರ್ಷದ ಹಿನ್ನೆಲೆಯನ್ನು ಹೊಂದಿದೆ.

   ಕಿಂಗ್‌ಡಮ್‌ನಲ್ಲಿ ವಿಜಯ್ ಜೊತೆ ನಟಿ ಭಾಗ್ಯಶ್ರೀ ಬೋರ್ಸೆ ನಾಯಕಿಯಾಗಿ ನಟಿಸಿದ್ದಾರೆ. ಹಾಗೂ ಸತ್ಯದೇವ್ ಈ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಸಿನಿಮಾವು ಆಕ್ಷನ್‌ನಿಂದ ಕೂಡಿದ್ದು, ವಿಜಯ್ ಅವರ ಬಹುನಿರೀಕ್ಷೆಯ ಚಿತ್ರವಾಗಿದೆ.

   ಗೌತಮ್ ತಿನ್ನನುರಿ ನಿರ್ದೇಶನದ ಕಿಂಗ್‌ಡಮ್, ಈ ಹಿಂದೆ ಮೇ 30 ರಂದು ಬೆಳ್ಳಿ ಪರದೆಗೆ ಬರಬೇಕಿತ್ತು. ಆದರೆ, ಬಿಡುಗಡೆ ವಿಳಂಬವಾಯಿತು. ಜುಲೈ 4ಕ್ಕೆ ಬಿಡುಗಡೆ ಮಾಡಲು ನಿರ್ಧರಿಸಲಾಯಿತು. ಆದರೆ, ಚಿತ್ರದ ಬಿಡುಗಡೆಯನ್ನು ಮತ್ತೊಮ್ಮೆ ಮುಂದೂಡಲಾಯಿತು. ಜುಲೈ 31 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. 

   ಕಳೆದ ಕೆಲವು ದಿನಗಳ ಹಿಂದೆ ವಿಜಯ್ ಅನೇಕ ವಿವಾದಗಳ ಕೇಂದ್ರಬಿಂದುವಾಗಿದ್ದರು. ಹೈದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬುಡಕಟ್ಟು ಸಮುದಾಯದ ಬಗ್ಗೆ ಅವರ ವಿವಾದಾತ್ಮಕ ಹೇಳಿಕೆಗಳಿಂದಾಗಿ ಅವರ ವಿರುದ್ಧ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಯಿತು.

   ಈ ಕಾರ್ಯಕ್ರಮದಲ್ಲಿ ಭಾರತ-ಪಾಕಿಸ್ತಾನ ಉದ್ವಿಗ್ನತೆಯ ಕುರಿತು ಮಾತನಾಡಿದ ವಿಜಯ್, “ಭಾರತ ಪಾಕಿಸ್ತಾನದ ಮೇಲೆ ದಾಳಿ ಮಾಡುವ ಅಗತ್ಯವಿಲ್ಲ. ಏಕೆಂದರೆ ಪಾಕಿಸ್ತಾನಿಗಳು ಸ್ವತಃ ತಮ್ಮ ಸರ್ಕಾರದಿಂದ ಬೇಸತ್ತಿದ್ದಾರೆ ಮತ್ತು ಇದು ಮುಂದುವರಿದರೆ ಅವರ ಮೇಲೆ ದಾಳಿ ಮಾಡುತ್ತಾರೆ. ಅವರು 500 ವರ್ಷಗಳ ಹಿಂದೆ ಬುಡಕಟ್ಟು ಜನಾಂಗದವರು ಸಾಮಾನ್ಯ ಜ್ಞಾನವಿಲ್ಲದೆ ಹೋರಾಡಿದಂತೆ ವರ್ತಿಸುತ್ತಾರೆ’’ ಎಂದು ಹೇಳಿದ್ದರು. ವಿಜಯ್ ಅವರ ಈ ಹೇಳಿಕೆ ಬುಡಕಟ್ಟು ಸಮುದಾಯವನ್ನು ಕೆರಳಿಸಿತ್ತು.

   ಇದಲ್ಲದೆ, ದುರುದ್ದೇಶಪೂರಿತ ಬೆಟ್ಟಿಂಗ್ ಅಪ್ಲಿಕೇಶನ್‌ಗಳನ್ನು ಪ್ರಚಾರ ಮಾಡಿದ ಮತ್ತು ಯುವಕರನ್ನು ದಾರಿ ತಪ್ಪಿಸಿದ ಆರೋಪದ ಮೇಲೆ ಜುಲೈ ತಿಂಗಳ ಆರಂಭದಲ್ಲಿ, ಅವರ ಮೇಲೆ ಅಕ್ರಮ ಬೆಟ್ಟಿಂಗ್ ಅಪ್ಲಿಕೇಶನ್ ಹಗರಣದ ಪ್ರಕರಣವನ್ನೂ ದಾಖಲಿಸಲಾಗಿತ್ತು.

Recent Articles

spot_img

Related Stories

Share via
Copy link