ಬೆಂಗಳೂರು
ಮಂಗಳೂರು ಬಾಂಬ್ ಪತ್ತೆ ಪ್ರಕರಣವನ್ನು ಇಷ್ಟು ದೊಡ್ಡದಾಗಿ ಬಿಂಬಿಸಿರುವ ಸರ್ಕಾರ, ದಾವೋಸ್ ನಲ್ಲಿ ನಡೆಯುತ್ತಿರುವ ಆರ್ಥಿಕ ಶೃಂಗದಲ್ಲಿ ಹೂಡಿಕೆದಾರರನ್ನು ಏನೆಂದು ಹೇಳಿ ಹೂಡಿಕೆಗೆ ಆಹ್ವಾನ ಮಾಡುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದು, ಹೂಡಿಕೆ ಮೇಲೆ ಇದು ಪ್ರತಿಕೂಲ ಪರಿಣಾಮ ಬೀರಲಿದೆ ಎಂದರು.
ಜೆಪಿ ಭವನದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸಾರ್ವಜನಿಕವಾಗಿ ಜವಾಬ್ದಾರಿಯುತ ವಿರೋಧ ಪಕ್ಷದ ಕೆಲಸ ನಿರ್ವಹಣೆ ಮಾಡಬೇಕಾದರೆ ನನ್ನ ಕೆಲವು ಹೇಳಿಕೆಗಳ ಬಗ್ಗೆ ಬಿಜೆಪಿ ಕಡೆಯಿಂದ ಟೀಕೆ ಬರುತ್ತಿದೆ. ಬಿಜೆಪಿ ನಾಯಕರಿಂದ ಪ್ರಮಾಣಪತ್ರ ಪಡೆಯಲು ನಾನು ಈ ಕೆಲಸ ಮಾಡುತ್ತಿಲ್ಲ.
ಕರ್ನಾಟಕ ಅತ್ಯಂತ ಶಾಂತಿಪ್ರಿಯ ರಾಜ್ಯ, ಎಲ್ಲ ಸಮುದಾಯದವರು ವಿಶ್ವಾಸದಿಂದ ಬದುಕುತ್ತಿದ್ದಾರೆ, ದೇಶದಲ್ಲಿ ಸಂಘರ್ಷಗಳು ನಡೆದಾಗಲೂ ರಾಜ್ಯದಲ್ಲಿ ಶಾಂತಿ ನೆಲೆಸಿತ್ತು, ಯಾವುದೇ ಗಲಭೆಗಳಿಗೆ ಅವಕಾಶ ನೀಡದ ರಾಜ್ಯ ಕರ್ನಾಟಕ. ಆದರೆ ಇತ್ತೀಚೆಗೆ ರಾಜ್ಯದಲ್ಲಿ ಬಿಜೆಪಿ ಸ್ವಲ್ಪ ಹೆಚ್ಚಿನ ಶಕ್ತಿ ಪಡೆದ ನಂತರ ನಮ್ಮ ರಾಜ್ಯದಲ್ಲಿಯೂ ಕೆಲ ಸಂದರ್ಭದಲ್ಲಿ ಹಲವಾರು ರೀತಿಯ ಗಲಭೆಗಳಿಗೆ ಬಿಜೆಪಿ ನಡವಳಿಕೆ ಪ್ರಮುಖ ಕಾರಣವಾಗಿದೆ ಎಂದು ಟೀಕಿಸಿದರು.
ಮುಖ್ಯಮಂತ್ರಿಯವರ ತಂಡ ದಾವೂಸ್ ಶೃಂಗದಲ್ಲಿದೆ, ರಾಜ್ಯದಲ್ಲಿ ಹೂಡಿಕೆಗೆ ಆಹ್ವಾನ ನೀಡುತ್ತಿದ್ದಾರೆ, ಆದರೆ ಮತ್ತೊಂದು ಕಡೆ ರಾಜ್ಯದಲ್ಲಿ ಭಯಭೀತಿಯ ಘಟನೆ ನಡೆಯುತ್ತಿದೆ. ಇಂತಹ ಘಟನೆಯಿಂದ ಹೂಡಿಕೆದಾರರಿಗೆ ಯಾವ ಸಂದೇಶ ಕೊಡುತ್ತೀರಿ ? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಸಿಎಎ ಜಾಥಾ, ಸಮಾವೇಶದ ನಡುವೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕೆಲವು ಭಯೋತ್ಪಾದನಾ ಚಟುವಟಿಕೆ ನಡೆಸುವ ಉಗ್ರರು ಅಡಗುತಾಣ ಮಾಡಿಕೊಂಡಿದ್ದಾರೆ ಎಂದು ರಾಜ್ಯವನ್ನು ಹಿಂಸೆಗೆ ಒಳಪಡಿಸುವ, ಸಾರ್ವಜನಿಕ ಭೀತಿ ಸೃಷ್ಟಿ ಮಾಡುವ, ಕೆಲಸವಾಗುತ್ತಿದೆ, ಸರ್ಕಾರ ಈ ವಿಷಯಗಳ ಬಗ್ಗೆ ಪರಿಶೀಲನೆ ಮಾಡಬೇಕು ಎಂದು ಸಲಹೆ ನೀಡಿದರು.
