ಮಂಡ್ಯ:
ಮದ್ದೂರಿನಲ್ಲಿ ಭಾನುವಾರ ರಾತ್ರಿ ನಡೆದ ಕಲ್ಲು ತೂರಾಟ ಪ್ರಕರಣ ಸಂಬಂಧ 21 ಮಂದಿ ಮುಸ್ಲಿಮರನ್ನು ಬಂಧಿಸಲಾಗಿದೆ. ಮಸೀದಿ ಕಡೆಯಿಂದ 2 ಕಲ್ಲುಗಳನ್ನು ಎಸೆದ ಬಗ್ಗೆ ಮಾಹಿತಿ ಇದೆ. ತಕ್ಷಣವೇ ಕ್ರಮ ಕೈಗೊಳ್ಳಲಾಗಿದೆ. ಹಾಗಿದ್ದರೂ ಬಿಜೆಪಿ ಹಾಗೂ ಜೆಡಿಎಸ್‌ನವರು ಪ್ರತಿಭಟನೆ ನೆಪದಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಕಿಡಿಕಾರಿದ್ದಾರೆ.
ಮದ್ದೂರು ಪ್ರಕರಣದ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಅವರು, ಪ್ರಕರಣ ನಡೆದ ತಕ್ಷಣ ಎಫ್‌ಐಆರ್ ದಾಖಲಿಸಿಕೊಂಡು 21 ಜನ ಮುಸ್ಲಿಮರನ್ನು ಬಂಧಿಸಲಾಗಿದೆ. ಅದರಲ್ಲಿ ಹೊರಗಡೆಯ ಒಂದಿಬ್ಬರು ಇರಬಹುದು ಎನ್ನಲಾಗಿದೆ. ಹಿಂದೂಗಳ ಮೇಲೆ ಯಾವುದೇ ಕೇಸ್ ಹಾಕಿಲ್ಲ, ಯಾರನ್ನೂ ಬಂಧಿಸಿಲ್ಲ ಎಂದರು.
ಬಹುಶಃ ಇಷ್ಟು ಬೇಗ ಯಾವುದೇ ಪ್ರಕರಣದಲ್ಲಿ ಕ್ರಮ ಆಗಿಲ್ಲ. ಕಲ್ಲೆಸೆದವರ ಮೇಲೆ ಕ್ರಮ ಜರುಗಿಸಿದ ಮೇಲೆ ಅವರು ಬಿಜೆಪಿ, ಜೆಡಿಎಸ್‌ನವರು ಪ್ರತಿಭಟನೆ ಮಾಡುತ್ತಿರುವುದು ಯಾಕೆ? ಕೋಮುಗಲಭೆ ಮಾಡುವಂತ ಪ್ರಯತ್ನ ಮಾಡುತ್ತಿದ್ದಾರೆ. ಇದು ಅವರಿಗೆ ಶೋಭೆ ತರುವಂತಹದ್ದಲ್ಲ ಎಂದು ಸಚಿವರು ಹೇಳಿದರು








