ಕೊಪ್ಪಳ
ಭದ್ರತಾ ದೃಷ್ಟಿಯಿಂದ ತುಂಗಭದ್ರಾ ಜಲಾಶಯದ ಮೇಲೆ ಯಾವುದೇ ತರಹದ ಚಿತ್ರೀಕರಣ ನಿಷೇಧಿಸಲಾಗಿದೆ. ಆದರೂ ಕೂಡ ತುಂಗಭದ್ರಾ ಜಲಾಶಯದ ಮೇಲಿನ ಪ್ರೀ ವೆಡ್ಡಿಂಗ್ ಫೋಟೋ ವೈರಲ್ ಆಗಿದೆ. KA-01 MY 2174 ಬೆಂಗಳೂರು ಪಾಸಿಂಗ್ ಕಾರನ್ನು ಜಲಾಶಯ ಮೇಲ್ಭಾಗದಲ್ಲಿ ಕಾರು ತೆಗೆದುಕೊಂಡು ಹೋಗಿ, ಅಲ್ಲಿ ಕಾರಿನ ಮುಂದೆ ಮತ್ತು ಮೇಲೆ ಜೋಡಿಗಳು ಫೋಟೋ ತೆಗೆಸಿಕೊಂಡಿದ್ದಾರೆ.
ನಿಷೇಧ ಇದ್ದರೂ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಹೇಗೆ ನಡೆಯಿತು? ಪ್ರೀ ವೆಡ್ಡಿಂಗ್ ಫೋಟೋ ಶೂಟ್ಗೆ ಅಧಿಕಾರಿಗಳು ಅನುಮತಿ ನೀಡಿದ್ರಾ? ಎಂಬ ಪ್ರಶ್ನೆಗಳು ಉದ್ಭವಾಗಿವೆ. ಯಾವಾಗ ಫೋಟೋ ಶೂಟ್ ಆಗಿದೆ, ಪರವಾನಿಗೆ ನೀಡಿದವರು ಯಾರು ಎಂಬುವುದರ ಬಗ್ಗೆ ತನಿಖೆ ನಡೆಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕಳೆದ ತಿಂಗಳು ಆಗಸ್ಟ್ 10 ರಂದು ತುಂಗಭದ್ರಾ ಜಲಾಶಯದ 19ನೇ ಕ್ರಸ್ಟಗೇಟ್ ಕೊಚ್ಚಿಕೊಂಡು ಹೋಗಿತ್ತು. ಇದು ದೇಶದಲ್ಲಿ ಸಾಕಷ್ಟು ಸುದ್ದಿಯಾಗಿತ್ತು. 19ನೇ ಗೇಟ್ ವೊಂದರಿಂದಲೇ ಬರೋಬ್ಬರಿ 35 ಸಾವಿರ ಕ್ಯೂಸೆಕ್ ನೀರು ಹೊರ ಹೋಗಿತ್ತು. ಜಲಾಶಯದಿಂದ ಒಂದೇ ವಾರದಲ್ಲಿ 45 ಟಿಎಂಸಿಗೂ ಹೆಚ್ಚು ನೀರು ವ್ಯರ್ಥವಾಗಿ ಹರಿದು ಹೋಗಿತ್ತು.
ನಿರಂತರವಾಗಿ ಒಂದು ವಾರ ಕಾಲ ಶ್ರಮವಹಿಸಿದ್ದ ಸಿಬ್ಬಂದಿ, ಸ್ಟಾಪ್ ಲಾಗ್ ಗೇಟ್ನ ಐದು ಎಲಿಮೆಂಟ್ಗಳನ್ನು ಅಳವಡಿಸಿ, ಹರಿಯುವ ನೀರನ್ನು ತಡೆಯುವಲ್ಲಿ ಸಫಲರಾಗಿದ್ದರು. ಆಗಸ್ಟ್ 17 ರಂದು ಐದು ಎಲಿಮೆಂಟ್ಗಳ ಪ್ರಕ್ರಿಯೆಯನ್ನು ಮುಗಿಸಿದ್ದರು.ಎಲಿಮೆಂಟ್ ಅಳವಡಿಕೆ ಪೂರ್ಣಗೊಂಡರು ಕೂಡಾ ಗೇಟ್ನಿಂದ ಅಲ್ಪಪ್ರಮಾಣದ ನೀರು ಹೊರ ಹೋಗುತ್ತಿತ್ತು. ಹೀಗಾಗಿ ಮತ್ತೆ ಕೆಲಸ ಆರಂಭಿಸಿದ ಸಿಬ್ಬಂದಿ, ಹನಿ ನೀರು ಹೋಗದಂತೆ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.