ಪೆÇಲೀಸ್ ಇಲಾಖೆಯ ಸಿಬ್ಬಂದಿಯನ್ನು ನಿರುಸ್ಸಾಹಗೊಳಿಸುತ್ತಿದ್ದಾರೆ ಎಂದು ಬಿಜೆಪಿ ನಾಯಕರು ತಮ್ಮ ಮೇಲೆ ಆಪಾದನೆ ಮಾಡಿದ್ದಾರೆ, ಪೊಲೀಸರಿಗೆ ಧೈರ್ಯ ತುಂಬುವ ಕೆಲಸ ಸರ್ಕಾರ ಮಾಡಬೇಕು, ಅದು ನನ್ನ ಜವಾಬ್ದಾರಿ ಅಲ್ಲ. ನನ್ನ ಕಾಲದಲ್ಲೂ ಇದೇ ಅಧಿಕಾರಿಗಳು ಇದ್ದರು, ಒಂದೊಂದು ಸರ್ಕಾರ ಒಂದೊಂದು ಕಾಲದಲ್ಲಿ, ಒಂದೊಂದು ರೀತಿಯಲ್ಲಿ ಅಧಿಕಾರಿಗಳ ಬಳಕೆ, ದುರ್ಬಳಕೆ ಮಾಡಿಕೊಂಡಿದೆ, ನನ್ನ ಅವಧಿಯಲ್ಲಿ ದುರ್ಬಳಕೆ ಮಾಡಿಕೊಂಡಿಲ್ಲ, ಆದರೆ ಈ ಸರ್ಕಾರದಲ್ಲಿ ಕೆಲ ಅಧಿಕಾರಿಗಳ ನಡವಳಿಕೆಯನ್ನು ಪ್ರಶ್ನೆ ಮಾಡುವ ಸನ್ನಿವೇಶ ನಿರ್ಮಾಣವಾಗಿದೆ. ಜನವರಿ 19ರ ಮಂಗಳೂರು ಘಟನೆ ಬಗ್ಗೆ ಎಷ್ಟರ ಮಟ್ಟಿಗೆ ಸರ್ಕಾರ ಮಾಹಿತಿ ಕೊಟ್ಟಿದೆ. ಅಧಿಕಾರಿಗಳಿಗೆ ಎಷ್ಟು ಸ್ವಾತಂತ್ರ್ಯ ಕೊಟ್ಟಿತ್ತು ಎಂದು ಪ್ರಶ್ನಿಸಿದರು.
ಜಾತಿ ಓಲೈಕೆ ರಾಜಕಾರಣ ನನಗೆ ಅಗತ್ಯವಿಲ್ಲ, ಜಾತಿ ಹೆಸರಿನ ರಾಜಕಾರಣಕ್ಕೆ ಪ್ರೋತ್ಸಾಹ ಮಾಡಿಲ್ಲ, ಜಾತಿ ರಾಜಕಾರಣ ಬೇಕಿರುವುದು ಬಿಜೆಪಿಯವರಿಗೆ, ಯಡಿಯೂರಪ್ಪ ಆದಿಯಾಗಿ ಎಲ್ಲರೂ ಜಾತಿ ಆಧಾರಿತ ರಾಜಕಾರಣ ಮಾಡುತ್ತಿದ್ದಾರೆ, ನೀವು ಕುರ್ಚಿ ಉಳಿಸಿಕೊಳ್ಳಲು ಯಾವ ರೀತಿ ಮಾಡುತ್ತಿದ್ದೀರಿ ಎನ್ನುವುದು ಎಲ್ಲರಿಗೂ ಗೊತ್ತಿದೆ ಎಂದು ಹರಿಹಾಯ್ದರು.
