ಮರ್ಯಾದಾ ಹತ್ಯೆಗೆ ಬಲಿಯಾದಳಾ ಯುವತಿ?

ಗಾಂಧಿನಗರ: 

     ಗುಜರಾತಿನಲ್ಲಿ ವಿಚಿತ್ರವಾದ ಘಟನೆ ನಡೆದಿದ್ದು, ವ್ಯಕ್ತಿಯೊಬ್ಬನಿಗೆ ಆತನ ಗೆಳತಿ ತಡರಾತ್ರಿ ಇನ್ಸ್ಟಾಗ್ರಾಂನಲ್ಲಿ ತನ್ನನ್ನು  ಉಳಿಸಿ ಎಂದು ಸಂದೇಶ ಕಳುಹಿಸಿದ ಬಳಿಕ ಅದೇ ದಿನ ರಾತ್ರಿ ಮೃತಪಟ್ಟಿದ್ದಾಳೆ. ಅವನ ಗೆಳತಿಯಿಂದ ಬಂದ ಸಂದೇಶವನ್ನು ಆತ ಒಂದು ಗಂಟೆಯ ಬಳಿಕ ಓದಿದ್ದಾನೆ. ಆದರೆ ಅಷ್ಟರಲ್ಲಾಗಲೇ ಆಕೆ ಸಾವನ್ನಪ್ಪಿದ್ದಳು. 18 ವರ್ಷದ ಚಂದ್ರಿಕಾ ಚೌಧರಿ ಮೃತ ಯುವತಿ, ಆಕೆಯ ತಂದೆ ಹಾಗೂ ಚಿಕ್ಕಪ್ಪ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಸದ್ಯ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

   ಯುವತಿ ಹರೀಶ್ ಚೌಧರಿ ಜೊತೆ ಸಂಬಂಧ ಹೊಂದಿದ್ದಳು, ಆದರೆ ಆಕೆಯ ಮನೆಯವರು ಇದಕ್ಕೆ ವಿರೋಧಿಸಿದ್ದರು. ಆಕೆ ಬೇರೆಯವರನ್ನು ಮದುವೆಯಾಗಬೇಕೆಂದು ಬಯಸಿದ್ದರು. ತನ್ನ ಮನೆಯವರು ಇದಕ್ಕೆ ಒಪ್ಪುವುದಿಲ್ಲ ಎಂದು ಆಕೆಗೆ ಮನವರಿಕೆಯಾಗಿತ್ತು ಮತ್ತು ಈ ಬಗ್ಗೆ ಹರೀಶ್ ಗೆ ತಿಳಿಸಿದ್ದರು. ತನ್ನ ಜೀವಕ್ಕೆ ಅಪಾಯವಿದೆ ಎಂದು ತಿಳಿದು ಜೂನ್ 24 ರಂದು ರಾತ್ರಿ ಹರೀಶ್ ಗೆ ಸಂದೇಶ ಕಳುಹಿಸಿದ್ದಳು. ಬಂದು ನನ್ನನ್ನು ಕರೆದುಕೊಂಡು ಹೋಗಿ; ಇಲ್ಲದಿದ್ದರೆ, ನನ್ನ ಮನೆಯವರು ನನ್ನ ಇಚ್ಛೆಗೆ ವಿರುದ್ಧವಾಗಿ ನನಗೆ ಮದುವೆ ಮಾಡುತ್ತಾರೆ. ನಾನು ಮದುವೆಗೆ ಒಪ್ಪದಿದ್ದರೆ, ಅವರು ನನ್ನನ್ನು ಕೊಲ್ಲುತ್ತಾರೆ. ನನ್ನನ್ನು ಉಳಿಸಿ” ಎಂದು ಆಕೆ ಸಂದೇಶದಲ್ಲಿ ತಿಳಿಸಿದ್ದಳು.

