ನುಗ್ಗೆಕಾಯಿ ಕೆ.ಜಿ ಗೆ 500 ರು…….!

ತುಮಕೂರು :

    ಪೋಷಕಾಂಶಗಳ ಆಗರವನ್ನೇ ಹೊತ್ತಿರುವ ನುಗ್ಗೆಕಾಯಿಗೆ ಇದೀಗ ಚಿನ್ನದ ಬೆಲೆ ಬಂದಿರುವುದು ರೈತರ ಹಾಗೂ ಗ್ರಾಹಕರ ಹುಬ್ಬೇರಿಸುವಂತೆ ಮಾಡಿದೆ. ವಾತಾವರಣದ ವೈಪರೀತ್ಯದಿಂದಾಗಿ ನುಗ್ಗೆಕಾಯಿ ಬೆಳೆ ಕುಂಠಿತವಾಗಿರುವುದೇ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.

    ನುಗ್ಗೆಕಾಯಿ ತಿನ್ನಬೇಕೆಂಬ ಆಸೆಯಾರಿಗಿರುವುದಿಲ್ಲ ಹೇಳಿ? ಚಿಕ್ಕ ಮಗುವಿನಿಂದ ಹಿಡಿದು ವೃದ್ಧರ ವರೆಗೂ ನುಗ್ಗೆಕಾಯಿ ಎಂದರೆ ಪಂಚಪ್ರಾಣ, ಆದರೆ ಅದರ ಬೆಲೆ ಕೆ.ಜಿಗೆ ಬರೋಬ್ಬರಿ 500 ರು.ಗೆ ಜಿಗಿತ ಕಂಡಿದೆ. ಇದರ ಪರಿಣಾಮವಾಗಿ ನುಗ್ಗೆಕಾಯಿ ತಿನ್ನಬೇಕು ಎಂಬ ಗ್ರಾಹಕರ ಆಸೆಗೆ ತಣ್ಣೀರು ಎರಚಿದಂತಾಗಿದೆ.ಹೀಗಾಗಿ ಗ್ರಾಹಕರು ಅದರ ಸಹವಾಸವೇ ಬೇಡ ಎಂದು ದೂರ ಹೋಗುತ್ತಿದ್ದಾರೆ. ಇಷ್ಟೊಂದು ಬೆಲೆ ಏರಿಕೆಯಾಗಿರುವುದು ಖರೀದಿದಾರರಿಗೆ ಸಾಕಷ್ಟು ಹೊರೆಯಾಗಿಸಿದೆ. ಮಾರುಕಟ್ಟೆಯಲ್ಲಿ ಭಾರೀ ಅಭಾವ: ನುಗ್ಗೆಕಾಯಿ ಮಾರುಕಟ್ಟೆಯಲ್ಲಿ ತೀವ್ರ ಅಭಾವ ಕಾಡುತ್ತಿದೆ. 

    ಶೇ.೬೦ ಪ್ರಮಾಣದಲ್ಲಿ ಪೂರೈಕೆ ಕುಸಿದಿದೆ. ಒಂದು ದಿನಕ್ಕೆ 100 ಟನ್ ಬದಲಿಗೆ ೩೦-೪೦ ಟನ್ ಮಾತ್ರ ಪೂರೈಕೆಯಾಗುತ್ತಿದೆ, ಹೀಗಾಗಿ ಬೇಡಿಕೆ ಹೆಚ್ಚಿದೆ. ಸಗಟು ಕೆ.ಜಿ ಬೆಲೆ ನುಗ್ಗೆಕಾಯಿಗೆ ೪೭೦ ರು., ಚಿಲ್ಲರೆ ಬೆಲೆ ೫೦೦ ರು. ಆಗಿದೆ. ಮುಂದಿನ ಮಾರ್ಚ್- ಏಪ್ರಿಲ್‌ನಲ್ಲಿ ತಮಿಳುನಾಡಿನ ಹೊಸ ನುಗ್ಗೆಕಾಯಿ ಬೆಳೆ ಎಷ್ಟು ಪ್ರಮಾಣದಲ್ಲಿ ಬರುತ್ತದೆ, ಅದರ ಮೇಲೆ ಬೆಲೆ ಇಳಿಕೆ ಅವಲಂಬನೆಯಾಗಿದೆ, ಅಲ್ಲಿಯ ವರೆಗೂ ಯಾವ ಸ್ಪಷ್ಟತೆಯೇ ಇಲ್ಲವೆಂದು ಬೆಂಗಳೂರು ಎಪಿಎಂಸಿ ನುಗ್ಗೆಕಾಯಿ ವ್ಯಾಪಾರಸ್ಥರು ಗ್ರಾಹಕರಿಗೆ ಹೇಳುತ್ತಿದ್ದಾರೆ.

