ಬೆಂಗಳೂರು:
ಕೆಎಸ್ಸಿಎ ನೂತನ ಆಡಳಿತ ಮಂಡಳಿ ಚುನಾವಣೆಯಲ್ಲಿ ಸ್ಪರ್ಧಿಸಲು ಆಕಾಂಕ್ಷಿಯಾಗಿರುವ ಭಾರತದ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ನೇತೃತ್ವದ ತಂಡವು, ಹಾಲಿ ಆಡಳಿತಗಾರರು ಮತ್ತಷ್ಟು ವಿಳಂಬ ಮಾಡದೇ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಿದೆ. ಸಂಸ್ಥೆಯ ಬೈಲಾ ಪ್ರಕಾರ ಸೆಪ್ಟೆಂಬರ್ 30ರ ಮೊದಲು ಚುನಾವಣೆ ನಡೆದು, ಈ ಹೊತ್ತಿಗೆ ಹೊಸ ಆಡಳಿತ ಮಂಡಳಿಯು ಅಧಿಕಾರ ವಹಿಸಿಕೊಳ್ಳಬೇಕಿತ್ತು ಎಂದು ಪ್ರಸಾದ್ ಹೇಳಿದ್ದಾರೆ.
ಬಿಸಿಸಿಐಯಲ್ಲಿ ಪ್ರಸ್ತುತ ಖಜಾಂಚಿಯಾಗಿರುವ ರಘುರಾಮ್ ಭಟ್ ನೇತೃತ್ವದ ಆಡಳಿತ ಮಂಡಳಿಯ ಅಧಿಕಾರಾವಧಿ ಸೆ.30 ರಂದು ಕೊನೆಗೊಂಡಿದೆ. ಆದರೆ, ಚುನಾವಣೆಗೆ ನಿರ್ದಿಷ್ಟ ದಿನಾಂಕವನ್ನು ಇನ್ನೂ ಘೋಷಿಸಲಾಗಿಲ್ಲ.ಜೂನ್ನಲ್ಲಿ ಐಪಿಎಲ್ ಟ್ರೋಫಿ ಗೆದ್ದ ಆರ್ಸಿಬಿ ತಂಡದ ವಿಜಯೋತ್ಸವದ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದ ನೈತಿಕ ಹೊಣೆ ಹೊತ್ತು ಎ.ಶಂಕರ್ ಮತ್ತು ಇ.ಎಸ್. ಜೈರಾಮ್ ರಾಜೀನಾಮೆ ನೀಡಿದ ನಂತರ ಕೆಎಸ್ಸಿಎಗೆ ಚುನಾಯಿತ ಕಾರ್ಯದರ್ಶಿ ಮತ್ತು ಖಜಾಂಚಿ ಇಲ್ಲದಂತಾಗಿದೆ.
ಸಂಸ್ಥೆಯ ಸುಗಮ ಕಾರ್ಯನಿರ್ವಹಣೆಗಾಗಿ ಚುನಾವಣಾ ಪ್ರಕ್ರಿಯೆಯನ್ನು ಆದಷ್ಟು ಬೇಗ ಪ್ರಾರಂಭಿಸಬೇಕು ಎಂದು ಕೆಎಸ್ಸಿಎ ಮಾಜಿ ಖಜಾಂಚಿ ವಿನಯ್ ಮೃತ್ಯುಂಜಯ ಮತ್ತು ಮಾಜಿ ಆಟಗಾರ್ತಿ ಶಾಂತಾ ರಂಗಸ್ವಾಮಿ ಸಮ್ಮುಖದಲ್ಲಿ ಪ್ರಸಾದ್ ಒತ್ತಾಯಿಸಿದರು .ವಾಸ್ತವವಾಗಿ 45 ದಿನಗಳಲ್ಲಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂಬ ನಿಯಮವಿದೆ. ಆದರೆ ಸುಮಾರು ಎರಡು ತಿಂಗಳು ಕಳೆದರೂ ಇನ್ನೂ ಚುನಾವಣೆ ನಡೆದಿಲ್ಲ ಎಂದು ವಿನಯ್ ಮೃತ್ಯುಂಜಯ ಹೇಳಿದರು.
12 ವರ್ಷ ಬಳಿಕ ವೆಂಕಟೇಶ್ ಮತ್ತೆ ಕೆಎಸ್ಸಿಎಗೆ ಆಗಮಿಸುವ ನಿರೀಕ್ಷೆಯಲ್ಲಿದ್ದಾರೆ. ಭಾರತದ ಪರ 33 ಟೆಸ್ಟ್, 161 ಏಕದಿನ ಪಂದ್ಯಗಳನ್ನಾಡಿರುವ ವೆಂಕಟೇಶ್ ಕ್ರಮವಾಗಿ 96 ಮತ್ತು196 ವಿಕೆಟ್ ಕಿತ್ತಿದ್ದಾರೆ.








