ನವದೆಹಲಿ:
ಪ್ರತಿವರ್ಷ ಜುಲೈ 26ನ್ನು ಕಾರ್ಗಿಲ್ ವಿಜಯ್ ದಿವಸ್ ಎಂದು ಆಚರಿಸಲಾಗುತ್ತದೆ. ಸತತ ಮೂರು ತಿಂಗಳ ಸಮರದ ಬಳಿಕ ಭಾರತೀಯ ಸೇನೆ ಪಾಕಿಸ್ತಾನವನ್ನು ಸೆದೆಬಡಿದು, 1999 ರಲ್ಲಿ ಈ ದಿನದಂದು, ಭಾರತೀಯ ಸೇನೆಯು ಆಪರೇಷನ್ ವಿಜಯ್‌ನ ಯಶಸ್ಸನ್ನು ಘೋಷಿಸಿತು. ಪಾಕಿಸ್ತಾನಿ ಒಳನುಸುಳುಕೋರರು ಮತ್ತು ಸೈನಿಕರು ಕಾರ್ಗಿಲ್‌ನ ಎತ್ತರದ ಪರ್ವತ ಶಿಖರಗಳನ್ನು ಅಕ್ರಮವಾಗಿ ಆಕ್ರಮಿಸಿಕೊಂಡಾಗ ಪ್ರಾರಂಭವಾದ ಈ ಯುದ್ಧವು ಭಾರತೀಯ ಸೇನೆಯ ದೃಢ ಸಂಕಲ್ಪ ಮತ್ತು ಅಸಾಧಾರಣ ಧೈರ್ಯಕ್ಕೆ ಸಾಕ್ಷಿಯಾಯಿತು.
ಅದು 1999 ರ ಚಳಿಗಾಲ ಕಾರ್ಗಿಲ್‌ನ ಕಣಿವೆಗಳಲ್ಲಿ ಕೆಲ ಅನುಮಾನಾಸ್ಪದ ಚಟುವಟಿಕೆಗಳು ಕಂಡು ಬಂದಿದ್ದವು. ಕಾರ್ಗಿಲ್‌ನ ಎತ್ತರದ ಶಿಖರಗಳನ್ನು ಶಸ್ತ್ರಸಜ್ಜಿತ ಕೆಲ ಗುಂಪು ಒಳ ನುಗ್ಗಲು ಪ್ರಯತ್ನಿಸಿತ್ತು. ಅವರ ಬಳಿ ಆಧುನಿಕ ಶಸ್ತ್ರಾಸ್ತ್ರಗಳು, ಮಾರ್ಟರ್‌ಗಳು, ಮತ್ತು ರಾಕೆಟ್ ಲಾಂಚರ್‌ಗಳು ಇದ್ದವು. ಈ ಒಳನುಗ್ಗುವವರು ಪಾಕಿಸ್ತಾನಿ ಸೈನಿಕರು ಮತ್ತು ಅರೆಸೈನಿಕ ಪಡೆಗಳ ಸದಸ್ಯರಾಗಿದ್ದರು, ಆದರೆ ಅವರನ್ನು ಭಯೋತ್ಪಾದಕರ ವೇಷದಲ್ಲಿ ಕಳುಹಿಸಲಾಗಿತ್ತು. ಸ್ಥಳೀಯ ಕುರಿ ಕಾಯುವ ವ್ಯಕ್ತಿಯೊಬ್ಬ ಈ ಒಳ ನುಸುಳುವವರನ್ನು ಕಂಡಿದ್ದಾನೆ. ತಕ್ಷಣವೇ ಸೇನಾ ಕಚೇರಿಗೆ ಮಾಹಿತಿ ನೀಡಿದ್ದಾನೆ. ಕೂಡಲೇ ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿತ್ತು.
ಪಾಕಿಸ್ತಾನದ ಯೋಜನೆ ತಿಳಿದ ಸೇನೆ ತಕ್ಷಣ ಕಾರ್ಯಾಚರಣೆಗೆ ಸಿದ್ಧವಾಯಿತು. ಮೇ 26, 1999ರಂದು, ಭಾರತೀಯ ವಾಯುಪಡೆಯು ‘ಆಪರೇಷನ್ ಸಫೇದ್ ಸಾಗರ್’ ಆರಂಭಿಸಿ, ಶತ್ರು ಸ್ಥಾನಗಳ ಮೇಲೆ ವಾಯುದಾಳಿಗಳನ್ನು ನಡೆಸಿತು. ಏಕಕಾಲದಲ್ಲಿ, ಭಾರತೀಯ ಸೇನೆಯು ‘ಆಪರೇಷನ್ ವಿಜಯ್’ ಆರಂಭಿಸಿ, ಒಳನುಗ್ಗವವರನ್ನು ಸೆದೆ ಬಡೆದಿತ್ತು. ಜೂನ್ 13 ರಂದು ಭಾರತೀಯ ಸೇನೆಯು ಡ್ರಾಸ್ ವಲಯದಲ್ಲಿರುವ ತೋಲೋಲಿಂಗ್ ಅನ್ನು ಯಶಸ್ವಿಯಾಗಿ ವಶಪಡಿಸಿಕೊಂಡಿತು. ಇದು ಭಾರತಕ್ಕೆ ಯುದ್ಧದಲ್ಲಿ ದೊರೆತ ಮೊದಲ ಪ್ರಮುಖ ವಿಜಯ.
ಈ ಯುದ್ಧದಲ್ಲಿ 527 ಭಾರತೀಯ ವೀರ ಯೋಧರು ದೇಶಕ್ಕಾಗಿ ಪ್ರಾಣ ತೆತ್ತರು. 1,363 ಸೈನಿಕರು ಗಾಯಗೊಂಡರು. ಕ್ಯಾಪ್ಟನ್ ವಿಕ್ರಮ್ ಬಾತ್ರಾ, ಕ್ಯಾಪ್ಟನ್ ಮನೋಜ್ ಕುಮಾರ್ ಪಾಂಡೆ, ಗ್ರೇನೆಡಿಯರ್ ಯೋಗೇಂದ್ರ ಸಿಂಗ್ ಯಾದವ್, ರೈಫಲ್‌ಮ್ಯಾನ್ ಸಂಜಯ್ ಕುಮಾರ್ ಅವರಂತಹ ಅನೇಕ ವೀರರು ತಮ್ಮ ಪ್ರಾಣವನ್ನು ಲೆಕ್ಕಿಸದೆ ದೇಶಕ್ಕಾಗಿ ಹೋರಾಡಿದರು. ಅವರಿಗೆ ‘ಪರಮ ವೀರ ಚಕ್ರ’ದಂತಹ ಉನ್ನತ ಸೇನಾ ಗೌರವಗಳನ್ನು ನೀಡಿ ಗೌರವಿಸಲಾಗಿದೆ. ಈ ಯುದ್ಧ ಭಾರತೀಯ ಸೇನೆ ಶೌರ್ಯ ಹಾಗೂ ತ್ಯಾಗ ಇಡೀ ವಿಶ್ವಕ್ಕೆ ತಿಳಿಯುವಂತೆ ಮಾಡಿದೆ. ಜನರಲ್ಲಿನ ದೇಶಭಾಮಾನವನ್ನು ಹೆಚ್ಚಿಸಿದೆ.