ಟೌನ್ ಹಾಲ್ ಮುಂದೆ ಏಳು ಕಲ್ಲು ಎಸೆದಿದ್ದರು ಎಂದು ಹೇಳುತ್ತಿದ್ದಾರೆ, ಆದರೆ ಇಷ್ಟು ದಿನವಾದರೂ ಈ ಬಗ್ಗೆ ವರದಿಯೇ ಆಗಿರಲಿಲ್ಲ, ವರುಣ್ ಮೇಲೆ ಹಲ್ಲೆ ಖಂಡನೀಯ, ತಪ್ಪಿತಸ್ಥರ ವಿರುದ್ದ ಕ್ರಮ ಅಗತ್ಯ, ಆದರೆ ನೀವು ಸಾರ್ವಜನಿಕವಾಗಿ ನೀಡುತ್ತಿರುವ ಹೇಳಿಕೆ ಸರಿಯಿಲ್ಲ, ಹಗ್ಗ ಕೊಟ್ಟು ಕುತ್ತಿಗೆಯನ್ನು ಕೊಟ್ಟು ನೇಣು ಹಾಕಿಸಿಕೊಳ್ಳಬೇಡಿ ಎಂದು ಮನವಿ ಮಾಡಿದ್ದೇನೆ ಅಷ್ಟೇ ಎಂದರು.
ರಾಮನಗರದಲ್ಲಿ ಆನೆ ಪಟಾಕಿ ತೋರಿಸಿ ಬಾಂಬ್ ಎಂದು ಗಣೇಶ ಹಬ್ಬದ ವೇಳೆ ಹೇಳಿದ್ದರು, ನಂತರ ಆನೆ ಪಟಾಕಿ ಎಂದರು. ಈಗ ಮಂಗಳೂರು ಘಟನೆ ಕೂಡ ಅದೇ ರೀತಿಯ ಅಣಕು ಪ್ರದರ್ಶನ. ಬಾಂಬ್ ನಿಷ್ಕ್ರಿಯ ಮಾಡಲು ಪೆÇಲೀಸ್ ಇಲಾಖೆ ಹರಸಾಹಸ ಮಾಡಿದ್ದು, ಇಡೀ ದಿನ ಕ್ಷಣ ಕ್ಷಣದ ಮಾಹಿತಿ ನೀಡಿದ್ದಕ್ಕೆ ಏನೆನ್ನಬೇಕು? ಆ ಮೂಲಕ ತನಿಖಾಧಿಕಾರಿಗಳಿಗೆ ಏನು ಸಂದೇಶ ಕೊಡಲಾಯಿತು? ವಾಣಿಜ್ಯ ಕ್ಷೇತ್ರದಲ್ಲಿ ಮಂಗಳೂರು ವಿಶ್ವಮಟ್ಟದ ಸ್ಪರ್ಧೆ ನೀಡುವ ನಗರ, ಅದನ್ನು ಭಯೋತ್ಪಾದಕ, ಕೋಮುವಾದ ಸಂಘರ್ಷದ ತಾಣ ಎಂದು ಸಂದೇಶ ಕೊಟ್ಟು ದಾವೂಸ್ ನಲ್ಲಿ ಏನು ಹೇಳಿ ಹೂಡಿಕೆದಾರರನ್ನು ಕರೆತರುತ್ತೀರಿ ಎಂದು ಪ್ರಶ್ನಿಸಿದರು.
