ಚೆನ್ನೈ:
ಎಐಎಡಿಎಂಕೆಯ ಸಂಘಟನಾ ಕಾರ್ಯದರ್ಶಿ ಮತ್ತು ಮಾಜಿ ಸಂಸದ ಅನ್ವರ್ ರಾಜಾ ಸೋಮವಾರ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಸಮ್ಮುಖದಲ್ಲಿ ಡಿಎಂಕೆ ಸೇರಿದ್ದಾರೆ.ಬಿಜೆಪಿ ಜೊತೆಗಿನ ಚುನಾವಣಾ ಸಂಬಂಧವನ್ನು ಪುನರುಜ್ಜೀವನಗೊಳಿಸಿದಾಗಿನಿಂದ ಅನ್ವರ್ ರಾಜಾ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರನ್ನು ಪ್ರಬಲವಾಗಿ ಟೀಕಿಸುತ್ತಿದ್ದಾರೆ.
ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಒಡ್ಡಿರುವ ಹಿಂದಿ ಹೇರಿಕೆ ಮತ್ತು ರಾಜ್ಯ ಸ್ವಾಯತ್ತಾ ಬೆದರಿಕೆಗಳಿಂದ ತಮಿಳುನಾಡನ್ನು ರಕ್ಷಿಸಲು ಡಿಎಂಕೆ ಸೇರುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂದು ರಾಜಾ ಹೇಳಿದರು.
ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ರಾಜಾ, “ಮೊದಲು ಎಐಎಡಿಎಂಕೆಯನ್ನು ನಾಶಮಾಡಿ ನಂತರ ಡಿಎಂಕೆ ವಿರುದ್ಧ ಹೋರಾಡುವುದು ಬಿಜೆಪಿಯ ಕಾರ್ಯಸೂಚಿಯಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಒಮ್ಮೆಯೂ ಪಳನಿಸ್ವಾಮಿ ಮುಖ್ಯಮಂತ್ರಿ ಅಭ್ಯರ್ಥಿಯಾಗುತ್ತಾರೆ ಎಂದು ಹೇಳಿಲ್ಲ. ಅವರು ತಮಿಳುನಾಡಿನಲ್ಲಿ ಎನ್‌ಡಿಎ ಸರ್ಕಾರ ರಚಿಸುತ್ತದೆ ಎಂದು ಮಾತ್ರ ಹೇಳಿದ್ದರು ಎಂದು ತಿಳಿಸಿದ್ದಾರೆ.
