ಲಂಡನ್:
ಇಂಗ್ಲೆಂಡ್‌ನಲ್ಲಿ ಬಳಕೆಯಾಗುವ ಡ್ಯೂಕ್ಸ್ ಚೆಂಡಿನ ಇತ್ತೀಚಿನ ಗುಣಮಟ್ಟದ ಬಗ್ಗೆ ಭಾರತೀಯ ಕ್ರಿಕೆಟಿಗರು ಟೀಕಿಸುತ್ತಿರುವ ಹೊತ್ತಲ್ಲೇ, ಚೆಂಡುಗಳ ಗುಣಮಟ್ಟವನ್ನು ಮರು ಪರಿಶೀಲಿಸಲು ಡ್ಯೂಕ್ ಸಂಸ್ಥೆ ಮುಂದಾಗಿದೆ ಎಂದು ಬ್ರಿಟಿಷ್ ಕ್ರಿಕೆಟ್ ಬಾಲ್ ಸಂಸ್ಥೆಯ ಮುಖ್ಯಸ್ಥ ದಿಲೀಪ್ ಜಜೋಡಿಯಾ ಹೇಳಿದ್ದಾರೆ.
ಲಾರ್ಡ್ಸ್ ಟೆಸ್ಟ್‌ನ 2ನೇ ದಿನವಾದಟಲ್ಲಿ 2 ಬಾರಿ ಚೆಂಡು ಬದಲಿಸಿದ ಘಟನೆ ನಡೆದಿತ್ತು. 10 ಓವರ್ ಬಳಕೆಯಾಗಿದ್ದ ಚೆಂಡು ತನ್ನ ರೂಪ ಕಳೆದುಕೊಂಡಿದ್ದರಿಂದ ಅದನ್ನು ಬದಲಿಸಲಾಗಿತ್ತು. ಆನಂತರ ಆಯ್ಕೆ ಮಾಡಿಕೊಂಡ ಚೆಂಡು ಕೇವಲ 8 ಓವರ್ ಬಾಳಿಕೆ ಬಂದಿತ್ತು. ಪದೇಪದೇ ಚೆಂಡು ಬದಲಿಸಿದ್ದರಿಂದ ಭಾರತದ ನಾಯಕ ಶುಭ್‌ಮನ್ ಗಿಲ್ ಮೈದಾನದಲ್ಲೇ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಇಂಗ್ಲೆಂಡ್‌ನ ವೇಗಿ ಜೋಪ್ರಾ ಆರ್ಚರ್ ಕೂಡ ಡ್ಯೂಕ್ ಚೆಂಡಿನ ಗುಣಮಟ್ಟದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.
ಆಟಗಾರರು ಚೆಂಡಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ವೇಳೆ ಪ್ರತಿಕ್ರಿಯಿಸಿದ್ದ ದಿಲೀಪ್ ಜಜೋಡಿಯಾ, ‘ಸೂಪರ್ ಸ್ಟಾರ್‌ಗಳು ಸ್ವಲ್ಪ ತಾಳ್ಮೆಯಿಂದ ವರ್ತಿಸಬೇಕು. ನಾವು ಗುಣಮಟ್ಟದ ಚೆಂಡುಗಳನ್ನು ತಯಾರಿಸಲು ಸಕಲ ಪ್ರಯತ್ನ ನಡೆಸುತ್ತಿದ್ದೇವೆ. ಆಟಗಾರರು ಕೆಟ್ಟ ಶಾಟ್ ಬಾರಿಸಿದಾಗ ನಾನು ಟೀಕೆ ಮಾಡಬಹುದೇ?, ಏನು ಸಮಸ್ಯೆಯಾಗುತ್ತಿದೆ ಎನ್ನುವುದನ್ನು ಪರಿಶೀಲಿಸುತ್ತಿದ್ದೇವೆ’ ಎಂದಿದರು.
ಇದೀಗ ನಾಲ್ಕನೇ ಟೆಸ್ಟ್ ಪಂದ್ಯ ಆರಂಭಕ್ಕೂ ಮುನ್ನವೇ ಪಂದ್ಯದಲ್ಲಿ ಬಳಸಲಾದ ಚೆಂಡುಗಳ ಪರೀಕ್ಷೆಯ ಜತೆಗೆ ಚೆಂಡಿನ ಉತ್ಪಾದನಾ ಪ್ರತೀ ಹಂತಗಳನ್ನೂ ಪರಿಶೀಲಿಸುವುದಾಗಿ ಜಜೋಡಿಯಾ ಮಾಹಿತಿ ನೀಡಿದ್ದಾರೆ. ನಾಲ್ಕನೇ ಟೆಸ್ಟ್‌ನಲ್ಲಿ ಪರಿಶೀಲನೆಗೆ ಒಳಪಟ್ಟ ಚೆಂಡನ್ನು ಬಳಸುವ ಸಾಧ್ಯತೆ ಇದೆ.
