ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ; ವಿಧಾನಸಭೆಯಲ್ಲಿ ನಿರ್ಣಯ ಪಾಸ್‌

ಶ್ರೀನಗರ:

   ಜಮ್ಮು ಮತ್ತು ಕಾಶ್ಮೀರದಲ್ಲಿ ಬಹುತೇಕರ ಬೇಡಿಕೆಯಾಗಿರುವ ವಿಶೇಷ ಸ್ಥಾನಮಾನ ಮರುಸ್ಥಾಪನೆಯ ನಿರ್ಣಯ ಇಂದು ಅಂಗೀಕಾರಗೊಂಡಿದೆ. ಜಮ್ಮು ಮತ್ತು ಕಾಶ್ಮೀರ ಉಪಮುಖ್ಯಮಂತ್ರಿ ಸುರೀಂದರ್ ಸಿಂಗ್ ಚೌಧರಿ ಅವರು ಬುಧವಾರ ವಿಧಾನಸಭೆಯಲ್ಲಿ 370 ನೇ ವಿಧಿಯ ಅಡಿಯಲ್ಲಿ ವಿಶೇಷ ಸ್ಥಾನಮಾನವನ್ನು ಮರುಸ್ಥಾಪಿಸುವ ನಿರ್ಣಯವನ್ನು ಮಂಡಿಸಿದರು. ಈ ನಿರ್ಣಯವನ್ನು ಆರೋಗ್ಯ ಮತ್ತು ಶಿಕ್ಷಣ ಸಚಿವೆ ಸಕೀನಾ ಇಟೂ ಅವರು ಸದನದಲ್ಲಿ ಅನುಮೋದಿಸಿದರು.

   ಇನ್ನು ಸದನದಲ್ಲಿ ನಿರ್ಣಯವನ್ನು ಮಂಡಿಸುತ್ತಿದ್ದಂತೆಯೇ ಬಿಜೆಪಿ ಶಾಸಕರು ಇಂದು ಸದನದ ಕಲಾಪದಲ್ಲಿ ಇದನ್ನು ಸೇರಿಸಿಲ್ಲ ಎಂದು ಪ್ರತಿಭಟಿಸಿದರು. ಗದ್ದಲದ ನಡುವೆಯೇ ನಿರ್ಣಯವನ್ನು ಅಂಗೀಕರಿಸಲಾಯಿತು. ಐದು ವರ್ಷಗಳ ಹಿಂದೆ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಮತ್ತು ಸವಲತ್ತುಗಳನ್ನು ನೀಡುವ 370 ನೇ ವಿಧಿಯನ್ನು ಹಿಂತೆಗೆದುಕೊಂಡಿತು. ಈ ಕ್ರಮವು ಕಾನೂನು ಸಮರಕ್ಕೆ ಕಾರಣವಾಗಿತ್ತು. ಮತ್ತು ಕಳೆದ ವರ್ಷದ ಡಿಸೆಂಬರ್‌ನಲ್ಲಿ, ಸುಪ್ರೀಂ ಕೋರ್ಟ್ 370 ನೇ ವಿಧಿಯನ್ನು “ತಾತ್ಕಾಲಿಕ” ನಿಬಂಧನೆ ಎಂದು ಪರಿಗಣಿಸಿ, ರದ್ದುಗೊಳಿಸುವಿಕೆಯನ್ನು ಎತ್ತಿಹಿಡಿದಿತ್ತು.

   ಆರ್ಟಿಕಲ್‌ 370 ರದ್ದು ಮಾಡಿದ ನಂತರ ಜಮ್ಮು ಮತ್ತು ಕಾಶ್ಮೀರವನ್ನು ಪುನರ್ರಚಿಸಲಾಗಿತ್ತು. ರಾಜ್ಯವನ್ನು ಜಮ್ಮು-ಕಾಶ್ಮೀರ ಮತ್ತು ಲಡಾಖ್ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಲಾಯಿತು. ಇದಕ್ಕೆ ಜಮ್ಮು-ಕಾಶ್ಮೀರ ಜನಪ್ರತಿನಿಧಿಗಳಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಇನ್ನು ಒಮರ್ ಅಬ್ದುಲ್ಲಾ ಅವರು ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಎರಡೇ ದಿನದಲ್ಲಿ ಕರೆದಿದ್ದ ಸಚಿವ ಸಂಪುಟ ಸಭೆಯಲ್ಲಿ ಜಮ್ಮು-ಕಾಶ್ಮೀರದ ರಾಜ್ಯ ಸ್ಥಾನಮಾನ ಮರುಸ್ಥಾಪನೆಯ ನಿರ್ಣಯವನ್ನು ಅಂಗೀಕರಿಸಿತ್ತು.

   ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಉಪಮುಖ್ಯಮಂತ್ರಿ ಸುರೀಂದರ್ ಚೌಧರಿ ಮತ್ತು ಸಚಿವರಾದ ಸಕೀನಾ ಮಸೂದ್ ಇಟೂ, ಜಾವೇದ್ ಅಹ್ಮದ್ ರಾಣಾ, ಜಾವೈದ್ ಅಹ್ಮದ್ ದಾರ್ ಮತ್ತು ಸತೀಶ್ ಶರ್ಮಾ ಉಪಸ್ಥಿತರಿದ್ದರು. ನಿರ್ಣಯದ ಕರಡನ್ನು ಸಿದ್ಧಪಡಿಸಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಸ್ತಾಂತರಿಸಿದ್ದರು.

  ಇದರ ಬೆನ್ನಲ್ಲೇ ಈ ಬಗ್ಗೆ ನೂತನ ಮುಖ್ಯಮಂತ್ರಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅಕ್ಟೋಬರ್‌ 23ರಂದು ಹೊಸದಿಲ್ಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾ ಚರ್ಚೆ ನಡೆಸಿದ್ದರು. ಈ ವೇಳೆ ಅಮಿತ್ ಶಾ ಅವರು ಹೊಸದಾಗಿ ಆಯ್ಕೆಯಾದ ಸರ್ಕಾರಕ್ಕೆ ಕೇಂದ್ರದ ಸಂಪೂರ್ಣ ಬೆಂಬಲದ ಭರವಸೆ ನೀಡಿದರು ಮತ್ತು ರಾಜ್ಯಸ್ಥಾನ ಪುನಃ ಸ್ಥಾಪಿಸುವ ಬಗ್ಗೆ ಧನಾತ್ಮಕವಾಗಿ ಪ್ರತಿಕ್ರಿಯಿಸಿದ್ದರು

Recent Articles

spot_img

Related Stories

Share via
Copy link