ಬಿಜೆಪಿಯವರಿಗೆ ಹುಚ್ಚಾಸ್ಪತ್ರೆಯಲ್ಲಿ ಚಿಕಿತ್ಸೆ ಅಗತ್ಯ:
ನನ್ನನ್ನು ದೇಶದ್ರೋಹಿ, ಪಾಕ್ ಬೆಂಬಲಿಗ ಎಂದು ಕೇಂದ್ರ ಸಚಿವರು ಹೇಳಿದ್ದಾರೆ, ಸಚಿವ ಈಶ್ವರಪ್ಪ ಹಾಸನದಲ್ಲಿ ಮಾತನಾಡಿದ್ದಾರೆ, ನನ್ನ ಜೊತೆಯಲ್ಲಿಯೇ ಇದ್ದವರೊಬ್ಬರು, ಯಡಿಯೂರಪ್ಪ, ಶೋಭಾ ಬಗ್ಗೆ ಬೇಕಾಬಿಟ್ಟಿ ಮಾತನಾಡಿದ್ದವರು, ಈಗ ನನ್ನ ಬಗ್ಗೆ ಮಾತನಾಡುತ್ತಿದ್ದಾರೆ, ಯಡಿಯೂರಪ್ಪ ಬಗ್ಗೆ ಮಾತನಾಡಿದ್ದ ಕ್ಯಾಸೆಟ್ ಅವರ ಬಳಿ ಇಲ್ಲದಿದ್ದರೆ ನಾನೇ ಕಳಿಸಿ ಕೊಡುತ್ತೇನೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಗೆ ಟಾಂಗ್ ನೀಡಿದರು.
ಇಮ್ರಾನ್ ಖಾನ್ ಅಳಿಯನಾ, ಉವೈಸಿ ಪಕ್ಷ ಮಾಡಲು ಹೊರಟಿದ್ದಾರಾ, ಹುಚ್ಚಾಸ್ಪತ್ರೆಗೆ ಸೇರಿಸಬೇಕು ಎಂದು ತಮ್ಮ ವಿರುದ್ಧ ಬಿಜೆಪಿ ನಾಯಕರು ಹೇಳಿಕೆ ಕೊಟ್ಟಿದ್ದಾರೆ. ಆದರೆ ನನಗೆ ಅಂತಹ ಪರಿಸ್ಥಿತಿ ಬಂದಿಲ್ಲ, ಹುಚ್ಚಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾದವರು ಬಿಜೆಪಿಯವರು ಎಂದು ವಾಗ್ದಾಳಿ ನಡೆಸಿದರು.
ನನ್ನನ್ನು ಪಾಕಿಸ್ತಾನದ ಅಳಿಯನನ್ನಾಗಿ ಮಾಡಲು ಹೊರಟಿದ್ದಾರೆ, ಆದರೆ ಪಾಕಿಸ್ತಾನಕ್ಕೆ ಸೀರೆ ಬಳೆ ತೆಗೆದುಕೊಂಡು ಹೋದವರು ಯಾರು,? ದೇವೇಗೌಡ ಪ್ರಧಾನಮಂತ್ರಿ ಆದಾಗ ಒಂದೇ ಒಂದು ಭಯೋತ್ಪಾದನೆ ಘಟನೆ ನಡೆದಿರಲಿಲ್ಲ, ಈಗ ಯಾಕೆ ನಡೆಯುತ್ತಿವೆ ? ಎಂದು ಪ್ರಶ್ನಿಸಿದರು.
ಪೆÇಲೀಸ್ ಅಧಿಕಾರಿ ಡಾ. ಹರ್ಷ ಅವರು ತಮ್ಮನ್ನು ಭೇಟಿ ಮಾಡಿದ್ದರು, ಸರ್ಕಾರ ಮೆಚ್ಚಿಸಲು ಕೆಲಸ ಮಾಡಬೇಡಿ, ಜನರ ರಕ್ಷಣೆಗಾಗಿ ಕೆಲಸ ಮಾಡಿ ಎಂದು ಸಲಹೆ ನೀಡಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಸ್ಪಷ್ಟನೆ ನೀಡಿದರು.
ಬಾಂಬ್ ಪ್ರಕರಣದ ಆರೋಪಿ ಆದಿತ್ಯ ರಾವ್ ಶರಣಾಗತಿ ಕೂಡ ನಾಟಕ ಅನ್ನಿಸುತ್ತಿದೆ, ಡಿಜಿ-ಐಜಿ ಅಷ್ಟು ಬೆಳಗ್ಗೆ ಕಚೇರಿಗೆ ಯಾಕೆ ಬಂದಿದ್ದರು? ಮುಂದೆ ಎಲ್ಲಾ ಗೊತ್ತಾಗಲಿದೆ? ಈ ಎಲ್ಲಾ ಮಾಹಿತಿ ಪ್ರಧಾನಿ, ಅಮಿತ್ ಶಾ ಗಮನಕ್ಕೆ ತರಬೇಕಿದೆ ಎಂದರು.
