ಫಡ್ನವೀಸ್ ನೇತೃತ್ವದ ಸಂಪುಟ ಸಭೆ ‘ಬಹಿಷ್ಕರಿಸಿದ’ ಶಿಂಧೆ ಸಚಿವರು!

ಮುಂಬೈ: 

    ಮಹಾರಾಷ್ಟ್ರದ ಆಡಳಿತಾರೂಢ ಮಹಾಯುತಿ ಮೈತ್ರಿಕೂಟದಲ್ಲಿನ ಬಿರುಕು ಮತ್ತಷ್ಟು ದೊಡ್ಡದಾಗಿದ್ದು, ಡೊಂಬಿವಲಿಯ ಸೇನಾ ನಾಯಕರೊಬ್ಬರನ್ನು ಬಿಜೆಪಿಗೆ ಸೇರಿಸಿಕೊಳ್ಳುವುದನ್ನು ವಿರೋಧಿಸಿ, ಮಂಗಳವಾರ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯ ಸಚಿವರು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ವಾರದ ಸಚಿವ ಸಂಪುಟ ಸಭೆಯನ್ನು ಬಹಿಷ್ಕರಿಸಿದ್ದಾರೆ.

    ಮಹಾರಾಷ್ಟ್ರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮುನ್ನ ಮಹಾಯುತಿ ಮೈತ್ರಿಕೂಟದಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ನಾಸಿಕ್ ಜಿಲ್ಲೆಯ ಯೆಯೋಲಾದಲ್ಲಿ ಶಿಂಧೆ ಅವರ ಶಿವಸೇನೆಯು ಪ್ರತಿಪಕ್ಷದ ಭಾಗವಾಗಿರುವ ಎನ್‌ಸಿಪಿ(ಎಸ್‌ಪಿ) ಜೊತೆ ಕೈಜೋಡಿಸಲು ನಿರ್ಧರಿಸಿದೆ. ಈ ಹೊಸ ಮೈತ್ರಿಯು, ಭಾರತೀಯ ಜನತಾ ಪಕ್ಷ(ಬಿಜೆಪಿ) ಮತ್ತು ಅಜಿತ್ ಪವಾರ್ ಅವರ ಎನ್‌ಸಿಪಿಯ ವಿರುದ್ಧ ಸ್ಪರ್ಧಿಸಲಿದೆ.

    ಈ ಮಧ್ಯೆ ಬಿಜೆಪಿ ರಾಜ್ಯಾಧ್ಯಕ್ಷ ರವೀಂದ್ರ ಚವಾಣ್ ಅವರು ಡೊಂಬಿವಲಿಯ ಸೇನಾ ನಾಯಕನನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದು, ಇದನ್ನು ‘ಆಪರೇಷನ್ ಕಮಲ’ ಎಂದು ಶಿಂಧೆ ಪಕ್ಷ ಟೀಕಿಸಿದೆ. ಬಿಜೆಪಿಯ ಈ ಕ್ರಮವನ್ನು ಶಿವಸೇನೆ ತೀವ್ರವಾಗಿ ವಿರೋಧಿಸಿದ್ದು, ಉಪಮುಖ್ಯಮಂತ್ರಿ ಶಿಂಧೆ ಹೊರತುಪಡಿಸಿ ಶಿವಸೇನೆಯ ಎಲ್ಲಾ ಸಚಿವರು ಸಂಪುಟ ಸಭೆಗೆ ಗೈರು ಆಗಿದ್ದರು.

    ನಂತರ ಫಡ್ನವೀಸ್ ಈ ಸಮಸ್ಯೆಯನ್ನು ಪರಿಹರಿಸಲು ಶಿವಸೇನೆಯ ಸಚಿವರನ್ನು ಸಭೆಗೆ ಕರೆದರು. ಉಲ್ಹಾಸ್‌ನಗರದ ಬಿಜೆಪಿ ನಾಯಕರೊಬ್ಬರನ್ನು ಶಿಂಧೆ ಪಕ್ಷಕ್ಕೆ ಸೇರಿಸಿಕೊಳ್ಳುವುದನ್ನು ಉಲ್ಲೇಖಿಸಿ ಶಿವಸೇನೆ ಮೊದಲು ಆಪರೇಷನ್ ಮಾಡಲು ಪ್ರಾರಂಭಿಸಿತು ಎಂದು ಶಿಂಧೆ ಸಚಿವರಿಗೆ ತಿಳಿಸಿದರು.

    ಬಿಜೆಪಿಯು ಸ್ಥಳೀಯ ನಾಯಕರನ್ನು ಬೇಟೆಯಾಡುತ್ತಿದೆ ಎಂದು ಸೇನಾ ಸಚಿವರೊಬ್ಬರು ಹೇಳಿದ್ದಾರೆ. “ಮಹಾಯುತಿ ಸರ್ಕಾರದಲ್ಲಿ ಸೇನಾ ಸಚಿವರ ಬಗ್ಗೆ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ. ಸೇನಾ ಸಚಿವರು ಮತ್ತು ಶಾಸಕರಿಗೆ ಸಾಕಷ್ಟು ಹಣವನ್ನು ಮಂಜೂರು ಮಾಡುತ್ತಿಲ್ಲ. ಪ್ರಮುಖ ನಿರ್ಧಾರಗಳನ್ನು ಸಂಬಂಧಪಟ್ಟ ಸಚಿವರೊಂದಿಗೆ ಸಮಾಲೋಚಿಸದೆ ತೆಗೆದುಕೊಳ್ಳಲಾಗುತ್ತಿದೆ. ಸಿಎಂಒ ಸೇನಾ ಸಚಿವರ ಹಕ್ಕುಗಳನ್ನು ಅತಿಕ್ರಮಿಸುತ್ತಿದೆ. ನಾವು ಸರ್ಕಾರದಲ್ಲಿ ಸಮಾನ ಪಾಲುದಾರರು, ಆದರೆ ಹಣವನ್ನು ಪಡೆಯಲು ನಾವು ಪರದಾಡಬೇಕಾಗಿದೆ” ಎಂದು ಶಿವಸೇನಾ ಸಚಿವರೊಬ್ಬರು ಹೇಳಿದ್ದಾರೆ.

Recent Articles

spot_img

Related Stories

Share via
Copy link