    ಹವಾಮಾನ ವೈಪರೀತ್ಯ ಅಂದರೆ ಚಳಿ, ಮಳೆ, ಗಾಳಿ, ಚಂಡಮಾರುತ ಹೀಗೆ ನಾನಾ ಕಾರಣಗಳಿಂದ ತೋಟಗಾರಿಕೆ ಬೆಳೆಗಳಿಗೆ ಇಳುವರಿ ಕುಂಠಿತ ಆಗುತ್ತಿರುವುದರಿಂದ ರೈತರಿಗೆ ಸಕಾಲಕ್ಕೆ ಬೆಳೆ ಬಾರದೆ ನಿವ್ವಳ ಲಾಭ ಇಲ್ಲದಂತಾಗಿದೆ. ನುಗ್ಗೆಕಾಯಿ ಬೆಲೆ ಗಗನಕ್ಕೇರಿದ್ದರೂ ಆದರೆ ಬೆಳೆಯೇ ಕೈಕೊಟ್ಟಿದೆ. ತೋಟಗಾರಿಕೆ ಬೆಳೆಗಳಲ್ಲಿ ಒಂದಾದ ನುಗ್ಗೆ ಕಾಯಿ, ಸಾಕಷ್ಟು ಪೋಷಕಾಂಶ ಗಳನ್ನು ಹೊಂದಿರುವ ತರಕಾರಿಗಳಲ್ಲಿ ಒಂದಾಗಿದ್ದು, ಶಾಖಾಹಾರಿಗಳ ನೆಚ್ಚಿನ ತರಕಾರಿಯಾಗಿದೆ.

    ವಾತಾವರಣ ಅನುಕೂಲವಾಗಿದ್ದರೆ ಎಲ್ಲ ಕಾಲದಲ್ಲೂ ನುಗ್ಗೆಕಾಯಿ ಲಭ್ಯವಿರುತ್ತದೆ, ಆದರೆ ಪ್ರಸಕ್ತ ವರ್ಷದಲ್ಲಿ ಅತಿಯಾದ ಚಳಿ, ಮಳೆಯ ಪರಿಣಾಮದಿಂದ ನುಗ್ಗೆ ಹೂವು ಸರಿಯಾಗಿ ಕಾಯಿ ಬಿಟ್ಟಿಲ್ಲ. ಇದರಿಂದಲೂ ನುಗ್ಗೆ ಬೆಳೆ ಕುಂಠಿತವಾಗಿದೆ.ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆ ಸೇರಿದಂತೆ ತಾಲೂಕಿನಲ್ಲೂ ನುಗ್ಗೆಕಾಯಿ ಬೆಳೆ ಇಲ್ಲವಾಗಿದ್ದು, ಮಾರುಕಟ್ಟೆಯವರು ಮಹಾರಾಷ್ಟ್ರದಿಂದ ತರಿಸುತ್ತಿದ್ದಾರೆ. ಅಲ್ಲಿಯೂ ಬೆರಳೆಣಿಕೆಯಷ್ಟು ಕಡೆ ಗಳಲ್ಲಿ ನುಗ್ಗೆ ಬೆಳೆಯಿದ್ದರೂ, -ಸಲು ಇಲ್ಲವಾದ ಕಾರಣ ತೀವ್ರವಾಗಿ ಬೆಲೆ ಏರಿಕೆ ಕಾರಣವಾಗಿದೆ. ಅಲ್ಲೊಂದು ಇಲ್ಲೊಂದು ಕಡೆಗಳಲ್ಲಿ ಸಿಗುವ ನುಗ್ಗೆಕಾಯಿ ರೈತರಿಗೆ ಬಂಪರ್ ಲಾಟರಿ ಹೊಡೆ ದಂತಾಗಿದೆ.

    ಇನ್ನು ಶಾಖಾಹಾರಿಗಳ ಮದುವೆ ಮತ್ತು ಶುಭ ಸಮಾರಂಭಗಳಿಗೆ ನುಗ್ಗೆಕಾಯಿ ಸಾಂಬಾರು ಅತ್ಯಗತ್ಯ ವಾಗಿದ್ದು, ದುಬಾರಿ ಬೆಲೆ ತೆತ್ತಾದರೂ ನುಗ್ಗೆಕಾಯಿ ಖರೀದಿಸುವಂತಾಗಿದೆ.ಕೋಲಾರ, ಚಿಕ್ಕಬಳ್ಳಾಪುರ, ತಮಿಳುನಾಡಿನ ಹೊಸೂರು ಹೋಬಳಿ, ಡಿ.ಪಾಳ್ಯ ಹೋಬಳಿ ಸೇರಿ ದಂತೆ ನಾನಾ ಗ್ರಾಮಗಳಲ್ಲಿ ರೈತರು ತಮ್ಮ ಹೊಲದ ಬದುಗಳಲ್ಲಿ ನುಗ್ಗೆಕಾಯಿ ಬೆಳೆಯುತ್ತಾರೆ. ಹಾಗೆಯೇ ಹೊಸೂರಿನ ಹಂಪಸಂದ್ರ, ಕುದುರೆಬ್ಯಾಲ್ಯ ಕಡೆಗಳಲ್ಲಿ ನುಗ್ಗೆಕಾಯಿಯ ಹೆಚ್ಚಿನ ಬೆಳೆ ಯನ್ನು ಕಾಣಬಹುದು. ರೈತರು ತಮ್ಮ ಹೊಲಗಳ ಬದುಗಳಲ್ಲಿ ನುಗ್ಗೆಕಾಯಿ ಬೆಳೆಯುವುದನ್ನು ರೂಢಿಸಿಕೊಂಡಲ್ಲಿ ಲಾಭದಾಯಕ ಬೆಳೆಯಾಗಿದೆ. ಈ ಬಗ್ಗೆ ತೋಟಗಾರಿಕೆ ಇಲಾಖೆಯವರು ರೈತರಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕಿದೆ ಎನ್ನುತ್ತಾರೆ ಕೃಷಿ ತಜ್ಞರು.

Recent Articles

spot_img

Related Stories

Share via
Copy link