ದೇಶದಲ್ಲಿ ವಲಸಿಗರ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ, ಆದರೆ ಭಾರತದವರೇ ಬೇರೆ ದೇಶಗಳಿಗೆ ಹೆಚ್ಚು ವಲಸೆ ಹೋಗಿದ್ದಾರೆ, 17.5 ಮಿಲಿಯನ್ ನಾಗರಿಕರು ಬೇರೆ ಬೇರೆ ದೇಶಗಳಿಗೆ ಹೋಗಿ ಬದುಕುತ್ತಿದ್ದಾರೆ, ಇಲ್ಲಿ ನಾವು ಅವರಿಗೆ ಉದ್ಯೋಗಕೊಡಲು ಆಗಲಿಲ್ಲ, ಅದಕ್ಕಾಗಿ ಅವರು ಹೋಗಿದ್ದಾರೆ, ಆದರೆ ನೀವು ಸಿಎಎ, ಎನ್‍ಪಿಆರ್ ಜಾರಿ ಮಾಡಲು ಹೊರಟಿದ್ದೀರಿ ? ಇದು ಈಗ ಅಗತ್ಯವಲ್ಲ, ಆರ್ಥಿಕ ಕುಸಿತ, ಉದ್ಯೋಗ ಕೊಡುವಲ್ಲಿ ಸರ್ಕಾರ ಎಡವಿದೆ, ಅದರ ಬಗ್ಗೆ ನೋಡಿ ಮೋದಿ ಅವರೇ ಎಂದು ಟೀಕಿಸಿದರು.
ಈಶ್ವರಪ್ಪ ಒಗ್ಗಟ್ಟಿನ ಮಂತ್ರಕ್ಕೆ ಟೀಕಿಸಿದ ಹೆಚ್ಡಿಕೆ ನೀವು ಬೆಂಕಿ ಹಿಡಿದು ಬನ್ನಿ ನಾವು ನೀರು ತಂದು ಹಾರಿಸುತ್ತೇವೆ ಎಂದು ವ್ಯಂಗ್ಯವಾಡಿದರು.ನೆಹರು ಮಾಡಿರುವ ತಪ್ಪು ಸರಿಪಡಿಸುತ್ತಿದ್ದೇವೆ ಎಂದು ಅಮಿತ್ ಶಾ ಹೇಳುತ್ತಾರೆ, ಆದರೆ ನೆಹರೂ ನಿಧನರಾದಾಗ ಇವರು ಹುಟ್ಟೇ ಇರಲಿಲ್ಲ, ಇವರ ರಾಜಕೀಯ ಇತಿಹಾಸ ನೋಡಿದರೆ, ನಕಲಿ ಎನ್ ಕೌಂಟರ್, ಗುಜರಾತ್ ನಲ್ಲಿ ಬೆಂಕಿ ಹಚ್ಚಿದ್ದಷ್ಟೇ ಕಾಣುತ್ತದೆ ಎಂದು ವ್ಯಂಗ್ಯವಾಡಿದರು.
ಪ್ರತಿ ತಿಂಗಳು ವಿದೇಶ ಪ್ರವಾಸಕ್ಕೆ ಹೋಗುತ್ತಿದ್ದ ಮೋದಿ ಈಗ ಯಾಕೆ ಹೋಗುತ್ತಿಲ್ಲ, ಪರೀಕ್ಷಾ ಪೇ ಚರ್ಚಾ ಎಂದು ಮಕ್ಕಳನ್ನು ಕರೆಸಿಕೊಂಡು ಮಾತನಾಡುತ್ತಿದ್ದಾರೆ ?, ಆದರೆ ವಾಸ್ತವದಲ್ಲಿ ಮೊಬೈಲ್ ಸಂಪರ್ಕ, ಇಂಟರ್‍ನೆಟ್ ಸಂಪರ್ಕ ಕಟ್ ಮಾಡಿದ್ದರಿಂದ ಕಾಶ್ಮೀರ ವಿದ್ಯಾರ್ಥಿಗಳು ಶುಲ್ಕ ಕಟ್ಟಲು ಫೋಷಕರ ಸಂಪರ್ಕ ಮಾಡಲಾಗಲಿಲ್ಲ, ಇದಕ್ಕೆ ಯಾರು ಹೊಣೆ ? ಎಂದರು.
