ಹುಬ್ಬಳ್ಳಿ:
“ಕೂಡಲಸಂಗಮ ಪೀಠದ ಪೀಠಾಧ್ಯಕ್ಷ ಬಸವಜಯ ಮೃತ್ಯುಂಜಯ ಸ್ವಾಮೀಜಿ ನಡವಳಿಕೆಯಲ್ಲಿ ಬದಲಾವಣೆಗಳಾಗಿವೆ. ಹೀಗಾಗಿ ಕೂಡಲಸಂಗಮ ಪೀಠಕ್ಕೆ ಪರ್ಯಾಯ ನೇಮಕಕ್ಕೆ ಚಿಂತನೆ ನಡೆದಿದೆ” ಎಂದು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ಅಧ್ಯಕ್ಷ ಹಾಗೂ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, “ಬಸವತತ್ವ ಪ್ರತಿಪಾದನೆಗೆ ನೇಮಕಗೊಂಡಿದ್ದ ಸ್ವಾಮೀಜಿಗಳು ಅದನ್ನು ಬಿಟ್ಟು ಬೇರೆಲ್ಲವನ್ನೂ ಮಾಡುತ್ತಿದ್ದಾರೆ. ಒಂದು ಪಕ್ಷದ ಪರವಾಗಿ, ವ್ಯಕ್ತಿಯ ಪರವಾಗಿ ಮಾತನಾಡುತ್ತಿದ್ದಾರೆ” ಎಂದರು.
“ನಮ್ಮ ಸಮಾಜದವರ ಮೇಲೆ ಅನೇಕ ಕಡೆ ದಬ್ಬಾಳಿಕೆ, ದೌರ್ಜನ್ಯ ನಡೆದರೂ, ಅಲ್ಲಿಗೆ ಹೋಗದೇ ಪ್ರಚಾರದ ಗೀಳಿಗಾಗಿ ಇಲ್ಲ ಸಲ್ಲದ ಆರೋಪಾಡುತ್ತಿದ್ದಾರೆ. ಹೀಗಾಗಿ ಮುಂದೆ ಏನು ಮಾಡಬೇಕು ಅನ್ನೋ ಬಗ್ಗೆ ಹಿರಿಯರ ಜೊತೆ ಚರ್ಚೆ ಮಾಡಿದ್ದೇವೆ. ಪೀಠದ ರಕ್ಷಣೆ ಮಾಡುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುವವರನ್ನು ಮಠಕ್ಕೆ ನೇಮಿಸುವ ಬಗ್ಗೆ ಚಿಂತನೆ ನಡೆದಿದ್ದು, ಕೆಲವೇ ದಿನಗಳಲ್ಲಿ ಅಂತಿಮ ನಿರ್ಧಾರ ಪ್ರಕಟಿಸಲಿದ್ದೇವೆ” ಎಂದು ತಿಳಿಸಿದರು.
ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರು ಶ್ರೀಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರ ಆರೋಗ್ಯದಲ್ಲಿ ತೀವ್ರ ಏರುಪೇರು ಉಂಟಾದ ಹಿನ್ನೆಲೆಯಲ್ಲಿ ಅವರನ್ನು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ಶ್ರೀಗಳಿಗೆ ತೀವ್ರ ತಲೆನೋವು, ವಾಂತಿ, ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬಾಗಲಕೋಟೆಯ ಖಾಸಗಿ ಆಸ್ಪತ್ರೆಯ ಐಸಿಯು ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ಒದಗಿಸಲಾಗುತ್ತಿದೆ.
ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕು ಎಂಬ ಹೋರಾಟದ ನಡುವೆಯೇ ಕೂಡಲಸಂಗಮದಲ್ಲಿರುವ ಲಿಂಗಾಯತ ಪಂಚಮಸಾಲಿ ಪೀಠಕ್ಕೆ ಜುಲೈ 15ರಂದು ಬೀಗ ಜಡಿಯಲಾಗಿತ್ತು. ಇದು ಮತ್ತೊಮ್ಮೆ ವಿವಾದಕ್ಕೆ ಕಾರಣವಾಗಿತ್ತು, ಪಂಚಮಸಾಲಿ ಸಮುದಾಯದ ಮುಖಂಡರ ಜೊತೆಗೆ ಬಸವ ಜಯಮೃತ್ಯುಂಜಯ ಸ್ವಾಮೀಜಿ ಸಭೆಯನ್ನು ನಡೆಸಿದ್ದರು.
ಇದಾದ ಬಳಿಕ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠಕ್ಕೆ ಹಾಕಿದ ಬೀಗವನ್ನು ಮಂಗಳವಾರ ತೆರವುಗೊಳಿಸಲಾಗಿತ್ತು. ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಸಂಜೆ ಪೀಠ ಪ್ರವೇಶ ಮಾಡಿದ್ದರು. ಆ ಸಂದರ್ಭದಲ್ಲಿ ಭಕ್ತರನ್ನುದ್ದೇಶಿಸಿ ಮಾತನಾಡಿದ್ದ ಬಸವಜಯ ಮೃತ್ಯುಂಜಯ ಸ್ವಾಮೀಜಿ, “ಬೀಗ ಹಾಕಿದವರೂ ನಮ್ಮವರೇ, ಬೀಗ ತೆಗೆಸಿದವರು ನಮ್ಮವರೇ. ಬೀಗ ತೆಗೆದರೆ ಮಠದೊಳಗೆ ಹೋಗುವೆ, ಇಲ್ಲದಿದ್ದರೆ ಭಕ್ತರ ಮನೆಯಲ್ಲಿ ಉಳಿಯುವೆ. ಆದರೆ, 2ಎ ಮೀಸಲಾತಿ ಹೋರಾಟ ಆರಂಭಗೊಂಡಿದ್ದು ಕೂಡಲಸಂಗಮದಿಂದ, ಅಂತ್ಯ ಆಗುವುದು ಕೂಡಲಸಂಗಮದಲ್ಲಿಯೇ” ಎನ್ನುವ ಮೂಲಕ ಪರೋಕ್ಷವಾಗಿ ಶಾಸಕ ಕಾಶಪ್ಪನವರಿಗೆ ಟಾಂಗ್ ನೀಡಿದ್ದರು.
ಮೇಲ್ನೋಟಕ್ಕೆ ಬೀಗ ಹಾಕಿದ ವಿಷಯ ಸುಖಾಂತ್ಯವಾದಂತೆ ಕಂಡರೂ, ಸ್ವಾಮೀಜಿ ಆಡಿದ ಮಾತು ಕಾಶಪ್ಪನವರ ಹಾಗೂ ಅವರ ಮಧ್ಯದ ವೈಮನಸ್ಸು ಇನ್ನು ಬೂದಿ ಮುಚ್ಚಿದ ಕೆಂಡದಂತಿದೆ ಎನ್ನುವಂತಿತ್ತು. ಈಗ ಮತ್ತೆ ವಿಜಯಾನಂದ ಕಾಶಪ್ಪನವರ ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ “ಕೂಡಲಸಂಗಮ ಪೀಠಕ್ಕೆ ಪರ್ಯಾಯ ನೇಮಕಕ್ಕೆ ಚಿಂತನೆ ನಡೆದಿದೆ” ಎಂದಿದ್ದಾರೆ.
