ಮದ್ದೂರಿನಿಂದ ನಾನು ಅಥವಾ ಅಭಿಷೇಕ್ ಸ್ಪರ್ಧೆ‌ ಖಚಿತ: ಸುಮಲತಾ ಅಂಬರೀಷ್

ಮದ್ದೂರು :

    ಮುಂದಿನ ವಿಧಾನಸಭಾ ಚುನಾವಣೆಯಲ್ಲಿ  ನನ್ನ ಸ್ಪರ್ಧೆ ಖಚಿತ. ಅದು ಯಾವ ಕ್ಷೇತ್ರ ಎನ್ನುವುದನ್ನು ಬಿಜೆಪಿ ವರಿಷ್ಠರು ತೀರ್ಮಾನ ಮಾಡುತ್ತಾರೆ. ಆದರೆ, ಮದ್ದೂರು  ಕ್ಷೇತ್ರ ನನ್ನ ಪ್ರಥಮ ಆಯ್ಕೆಯಾಗಿದೆ ಎಂದು ಮಾಜಿ ಸಂಸದೆ ಸುಮಲತಾ ಅಂಬರೀಶ್  ಸೋಮವಾರ ಹೇಳಿದರು. ತಾಲೂಕಿನ ದೊಡ್ಡ ಅರಸಿನಕೆರೆ ಗ್ರಾಮದ ಕಾರ್ಯಕ್ರಮಕ್ಕೆ ತೆರಳುವ ಮಾರ್ಗ ಮಧ್ಯೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

    2018ರ ಲೋಕಸಭಾ ಚುನಾವಣೆಯಲ್ಲಿ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದೆ. ಈಗ ನಾನು ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದೇನೆ. ಹೀಗಾಗಿ ಚುನಾವಣಾ ವೇಳೆ ನನ್ನ ಸ್ಪರ್ಧೆ ಬಗ್ಗೆ ಪಕ್ಷದ ನಾಯಕರು ಕೈಗೊಳ್ಳುವ ತೀರ್ಮಾನದ ಮೇಲೆ ನಾನು ನಿರ್ಧಾರ ಕೈಗೊಳ್ಳುತ್ತೇನೆ ಎಂದು ಸ್ಪಷ್ಟಪಡಿಸಿದರು.

    ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮದ್ದೂರು ಕ್ಷೇತ್ರದಿಂದಲೇ ಸ್ಪರ್ಧೆಗಿಳಿಯುವಂತೆ ಬಿಜೆಪಿ ನಾಯಕರು ಆಹ್ವಾನ ನೀಡಿದ್ದರು. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯ ರಾಜಕಾರಣಕ್ಕೆ ಬರುವ ಮನಸ್ಸು ಇಲ್ಲ ಎಂದು ಇಂಗಿತ ವ್ಯಕ್ತಪಡಿಸಿದ್ದೆ ಎಂದರು.

    ಮದ್ದೂರು ನನ್ನ ಪತಿ ದಿ.ಅಂಬರೀಶ್ ಅವರ ಕರ್ಮಭೂಮಿಯಾಗಿದೆ. ಹೀಗಾಗಿ ನಾನು ಅಥವಾ ಪುತ್ರ ಅಭಿಷೇಕ ಅಂಬರೀಶ್ ಮದ್ದೂರು ಕ್ಷೇತ್ರದಿಂದ ಸ್ಪರ್ಧಿಸುವಂತೆ ಅಂಬಿ ಅಭಿಮಾನಿಗಳ ಅಪೇಕ್ಷೆಯಾಗಿದೆ. ನಮ್ಮಿಬ್ಬರಲ್ಲಿ ಒಬ್ಬರು ಸ್ಪರ್ಧೆಗಿಳಿದರೆ ಅದು ಈ ಕ್ಷೇತ್ರದಿಂದಲೇ ಮಾತ್ರ ಎಂದರು.

    ಅಭಿಷೇಕ್ ಅಂಬರೀಶ್ ರಾಜಕೀಯ ಪ್ರವೇಶ ಕುರಿತು ನಿರ್ಧಾರ ಕೈಗೊಳ್ಳುವಲ್ಲಿ ಸರ್ವ ಸ್ವತಂತ್ರನಾಗಿದ್ದಾನೆ. ಸೂಕ್ತ ಸಮಯದಲ್ಲಿ ಆತ ತಂದೆ ಅಂಬರೀಷ್ ಅವರ ಹಿರಿಯ ಬೆಂಬಲಿಗರು, ಮುಖಂಡರು ಹಾಗೂ ಅಭಿಮಾನಿಗಳೊಂದಿಗೆ ಚರ್ಚೆ ನಡೆಸಿದ ನಂತರವೇ ಆತನ ರಾಜಕೀಯ ಪ್ರವೇಶ ನಿರ್ಧಾರವಾಗಲಿದೆ ಎಂದರು.

    ಮುಖ್ಯಮಂತ್ರಿ ಕುರ್ಚಿಗಾಗಿ ನಡೆಯುತ್ತಿರುವ ಕಿತ್ತಾಟ ಕಾಂಗ್ರೆಸ್ ಪಕ್ಷದ ವಿಚಾರ. ಇದಕ್ಕೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ರಾಜಕಾರಣ ಅಂದ ಮೇಲೆ ಯಾವುದೇ ಪಕ್ಷದಲ್ಲಿ ಅಧಿಕಾರಕ್ಕಾಗಿ ಗೊಂದಲ ನಡೆಯುವುದು ಸರ್ವೆ ಸಾಮಾನ್ಯವಾಗಿದೆ. ಆದರೆ, ಕಾಂಗ್ರೆಸ್‌ನಲ್ಲಿ ಕುರ್ಚಿ ಕಾಳಗ ಅತಿರೇಕಕ್ಕೆ ಹೋಗಿದೆ. ಈ ಬಗ್ಗೆ ಮುಂದೆ ಏನಾಗುತ್ತದೆ ಕಾದು ನೋಡೋಣ ಎಂದು ಸುಮಲತಾ ತಿಳಿಸಿದರು.

    ಪುತ್ರ ಅಭಿಷೇಕ್ ಅಂಬರೀಶ್ ಮಾತನಾಡಿ, ನನ್ನ ರಾಜಕೀಯ ಪ್ರವೇಶ ಮತ್ತು ಚುನಾವಣೆ ಸ್ಪರ್ಧೆ ಬಗ್ಗೆ ಯಾವುದೇ ವೈಯಕ್ತಿಕ ನಿರ್ಧಾರ ಕೈಗೊಳ್ಳುವುದಿಲ್ಲ. ನನ್ನ ತಾಯಿ ಸುಮಲತಾ ಅಂಬರೀಶ್ ಮತ್ತು ಕುಟುಂಬ ಹಾಗೂ ತಂದೆ ಆಪ್ತರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು. ಈ ವೇಳೆ ಮುಖಂಡರಾದ ಹನಕೆರೆ ಶಶಿಕುಮಾರ್, ಕೋಣಸಾಲೆ ಜಯರಾಮ, ಹಾಗಲಹಳ್ಳಿ ಬಸವರಾಜು, ಆರ್.ಎನ್.ಗಿರೀಶ್, ನಾಗರಾಜು, ಬೊಮ್ಮನದೊಡ್ಡಿ ರವೀಂದ್ರ, ಶಿವಲಿಂಗಯ್ಯ ಮತ್ತಿತರರು ಇದ್ದರು. 

   

Recent Articles

spot_img

Related Stories

Share via
Copy link