ಬೆಂಗಳೂರು
ವಿಲ್ಸನ್ ಗಾರ್ಡನ್ನ ಚಿನ್ನಯ್ಯನ ಪಾಳ್ಯದಲ್ಲಿ ಅನುಮಾನಾಸ್ಪದವಾಗಿ ಶುಕ್ರವಾರ ಸ್ಫೋಟ ಸಂಭವಿಸಿದ್ದು, 8ಕ್ಕೂ ಹೆಚ್ಚು ಮನೆಗಳು ಧ್ವಂಸವಾಗಿದ್ದವು. ಘಟನೆಯಲ್ಲಿ ಮೂವರು ಮೃತಪಟ್ಟಿದ್ದಾರೆ. ಆಡುಗೋಡಿ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ದುರಂತಕ್ಕೆ ಕಾರಣವೇನೆಂಬುವುದು ಗೊತ್ತಾಗಿದೆ. ಅಡುಗೆ ಅನಿಲ ಸೋರಿಕೆಯಾಗಿ ಸ್ಫೋಟ ಸಂಭವಿಸಿದೆ ಎಂದು ತನಿಖೆ ವೇಳೆ ಬಹಿರಂಗಗೊಂಡಿದೆ. ಮನೆಯಲ್ಲಿ ರಾತ್ರಿಯೆಲ್ಲ ಗ್ಯಾಸ್ ಸೋರಿಕೆಯಾಗಿತ್ತು. ಬೆಳಗ್ಗೆ ಮಗು ಟಿವಿ ಆನ್ ಮಾಡಿದಾಗ ಸ್ಫೋಟ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸ್ಫೋಟಗೊಂಡ ದಿನ ಮುಬಾರಕ್ ಎಂಬ ಬಾಲಕ ಮೃತಪಟ್ಟಿದ್ದನು. ಸೋಮವಾರ ತಾಯಿ ಕಸ್ತೂರಮ್ಮ ಮಗಳು ಖಯಾಲ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಒಟ್ಟು 11 ಜನ ಗಾಯಗೊಂಡಿದ್ದರು. 11 ಜನರಲ್ಲಿ ಮೂವರು ಮೃತಪಟ್ಟಿದ್ದಾರೆ. ಸರಸಮ್ಮ ಎಂಬುವರು ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 7 ಜನರು ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಆಡುಗೋಡಿ ಪೊಲೀಸರಿಂದ ತನಿಖೆ ಮುಂದುವರೆದಿದೆ.
ಮೃತ ಕಸ್ತೂರಮ್ಮ ಮನೆಯಲ್ಲಿ ಸ್ಫೋಟ ಸಂಭವಿಸಿತ್ತು. ಮೃತ ಮುಬಾರಕ್ನ ಪಕ್ಕದ ಮನೆಯಲ್ಲಿ ಕಸ್ತೂರಮ್ಮ ವಾಸವಿದ್ದರು. ಸ್ಫೋಟದ ತೀವ್ರತೆಗೆ ಮೊದಲನೇ ಮಹಡಿಯ ಮನೆ ಗೋಡೆ ಛಾವಣಿ ಕುಸಿದು ಬಿದ್ದಿತ್ತು. 8ಕ್ಕೂ ಹೆಚ್ಚು ಮನೆಗಳಿಗೆ ಹಾನಿ ಉಂಟಾಗಿತ್ತು. ಘಟನಾ ಸ್ಥಳಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿದ ಪರಿಶೀಲಿಸಿದ್ದರು. ಬಳಿಕ ಮಾತನಾಡಿದ್ದ ಅವರು, ಮೇಲ್ನೋಟಕ್ಕೆ ಗ್ಯಾಸ್ ಸಿಲಿಂಡರ್ ಸ್ಫೋಟದಂತೆ ಕಂಡುಬಂದಿದೆ. ಕಸ್ತೂರಮ್ಮ ಎಂಬುವರಿಗೆ ಸೇರಿದ ಮನೆಯಲ್ಲಿ ಸ್ಫೋಟ ಸಂಭವಿಸಿದ್ದು, ಮುಬಾರಕ್ ಎಂಬ ಬಾಲಕ ಮೃತಪಟ್ಟಿದ್ದಾನೆ. ಸ್ಫೋಟದ ತೀವ್ರತೆಗೆ ಸುಮಾರು 13 ಮನೆಗಳಿಗೆ ಹಾನಿಯಾಗಿದ್ದು, ನಾವೇ ದುರಸ್ತಿ ಮಾಡಿಸಿಕೊಡುತ್ತೇವೆ ಎಂದು ಅವರು ಹೇಳಿದ್ದರು.








