ರಾಯಚೂರು
ವೈದ್ಯೋ ನಾರಾಯಣೋ ಹರಿ ಎಂಬ ಮಾತಿದೆ. ಜನರು ದೇವರನ್ನ ಕಣ್ಣಾರೆ ಕಾಣದೇ ಇದರೂ ವೈದ್ಯರಲ್ಲಿ ದೇವರನ್ನ ಕಾಣುತ್ತಾರೆ. ಆದರೆ ಅಂತಹ ವೈದ್ಯರೇ ನಕಲಿ ಎಂದು ಗೊತ್ತಾದರೆ, ರೋಗಿಗಳ ಗತಿ ಏನು? ಸದ್ಯ ಇಂತಹದೊಂದು ಘಟನೆ ನಗರದಲ್ಲಿ ಬೆಳಕಿಗೆ ಬಂದಿದ್ದು, ವೈದ್ಯರ ಮುಖವಾಡ ಹಾಕಿಕೊಂಡು ಚಿಕಿತ್ಸೆ ನೀಡುತ್ತಿದ್ದ ನಕಲಿ ವೈದ್ಯರನ್ನು ಪತ್ತೆ ಮಾಡಿ, ಕ್ಲಿನಿಕ್ಗಳನ್ನು ಸೀಜ್ ಮಾಡುವ ಮೂಲಕ ಆರೋಗ್ಯ ಇಲಾಖೆ ಬಿಗ್ ಆಪರೇಷನ್ ಮಾಡಿದೆ.
ಗಡಿ ಜಿಲ್ಲೆ ರಾಯಚೂರಿನಲ್ಲಿ ಕಳೆದ ಕೆಲ ವರ್ಷಗಳಿಂದ ನೂರಾರು ನಕಲಿ ವೈದ್ಯರು ಬಾಲ ಬಿಚ್ಚಿದ್ದಾರೆ. ಅಸಲಿ ವೈದ್ಯರಂತೆ ತಾವೇ ವಿವಿಧ ಮೆಡಿಕಲ್ ಕೋರ್ಸ್ ಓದಿ ಕೊಂಡಿರುವುದಾಗಿ ಫೋಸ್ ಕೊಡುತ್ತಾ ಅಸಲಿ ವೈದ್ಯರನ್ನೂ ಮೀರಿಸುವ ರೀತಿ ಈ ನಕಲಿ ವೈದ್ಯರು ಜನರಿಗೆ ಚಿಕಿತ್ಸೆ ನೀಡುತ್ತಿದ್ದರು.
ಇದೇ ನಕಲಿ ವೈದ್ಯರು, ಆರ್ಎಂಪಿ ವೈದ್ಯರ ವಿರುದ್ಧ ಇತ್ತೀಚೆಗೆ ನಡೆದ ಕೆಡಿಪಿ ಸಭೆಯಲ್ಲಿ ಎಂಎಲ್ಸಿ ಶರಣಗೌಡ ಬಯ್ಯಾಪುರ ಆಕ್ರೋಶ ಹೊರಹಾಕಿದ್ದರು. ಜಿಲ್ಲೆಯಲ್ಲಿ ನಕಲಿ ವೈದ್ಯರ ಹಾವಳಿ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದರು. ಆರ್ಎಂಪಿಗಳು, ಅವರ ಕೈಯಲ್ಲಿ ಕೆಲಸ ಮಾಡಿರುವವರೇ ಜಿಲ್ಲೆಯಲ್ಲಿ ಖ್ಯಾತ ವೈದ್ಯರು ಅಂತ ಅವರು ಕಿಡಿಕಾರಿದ್ದರು.
ಅಷ್ಟೇ ಅಲ್ಲ ಚಿಕಿತ್ಸೆ ಆರಂಭದಲ್ಲೇ ಆರ್ಎಂಪಿ ನಕಲಿ ವೈದ್ಯರು ಹೈಡೋಸ್ ಚಿಕಿತ್ಸೆ ಕೊಡುತ್ತಾರೆ. ಹೀಗಾಗಿ ನಕಲಿ ವೈದ್ಯರ ಬಳಿ ಬರುವವರು ಅತೀ ಕಡಿಮೆ ಅವಧಿಯಲ್ಲೇ ಗುಣ ಮುಖರಾಗುತ್ತಾರೆ. ಆದರೆ ಅವರ ದೀರ್ಘಕಾಲದ ಸ್ಥಿತಿಗತಿಯನ್ನ ಆರ್ಎಂಪಿ ವೈದ್ಯರು ತಲೆಕಡೆಸಿಕೊಳ್ಳಲ್ಲ. ಅಸಲಿ ವೈದ್ಯರು ಹಂತಹಂತವಾಗಿ ಚಿಕಿತ್ಸೆ ನೀಡುತ್ತಾರೆ. ಹೀಗಾಗಿ ಜನರು ಹೈಡೋಸ್ ಕೊಡುವ ನಕಲಿ ವೈದ್ಯರ ಬಳಿಯೇ ಹೋಗುತ್ತಾರೆ ಅಂತ ಎಂಎಲ್ಸಿ ಶರಣೇಗೌಡ ಬಯ್ಯಾಪುರ ಕಿಡಿಕಾರಿದ್ದರು.
