ಟ್ರಂಪ್ ತೈಲ ಹೇಳಿಕೆಯ ಕುರಿತು ಮಾಸ್ಕೋ ರಾಯಭಾರಿ ಹೇಳಿದ್ದೇನು?

ನವದೆಹಲಿ :

     ಭಾರತ ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೊಂಡ ಒಂದು ದಿನದ ನಂತರ, ಭಾರತಕ್ಕೆ ರಷ್ಯಾದ ರಾಯಭಾರಿ ಡೆನಿಸ್ ಅಲಿಪೋವ್ ಪ್ರತಿಕ್ರಿಯಿಸಿ, ಮಾಸ್ಕೋ ಜೊತೆಗಿನ ಭಾರತದ ಇಂಧನ ಸಹಕಾರವು ಅದರ ರಾಷ್ಟ್ರೀಯ ಹಿತಾಸಕ್ತಿಗಳಿಗೆ ಹೊಂದಿಕೆಯಾಗಿದೆ ಎಂದು ಹೇಳಿದ್ದಾರೆ.

     ಭಾರತವು ರಷ್ಯಾದ ತೈಲವನ್ನು ಆಮದು ಮಾಡಿಕೊಳ್ಳುವುದನ್ನು ಮುಂದುವರಿಸುತ್ತದೆಯೇ ಎಂದು ಕೇಳಿದಾಗ, ಅಲಿಪೋವ್, ಇದು ಭಾರತ ಸರ್ಕಾರದ ಪ್ರಶ್ನೆ. ಭಾರತ ಸರ್ಕಾರವು ಈ ದೇಶದ ರಾಷ್ಟ್ರೀಯ ಹಿತಾಸಕ್ತಿಯನ್ನು ಮೊದಲು ಮನಸ್ಸಿನಲ್ಲಿಟ್ಟುಕೊಂಡಿದೆ ಮತ್ತು ಇಂಧನ ಕ್ಷೇತ್ರದಲ್ಲಿ ನಮ್ಮ ಸಹಕಾರವು ಆ ಹಿತಾಸಕ್ತಿಗಳಿಗೆ ಹೊಂದಿಕೆಯಾಗುತ್ತದೆ ಎಂದು ಹೇಳಿದರು.

      ಭಾರತವು ರಷ್ಯಾದ ತೈಲ ಆಮದನ್ನು ಕೊನೆಗೊಳಿಸುವುದಾಗಿ ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ ಎಂದು ಟ್ರಂಪ್ ವರದಿಗಾರರಿಗೆ ತಿಳಿಸಿದ ನಂತರ ಈ ಹೇಳಿಕೆಗಳು ಬಂದಿವೆ. ರಷ್ಯಾದ ಉಪ ಪ್ರಧಾನ ಮಂತ್ರಿ ಅಲೆಕ್ಸಾಂಡರ್ ನೊವಾಕ್ ಕೂಡ ಟ್ರಂಪ್ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸಿ, ಮಾಸ್ಕೋ ತನ್ನ ಪಾಲುದಾರರಿಗೆ ಹೊಂದಿರುವ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ. ನಾವು ನಮ್ಮ ಪಾಲುದಾರರೊಂದಿಗೆ ಸಹಯೋಗವನ್ನು ಮುಂದುವರಿಸುತ್ತೇವೆ. “ನಮ್ಮ ಪಾಲುದಾರರು ನಮ್ಮೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸುತ್ತಾರೆ ಎಂಬ ವಿಶ್ವಾಸ ನನಗಿದೆ” ಎಂದು ಅವರು ಹೇಳಿದರು. 

   ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಷ್ಯಾದ ತೈಲ ಖರೀದಿ ಮಾಡುವ ಮೂಲಕ ಭಾರತ ಉಕ್ರೇನ್‌ ವಿರುದ್ಧದ ಯುದ್ಧಕ್ಕೆ ಹಣಕಾಸಿನ ನೆರವು ನೀಡುತ್ತಿದೆ ಎಂಬ ಅಮೆರಿಕದ ಅಭಿಪ್ರಾಯಕ್ಕೆ ಮೋದಿ ಕಳವಳ ವ್ಯಕ್ತಪಡಿಸಿದ್ದಾರೆ. ಭಾರತ ತೈಲ ಖರೀದಿಸುವುದು ನಮಗೂ ತೃಪ್ತಿದಾಯಕವಾಗಿರಲಿಲ್ಲ ಎಂದು ಅಭಿಪ್ರಾಯಪಟ್ಟರು. ಚೀನಾ ಮೇಲೆಯೂ ಇದೇ ರೀತಿ ನಿರ್ಬಂಧ ಹೇರಬೇಕು ಎಂದು ನಾವು ನಿರ್ಧರಿಸಿದ್ದೇವೆ ಎಂದು ಹೇಳಿದ ಟ್ರಂಪ್‌, ಭಾರತ ನಮ್ಮ ಮನವಿಗೆ ಒಪ್ಪಿದೆ, ಮೋದಿ ನನ್ನ ಆಪ್ತ ಎಂದು ಹೇಳಿದರು. ಟ್ರಂಪ್ ಅವರ ಹೇಳಿಕೆಗಳನ್ನು ಭಾರತ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Recent Articles

spot_img

Related Stories

Share via
Copy link