ತಂದೆಯಿಂದ ಅಮಾನತು ಬೆನ್ನಲ್ಲೇ, BRS ಪಕ್ಷದಿಂದ ಹೊರನಡೆದ ಕೆ.ಕವಿತಾ

ಹೈದರಾಬಾದ್‌: 

    ಭಾರತ್‌ ರಾಷ್ಟ್ರ ಸಮಿತಿ ಪಕ್ಷದಿಂದ  ಪಕ್ಷದಿಂದ ಅಮಾನತುಗೊಂಡಿರವ ಕೆ.ಕವಿತಾ ಅವರು ಇಂದು ಬುಧವಾರ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಹಾಗೆಯೇ, ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೂ  ಅವರು ರಾಜೀನಾಮೆ ಕೊಟ್ಟಿದ್ದಾರೆ. ಕವಿತಾ ಅವರು ಭಾರತ್ ರಾಷ್ಟ್ರ ಸಮಿತಿ ಸಂಸ್ಥಾಪಕ ಹಾಗೂ ಮಾಜಿ ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ಅವರ ಮಗಳು. ಕೆಸಿಆರ್‌ ಅವರೇ ಸ್ವತಃ ತಮ್ಮ ಮಗಳು ಕವಿತಾ ಅವರನ್ನು ಪಕ್ಷದಿಂದ ಉಚ್ಚಾಟಿಸಿದ್ದರು. ಇದೀಗ ಕವಿತಾ ಪಕ್ಷದಿಂದ ಹೊರನಡೆದಿದ್ದಾರೆ.

    ಎಂಎಲ್​ಸಿ ಸ್ಥಾನ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಕವಿತಾ ತಿಳಿಸಿದ್ದಾರೆ. ‘ನನ್ನ ರಾಜನಾಮೆ ಪತ್ರವನ್ನು ಸಭಾಧ್ಯಕ್ಷರು ಹಾಗೂ ಕೆ. ಚಂದ್ರಶೇಖರ್ ರಾವ್ ಅವರಿಗೆ ಕಳುಹಿಸುತ್ತಿದ್ದೇನೆ’ ಎಂದು ಹೇಳಿರುವ ಕವಿತಾ, ತಾನು ಯಾವುದೇ ಪಕ್ಷದೊಂದಿಗೆ ಹೋಗುತ್ತಿಲ್ಲ. ತೆಲಂಗಾಣ ಜಾಗೃತಿ ಸದಸ್ಯರ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುವುದಾಗಿ ಸ್ಪಷ್ಟಪಡಿಸಿದ್ದಾರೆ.

   ಇದೆಲ್ಲಾ ಯಾರಿಂದ ಆಗಿದೆ ಎನ್ನುವುದು ತಿಳಿದಿದೆ. ತಮ್ಮ ಸುತ್ತಲೂ ಇರುವ ಪಕ್ಷದ ಮುಖಂಡರ ಬಗ್ಗೆ ಹುಷಾರಾಗಿರುವಂತೆ ಅಪ್ಪನಿಗೆ ಮನವಿ ಮಾಡುತ್ತೇನೆ. ತಮ್ಮ ಕುಟುಂಬದ ವಿರುದ್ಧ ಮಸಲತ್ತು ನಡೆಸುತ್ತಿದ್ದಾರೆ ಎಂದು ತೆಲಂಗಾಣದ ಈಗಿನ ಸಿಎಂ ರೇವಂತ್ ರೆಡ್ಡಿ ಮತ್ತು ಬಿಆರ್​ಎಸ್ ನಾಯಕ ಹರೀಶ್ ರಾವ್ ಮೇಲೆ ಕವಿತಾ ಬೊಟ್ಟು ಮಾಡಿ ತೋರಿಸಿದ್ದಾರೆ. ಕಳೆದ ವರ್ಷ ಆಗಸ್ಟ್‌ನಲ್ಲಿ ದೆಹಲಿಯ ತಿಹಾರ್ ಜೈಲಿನಿಂದ ಬಿಡುಗಡೆಯಾದ ನಂತರ ತಾನು ಕಷ್ಟಪಟ್ಟು ಕೆಲಸ ಮಾಡಿದ್ದೇನೆ. ನಾನು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ ಮತ್ತು ಹಿಂದುಳಿದ ವರ್ಗಗಳಿಗೆ ಮೀಸಲಾತಿಗಾಗಿ ಕೆಲಸ ಮಾಡಿದ್ದೇನೆ. ಪಕ್ಷ ವಿರೋಧ ಚಟುವಟಿಕೆಯನ್ನು ಎಂದಿಗೂ ಮಾಡಿಲ್ಲ ಎಂದು ಕವಿತಾ ಹೇಳಿದರು. 

   ಸೆಪ್ಟೆಂಬರ್ 1 ರಂದು, ಕೆ. ಕವಿತಾ ಅವರು, ಕಾಳೇಶ್ವರಂ ಯೋಜನೆಯ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಿರುವ ತೆಲಂಗಾಣ ಸರ್ಕಾರದ ನಿರ್ಧಾರಕ್ಕೆ ಪ್ರತಿಕ್ರಿಯಿಸುತ್ತಾ, ಕಾಳೇಶ್ವರಂ ವಿಷಯಕ್ಕೆ ಸಂಬಂಧಿಸಿದಂತೆ ಕೆಸಿಆರ್ ಅವರ ವರ್ಚಸ್ಸಿನ ಮೇಲೆ ಯಾವುದೇ ಕಳಂಕ ಬಂದಿದ್ದರೆ, ಅದಕ್ಕೆ ಬಿಆರ್‌ಎಸ್ ನಾಯಕರಾದ ಹರೀಶ್ ರಾವ್ ಮತ್ತು ಸಂತೋಷ್ ರಾವ್ ಕಾರಣ ಎಂದು ಆರೋಪಿಸಿದರು. ಅವರು ತಮ್ಮ ಮತ್ತು ಕೆಸಿಆರ್ ವಿರುದ್ಧ ಪಿತೂರಿ ನಡೆಸಿದ್ದಾರೆ ಎಂದು ಆರೋಪಿಸಿದ್ದರು. ಇದೇ ಕಾರಣದಿಂದಾಗಿ ಅವರನ್ನು ಪಕ್ಷದಿಂದ ಹೊರ ಹಾಕಲಾಗಿತ್ತು.

Recent Articles

spot_img

Related Stories

Share via
Copy link