ಕೊಪ್ಪಳ:
ದಶಕದ ಹಿಂದೆ ರಾಜ್ಯದ ರಾಜಕಾರಣದಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಗಿದ್ದ ವಿದ್ಯಾರ್ಥಿ ಯಲ್ಲಾಲಿಂಗನ ಕೊಲೆ ಪ್ರಕರಣದ ಅಂತಿಮ ತೀರ್ಪು ಶುಕ್ರವಾರ ಪ್ರಕಟವಾಗಿದೆ. ಜಿಲ್ಲಾ ನ್ಯಾಯಾಲಯವು ಪ್ರಕರಣ ವಿಚಾರಣೆ ನಡೆಸಿ, ಸಾಕ್ಷ್ಯಾಧಾರಗಳ ಕೊರತೆಯಿಂದ ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿದೆ.
ಕೊಪ್ಪಳ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಅಂತಿಮ ತೀರ್ಪು ಪ್ರಕಟಿಸಿದೆ. ಯಲ್ಲಾಲಿಂಗನ ಕೊಲೆ ಪ್ರಕರಣ ಈ ಹಿಂದೆ ಶಿವರಾಜ ತಂಗಡಗಿ ಸಚಿವರಾಗಿದ್ದಾಗ ಅವರ ರಾಜೀನಾಮೆಗೂ ಕಾರಣವಾಗಿತ್ತು. ಇದೀಗ ಪ್ರಕರಣದಲ್ಲಿ ಸಾಕ್ಷಾಧಾರಗಳ ಕೊರತೆಯಿಂದ ಕೋರ್ಟ್ ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿ ತೀರ್ಪು ನೀಡಿದೆ.
ಕನಕಗಿರಿ ತಾಲೂಕಿನ ಕನಕಾಪುರ ಗ್ರಾಮದ ವಿದ್ಯಾರ್ಥಿ ಯಲ್ಲಾಲಿಂಗ ತಮ್ಮ ಗ್ರಾಮದಲ್ಲಿ ನಡೆದಿದ್ದ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದ. ಇದಾದ ಬಳಿಕ 2015ರ ಜನವರಿ 11ರಂದು ಕೊಪ್ಪಳ ರೈಲ್ವೆ ನಿಲ್ದಾಣದಲ್ಲಿ ಯಲ್ಲಾಲಿಂಗನ ಕೊಲೆ ನಡೆದಿತ್ತು.
ಇದು ಮೊದಲು ಆತ್ಮಹತ್ಯೆ ಎಂದು ಶಂಕಿಸಲಾಗಿದ್ದರೂ ನಂತರ ಕೊಲೆ ಎಂದು ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಯಿತು. ಸಚಿವ ಶಿವರಾಜ ತಂಗಡಗಿ ಆಪ್ತ ಹನಮೇಶ ನಾಯಕ ಸೇರಿ 9 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ಯಲ್ಲಾಲಿಂಗನ ಸಾವಿಗೆ ನ್ಯಾಯ ಒದಗಿಸುವಂತೆ ದೊಡ್ಡ ಮಟ್ಟದಲ್ಲಿ ಹೋರಾಟಗಳು ನಡೆದಿದ್ದರಿಂದ ರಾಜ್ಯ ಮಟ್ಟದಲ್ಲಿ ಸದ್ದು ಮಾಡಿ ಸಚಿವ ಶಿವರಾಜ ತಂಗಡಗಿ ಸಂಪುಟದಿಂದ ಹೊರಬೀಳುವಂತಾಗಿತ್ತು.
ಸುದೀರ್ಘ ಹತ್ತು ವರ್ಷಗಳ ವಿಚಾರಣೆ ನಡೆದಿದ್ದು ಈಗ ನ್ಯಾಯಾಲಯದ ತೀರ್ಪು ಹೊರಬಿದ್ದಿದೆ. ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸಲಾಗಿತ್ತು. ನಂತರ ಆರೋಪಿಗಳಿಗೆ ಜಾಮೀನು ದೊರೆತಿತ್ತು. 2021ರಲ್ಲಿ ಆರೋಪಿ ಮಹಾಂತೇಶ್ ನಾಯಕನ ಮದುವೆಯಲ್ಲಿ ಪೊಲೀಸರು ಭಾಗವಹಿಸಿದ್ದರಿಂದ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿತ್ತು.








