ನವದೆಹಲಿ
ಅಮೆರಿಕದೊಂದಿಗಿನ ಸುಂಕ ಯುದ್ಧದ ನಡುವೆ, ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ರೈತರ ಪರವಾಗಿ ಮಹತ್ವದ ಹೇಳಿಕೆ ನೀಡಿದ್ದಾರೆ. ‘‘ರೈತರ ಹಿತಾಸಕ್ತಿ ಕಾಪಾಡಲು ಯಾವುದೇ ವೈಯಕ್ತಿಕ ನಷ್ಟಕ್ಕೂ ಸಿದ್ಧ’’ ಎಂದು ಪ್ರಧಾನಿ ಮೋದಿ ಟ್ರಂಪ್ಗೆ ಸವಾಲೆಸೆದಿದ್ದಾರೆ. ‘‘ರೈತರ ಹಿತಾಸಕ್ತಿಗಳನ್ನು ರಕ್ಷಿಸುವುದು ನಮ್ಮ ಪ್ರಮುಖ ಆದ್ಯತೆ, ರೈತರು, ಮೀನುಗಾರರು ಮತ್ತು ಹೈನುಗಾರರ ಹಿತಾಸಕ್ತಿಗಳ ಬಗ್ಗೆ ಭಾರತ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ’’ ಎಂದರು.
ನವದೆಹಲಿಯಲ್ಲಿ ನಡೆದ ಎಂ.ಎಸ್. ಸ್ವಾಮಿನಾಥನ್ ಶತಮಾನೋತ್ಸವ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ರೈತರ ಆದಾಯವನ್ನು ಹೆಚ್ಚಿಸಲು ಮತ್ತು ಕೃಷಿಯ ಮೇಲಿನ ವೆಚ್ಚವನ್ನು ಕಡಿಮೆ ಮಾಡಲು ಸರ್ಕಾರ ನಿರಂತರವಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.
‘ನಮಗೆ ರೈತರ ಹಿತಾಸಕ್ತಿಯೇ ಪ್ರಮುಖ ಆದ್ಯತೆಯಾಗಿದೆ, ಭಾರತವು ತನ್ನ ರೈತರು, ಜಾನುವಾರು ರೈತರು ಮತ್ತು ಮೀನುಗಾರ ಸಹೋದರ ಸಹೋದರಿಯರ ಹಿತಾಸಕ್ತಿಗಳೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಮತ್ತು ಇದಕ್ಕಾಗಿ ನಾನು ವೈಯಕ್ತಿಕವಾಗಿ ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದು ನನಗೆ ತಿಳಿದಿದೆ ಆದರೆ ನಾನು ಅದಕ್ಕೆ ಸಿದ್ಧನಿದ್ದೇನೆ’’ ಎಂದು ಮೋದಿ ಹೇಳಿದ್ದಾರೆ.
ರೈತರ ಆದಾಯವನ್ನು ಹೆಚ್ಚಿಸುವುದು, ಕೃಷಿ ವೆಚ್ಚವನ್ನು ಕಡಿಮೆ ಮಾಡುವುದು, ಹೊಸ ಆದಾಯದ ಮೂಲಗಳನ್ನು ಸೃಷ್ಟಿಸುವುದು – ಈ ಗುರಿಗಳ ಮೇಲೆ ನಾವು ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದರು. ನಮ್ಮ ಸರ್ಕಾರವು ರೈತರ ಬಲವನ್ನು ದೇಶದ ಪ್ರಗತಿಯ ಆಧಾರವೆಂದು ಪರಿಗಣಿಸಿದೆ.
ಆದ್ದರಿಂದ, ಕಳೆದ ವರ್ಷಗಳಲ್ಲಿ ಮಾಡಿದ ನೀತಿಗಳು ಸಹಾಯವನ್ನು ಮಾತ್ರವಲ್ಲದೆ ರೈತರಲ್ಲಿ ವಿಶ್ವಾಸವನ್ನು ಹೆಚ್ಚಿಸುವ ಪ್ರಯತ್ನವನ್ನೂ ಮಾಡಲಾಗುತ್ತಿದೆ. ಪ್ರಧಾನಮಂತ್ರಿ ಸಮ್ಮಾನ್ ನಿಧಿಯಿಂದ ಪಡೆದ ನೆರವು ಸಣ್ಣ ರೈತರಿಗೆ ಆತ್ಮ ವಿಶ್ವಾಸವನ್ನು ನೀಡಿದೆ. ಪ್ರಧಾನಮಂತ್ರಿ ಬೆಳೆ ವಿಮಾ ಯೋಜನೆಯು ರೈತರಿಗೆ ಅಪಾಯದಿಂದ ರಕ್ಷಣೆ ನೀಡಿದೆ. ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯ ಮೂಲಕ ನೀರಾವರಿಗೆ ಸಂಬಂಧಿಸಿದ ಸಮಸ್ಯೆಯನ್ನು ಪರಿಹರಿಸಲಾಗಿದೆ.
ಸಣ್ಣ ರೈತರ ಸಂಘಟಿತ ಶಕ್ತಿ ಹೆಚ್ಚಾಗಿದೆ. ಸಹಕಾರಿ ಮತ್ತು ಸ್ವಸಹಾಯ ಗುಂಪುಗಳಿಗೆ ಹಣಕಾಸಿನ ನೆರವು ಗ್ರಾಮೀಣ ಆರ್ಥಿಕತೆಗೆ ಸಹಾಯ ಮಾಡಿದೆ. ಪ್ರಧಾನಮಂತ್ರಿ ಕಿಸಾನ್ ಸಂಪದ ಯೋಜನೆಯು ಹೊಸ ಆಹಾರ ಸಂಸ್ಕರಣಾ ಘಟಕಗಳು ಮತ್ತು ಸಂಗ್ರಹಣೆಯನ್ನು ವೇಗಗೊಳಿಸಿದೆ ಎಂದರು. ಅಮೆರಿಕವು ಭಾರತಕ್ಕೆ ಶೇ.50ರಷ್ಟು ಸುಂಕ ವಿಧಿಸಿದೆ. ಮೊದಲು ಶೇ.,25ರಷ್ಟು ವಿಧಿಸಿತ್ತು, ಆದರೆ ರಷ್ಯಾದಿಂದಿಗಿನ ತೈಲ ಒಪ್ಪಂದವನ್ನು ಮುರಿದುಕೊಳ್ಳಲು ನಿರಾಕರಿಸಿದ್ದಕ್ಕೆ ಬುಧವಾರ ಹೆಚ್ಚುವರಿಯಾಗಿ ಶೇ.25ರಷ್ಟು ಸುಂಕವನ್ನು ವಿಧಿಸಿದೆ