   ಆಕೆ ಸಂದೇಶ ಕಳುಹಿಸಿದ ಕೆಲವು ಗಂಟೆಗಳ ನಂತರ ಆಕೆಯ ಶವ ಆಕೆಯ ಮನೆಯಲ್ಲಿ ಪತ್ತೆಯಾಗಿದೆ. ಆರಂಭದಲ್ಲಿ, ಇದು ಆತ್ಮಹತ್ಯೆ ಎಂದು ಕಂಡುಬಂದರೂ, ನಂತರ ತನಿಖೆಯಲ್ಲಿ ಇದು ಕೊಲೆ ಎಂದು ತಿಳಿದು ಬಂದಿದೆ. ಆಕೆಯ ಪ್ರಿಯತಮ ಚಂದ್ರಿಕಾ ಸಾವು ಆತ್ಮಹತ್ಯೆ ಅಲ್ಲ ಕೊಲೆ ಎಂದು ದೂರು ನೀಡಿದ್ದರು. ನಂತರ ತನಿಖೆ ಆರಂಭಿಸಿದ ಪೊಲೀಸರು, ಚಂದ್ರಿಕಾಳ ತಂದೆ ಹಾಗೂ ಚಿಕ್ಕಪ್ಪ ಆಕೆಯನ್ನು ಕೊಲೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಕೊಲೆಗೆ ಕೆಲವು ದಿನಗಳ ಮೊದಲು, ಚಂದ್ರಿಕಾ ಹರೀಶ್ ಜೊತೆ ಮನೆಯಿಂದ ಹೊರಟು ಹೋಗಿದ್ದಳು. ಕುಟುಂಬವು ನಾಪತ್ತೆಯಾದ ದೂರನ್ನು ನೀಡಿತ್ತು. ನಂತರ ಜೋಡಿ ಪತ್ತೆಯಾಗಿದ್ದರು. ಚಂದ್ರಿಕಾಳನ್ನು ತನ್ನ ಹೆತ್ತವರು ಕೊಲ್ಲಬಹುದೆಂಬ ಭಯದಿಂದ ಹರೀಶ್‌ ನ್ಯಾಯಾಲಯದಲ್ಲಿ ಹೇಬಿಯಸ್ ಅರ್ಜಿಯನ್ನು ಸಲ್ಲಿಸಿದ್ದ. ಆದರೆ ವಿಚಾರಣೆಗೂ ಮೊದಲೇ ಆಕೆ ಸಾವನ್ನಪ್ಪಿದ್ದಾಳೆ. 

   ಆಕೆಯ ಸಾವು ನೈಸರ್ಗಿಕ ಸಾವಲ್ಲ, ಆಕೆಯನ್ನು ಎಂದಿಗೂ ವೈದ್ಯರ ಬಳಿಗೆ ಕರೆದೊಯ್ಯಲಿಲ್ಲ, ಅಂತ್ಯಕ್ರಿಯೆಯನ್ನು ತರಾತುರಿಯಲ್ಲಿ ನಡೆಸಲಾಯಿತು. ಸಾವಿನ ನಂತರ ಯಾವುದೇ ಹತ್ತಿರದ ಸಂಬಂಧಿಕರನ್ನು ಕರೆಯಲಿಲ್ಲ, ಪಾಲನ್‌ಪುರದಲ್ಲಿ ಓದುತ್ತಿರುವ ಆಕೆಯ ಸಹೋದರನನ್ನು ಸಹ ಕರೆಯಲಿಲ್ಲ ಎಂದು ಹರೀಶ್‌ ಆರೋಪಿಸಿದ್ದ. ಹೆಚ್ಚಿನ ತನಿಖೆಯಲ್ಲಿ ಚಂದ್ರಿಕಾ ತಾವು ಹೇಳಿದವನ್ನು ಮದುವೆಯಾಗದಿದ್ದರೂ, ಜೂನ್ 24 ರ ರಾತ್ರಿಯೇ ಆಕೆಯನ್ನು ಕೊಲ್ಲಲು ಆಕೆಯ ತಂದೆ ಮತ್ತು ಚಿಕ್ಕಪ್ಪ ಯೋಜಿಸಿದ್ದರು ಎಂದು ತಿಳಿದುಬಂದಿದೆ. ಆಕೆಯ ಕೊಲೆ ಯಾವುದೇ ಅನುಮಾನಕ್ಕೆ ಕಾರಣವಾಗದಂತೆ ನೋಡಿಕೊಳ್ಳಲು ಅವರು ಮೂರು ಹಂತದ ಯೋಜನೆಯನ್ನು ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Recent Articles

spot_img

Related Stories

Share via
Copy link