ಇತ್ತ ಇದೇ ವಿಷಯ ಜಿಲ್ಲೆಯಾದ್ಯಂತ ಬಾರಿ ಸದ್ದು ಮಾಡಿತ್ತು. ಇದಾದ ಬಳಿಕ ಜಿಲ್ಲೆಯಲ್ಲಿ ಆಕ್ಟಿವ್ ಆಗಿರುವ ನಕಲಿ ವೈದ್ಯರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಇದೇ ಕಾರಣಕ್ಕೆ ಜಿಲ್ಲಾಧಿಕಾರಿ ನಿತೀಶ್.ಕೆ ಅವರ ಆದೇಶದನ್ವಯ ಆರೋಗ್ಯ ಇಲಾಖೆ ಜಿಲ್ಲೆಯಲ್ಲಿ ನಕಲಿ ವೈದ್ಯರ ವಿರುದ್ಧ ಬಿಗ್ ಆಪರೇಶನ್ ಮಾಡಿ ಮುಗಿಸಿದೆ.
ರಾಯಚೂರು ನಗರ ಸೇರಿ ಜಿಲ್ಲೆಯಾದ್ಯಂತ ಒಟ್ಟು 120ಕ್ಕೂ ಹೆಚ್ಚು ನಕಲಿ ವೈದ್ಯರ ಪಟ್ಟಿಯನ್ನ ಆರೋಗ್ಯ ಇಲಾಖೆ ಸಿದ್ಧಪಡಿಸಿತ್ತು. ಅದರ ಆಧಾರದಲ್ಲಿ ಎಲ್ಲಾ 120 ನಕಲಿ ವೈದ್ಯರಿಗೆ ಬಿಗ್ ಶಾಕ್ ಕೊಟ್ಟಿದೆ. ಸದ್ಯ 120 ನಕಲಿ ಕ್ಲಿನಿಕ್ಗಳನ್ನ ಸೀಜ್ ಮಾಡಿ ಆರೋಗ್ಯ ಇಲಾಖೆ ಕ್ಲೋಸ್ ಮಾಡಿದೆ.
ಕೆಪಿಎಂಇ ರಿಜಿಸ್ಟ್ರೇಷನ್ ಇಲ್ಲದೇ ಇರುವ, ಅಲೋಪತಿ ಚಿಕಿತ್ಸೆ ನೀಡುತ್ತಿರುವ, ಆಯುಷ್ ವೈದ್ಯರಿಗೂ ಶಾಕ್ ನೀಡಲಾಗಿದೆ. ಈ ರೀತಿ ನಿಯಮ ಉಲ್ಲಂಘಿಸಿದ್ದ 17 ಜನರಿಗೆ 25 ರಿಂದ 50 ಸಾವಿರ ರೂ. ದಂಡ ವಿಧಿಸಲಾಗಿದೆ. ನಕಲಿ ವೈದ್ಯರಿಗೆ ಕಾನೂನು ಕ್ರಮ ಜರುಗಿಸುವುದಾಗಿ ಆರೋಗ್ಯ ಇಲಾಖೆ ಡಿಎಚ್ಓ ಡಾ.ಸುರೇಂದ್ರಬಾಬು ಹೇಳಿದ್ದಾರೆ.
ಸದ್ಯ ಇಂತಹ ನಕಲಿ ವೈದ್ಯರ ಬಗ್ಗೆ ಎಚ್ಚರವಹಿಸಬೇಕಿದೆ. ಕಡಿಮೆ ಹಣ ಖರ್ಚಾಗತ್ತೆ ಅಂತ ನಕಲಿ ಆರ್ಎಂಪಿ ವೈದ್ಯರ ಬಳಿ ಚಿಕಿತ್ಸೆಗೆ ಹೋಗುವ ಮೊದಲು ಒಮ್ಮೆ ಯೋಚಿಸಬೇಕಿದೆ. ಇತ್ತ ಆರೋಗ್ಯ ಇಲಾಖೆ ಕೂಡ ಜಾಣ ಕುರುಡುತನ ಪ್ರದರ್ಶನ ಮಾಡದೇ ಸಾರ್ವಜನಿಕರ ಹಿತಾಸಕ್ತಿ ಕಾಪಾಡಬೇಕಿದೆ.