ಕುಂಬಳಕಾಯಿ ಬಾಂಬುಂಟು:
ಹಾಸ್ಯನಟ ದಿನೇಶ್ ಅಭಿನಯದ ಕುಂಬಳಕಾಯಿಯಲ್ಲಿ ಬಾಂಬುಂಟು ಮಾರಾಯಾ ಎನ್ನುವ ಹಾಸ್ಯ ಸನ್ನಿವೇಶ ವಿವರಿಸಿದ ಹೆಚ್ಡಿಕೆ, ಈ ಕಥೆ ಮಂಗಳೂರಿನಲ್ಲೂ ಆಗಿದೆ. ಪುಲ್ವಾಮ ಘಟನೆ ಮತ್ತೆ ಆಗದಂತೆ ಮಂಗಳೂರಿನ ಈ ತಜ್ಞರನ್ನೇ ಕರೆದೊಯ್ಯಿರಿ ಎಂದು ವ್ಯಂಗ್ಯವಾಡಿದರು.
ಕೆಲವರು ಅವರೇ ಫೋನ್ ಮಾಡಿಸಿ ಬೆದರಿಕೆ ಇದೆ ಎಂದು ಬಿಂಬಿಸಿಕೊಂಡು ಭದ್ರತೆ ಪಡೆಯುವ ಟ್ರಂಡ್ ಈಗ ಸೃಷ್ಟಿಯಾಗಿದೆ ಎಂದು ಇತ್ತೀಚಿನ ಬೆದರಿಕೆ ಕರೆಗಳ ಸನ್ನಿವೇಶವನ್ನು ಟೀಕಿಸಿದರು.
ಸೋಮಣ್ಣರಿಂದ ಕಲಿಯಬೇಕಿಲ್ಲ:
ಸೋಮಣ್ಣರಿಂದ ನಾನು ಯಾವುದನ್ನೂ ಕಲಿಯಬೇಕಿಲ್ಲ. ನಾನು ತಪ್ಪು ಮಾಡಿದ್ದೇನೆ ಅದನ್ನು ಸದನದಲ್ಲೇ ಒಪ್ಪಿಕೊಂಡಿದ್ದೇನೆ ಸರಿಪಡಿಸಿಕೊಂಡೂ ಆಗಿದೆ. ಮನೆ ಹಾಳು ಮಾಡುವುದನ್ನು ಕಲಿಯಬೇಕಿತ್ತಾ ? ಎಂದು ದೇವೇಗೌಡರು ಕುಮಾರಸ್ವಾಮಿಗೆ ಸರಿಯಾಗಿ ತರಬೇತಿ ನೀಡಿಲ್ಲ ಎಂದು ಹೇಳಿದ್ದ ಸೋಮಣ್ಣ ಅವರಿಗೆ ತಿರುಗೇಟು ನೀಡಿದರು.
ನಾನು ಸಿಎಂ ಆದಾಗಲೂ ಬಾಂಬ್ ಕರೆ ಬಂದಿತ್ತು:
ನಾನು ಕೂಡ ಮುಖ್ಯಮಮಂತ್ರಿ ಆಗಿದ್ದ ವೇಳೆ ರಾಯಚೂರು ಪ್ರವಾಸಕ್ಕೆ ಹೋಗುವಾಗ ಬಾಂಬ್ ಕರೆ ಬಂದಿದ್ದು ಇದನ್ನು ಬಹಿರಂಗೊಳಿಸದಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದೆ, ಇದನ್ನು ದೊಡ್ಡದಾಗಿ ಮಾಡದಂತೆ ಸೂಚನೆ ನೀಡಿದ್ದೆ ಎಂದು ತಮ್ಮ ಅವಧಿಯಲ್ಲಿ ನಡೆದ ಘಟನೆಯನ್ನು ವಿವರಿಸಿ ಈಗಿನ ಸರ್ಕಾರದ ನಡೆಯನ್ನು ಟೀಕಿಸಿದರು.
ಶರಣಾದವ ಮುಸ್ಲಿಂ ಆಗಿದ್ದರೆ:
ಒಂದು ವೇಳೆ ಶರಣಾಗತಿಯಾದವನು ಮುಸ್ಲಿಂ ಆಗಿದ್ದರೆ ಬಿಜೆಪಿಯವರು ಓಹೋ ಎಂದು ದೊಡ್ಡದಾಗಿ ಮಾತನಾಡುತ್ತಿದ್ದರು, ಆದರೆ ಹಿಂದೂ ಎನ್ನುವ ಕಾರಣಕ್ಕೆ ಮೌನವಾಗಿದ್ದಾರೆ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