ಸಿಎಂಗೆ ಬಿಜೆಪಿ ಸವಾಲು…..!

ಬೆಂಗಳೂರು

   ಇವಿಎಂ ಯಂತ್ರಗಳ  ವಿರುದ್ಧ ಅಪಸ್ವರ, ಬಿಜೆಪಿ ವಿರುದ್ಧ ಮತಗಳ್ಳತನ ಆರೋಪ ಮಾಡಿ ರಾಹುಲ್ ಗಾಂಧಿ ಅಭಿಯಾನ ಕೈಗೊಂಡಿದ್ದಾರೆ. ಇದೀಗ ತಮ್ಮ ನಾಯಕನ ಹೋರಾಟಕ್ಕೆ ಬಲ ತುಂಬಲು ಸಿದ್ದರಾಮಯ್ಯ ಸರ್ಕಾರ ಮುಂದಾಗಿದೆ. ಮಹಾನಗರ ಪಾಲಿಕೆಗಳು, ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ, ನಗರಸಭೆ, ಪುರಸಭೆ ಹೀಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇವಿಎಂ ಮತಯಂತ್ರ ಬಳಕೆಗೆ ಕೊಕ್ ಕೊಟ್ಟು, ಹಳೆ ಪದ್ಧತಿಯಂತೆ ಬ್ಯಾಲೆಟ್‌ ಪೇಪರ್, ಅಂದರೆ ಮತಪತ್ರ ಬಳಕೆ ನಿರ್ಧರಿಸಿದೆ. ಗುರುವಾರ ನಡೆದಚ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಣಯಕೈಗೊಂಡಿದೆ. ಅಲ್ಲದೆ, ಪ್ರತ್ಯೇಕ ಮತದಾರರ ಪಟ್ಟಿ ಸಿದ್ಧಗೊಳಿಸುವುದು, ಪರಿಷ್ಕರಣೆ ಮಾಡುವ ಅಧಿಕಾರವನ್ನೂ ರಾಜ್ಯ ಚುನಾವಣಾ ಆಯೋಗಕ್ಕೆ ನೀಡಿದೆ. ಈ ಎಲ್ಲಾ ನಿರ್ಣಯಗಳನ್ನು ಚುನಾವಣಾ ಆಯೋಗಕ್ಕೆ ಶಿಫಾರಸು ಮಾಡಲಾಗಿದೆ. ಆದರೆ, ಈ ನಿರ್ಧಾರ ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ.

   ರಾಜ್ಯ ಸರ್ಕಾರ ಈ ಕ್ರಮದ ಮೂಲಕ ಹೆಬ್ಬೆಟ್ಟಿನ ದಿನಗಳನ್ನು ನೆನಪಿಸಲು ಹೊರಟಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇವಿಎಂ ಮೇಲೆ ನಂಬಿಕೆ ಇಲ್ಲ ಅಂದರೆ, ಕಳೆದ ಚುನಾವಣೆಯಲ್ಲಿ 136 ಸ್ಥಾನ ಗೆದ್ದಿರುವ ಕಾಂಗ್ರೆಸ್ ಎಲ್ಲ ಶಾಸಕರ ರಾಜೀನಾಮೆ ಪಡೆದು ಮತ್ತೆ ಚುನಾವಣೆ ನಡೆಸಲಿ ಅಂತಾ ವಿಜಯೇಂದ್ರ ಸವಾಲು ಹಾಕಿದ್ದಾರೆ. ಆದರೆ ಡಿಸಿಎಂ ಡಿಕೆ ಶಿವಕುಮಾರ್ ಸರ್ಕಾರದ ನಿರ್ಧಾರ ಸಮರ್ಥಿಸಿಕೊಂಡಿದ್ದು, ಬಿಜೆಪಿಗೆ ತಿರುಗೇಟು ನೀಡಿದ್ದಾರೆ. 

   ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿ, ಸಿದ್ದರಾಮಯ್ಯನವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ, ಬ್ಯಾಲೆಟ್ ಮೂಲಕ ಮತ್ತೆ ಚುನಾವಣೆ ಎದುರಿಸಿ ಗೆದ್ದು ಬರಲಿ ಎಂದು ಸವಾಲು ಹಾಕಿದ್ದಾರೆ. ಮತ್ತೆ ಮತಪತ್ರದತ್ತ ಮುಖ ಮಾಡುತ್ತಿರುವುದು ಮೂರ್ಖತನದ ಪರಮಾವಧಿ ಎಂದು ಜಗದೀಶ್ ಶೆಟ್ಟರ್ ಕಿಡಿಕಾರಿದ್ದಾರೆ.

   ಈ ಎಲ್ಲಾ ಆರೋಪಗಳಿಗೂ ಕೌಂಟರ್ ಕೊಟ್ಟಿರುವ ಸಿಎಂ ಸಿದ್ದರಾಮಯ್ಯ, ಅನೇಕ ದೇಶಗಳು ಮತಪತ್ರಕ್ಕೆ ಬಂದಿವೆ ಎಂದು ಸಮರ್ಥಿಸಿಕೊಂಡಿದ್ದಾರೆ. ಏತನ್ಮಧ್ಯೆ, ಕಾನೂನು ಪ್ರಕಾರ ನಿಯಮಾವಳಿ ಮಾಡಿದರೆ ಚುನಾವಣೆಯಲ್ಲಿ ಬ್ಯಾಲೆಟ್ ಬಳಕೆಗೆ ಸಿದ್ಧ ಎಂದು ರಾಜ್ಯ ಚುನಾವಣಾ ಆಯುಕ್ತರು ತಿಳಿಸಿದ್ದಾರೆ. ಸದ್ಯ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಬ್ಯಾಲೆಟ್ ಬಡಿದಾಟ ಜೋರಾಗಿದ್​ದು, ಚುನಾವಣಾ ಆಯೋಗ ಬ್ಯಾಲೆಟ್‌ ಪೇಪರ್‌ಗೆ ಒಪ್ಪಿಗೆ ಕೊಡುತ್ತದೆಯಾ ಎಂಬುದನ್ನು ಕಾದುನೋಡಬೇಕಿದೆ.

Recent Articles

spot_img

Related Stories

Share via
Copy link