ಸೋಶಿಯಲ್‌ ಮೀಡಿಯಾದಲ್ಲಿ ಧೂಳೆಬ್ಬಿಸಿದ ನಿಖಿಲ್‌ ಕಾಮತ್‌- ಎಲಾನ್‌ ಮಸ್ಕ್‌ ಪಾಡ್‌ಕಾಸ್ಟ್‌ ಟೀಸರ್‌

ಬೆಂಗಳೂರು:

     ಜೆರೋಧಾ ಸಂಸ್ಥಾಪಕ   ನಿಖಿಲ್ ಕಾಮತ್   ಮತ್ತು ಟೆಸ್ಲಾ ಸಿಇಒ   ಎಲಾನ್ ಮಸ್ಕ್   ಅವರು ಕಾಣಿಸಿಕೊಂಡಿರುವ ಪಾಡ್ ಕಾಸ್ಟ್   ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್   ಆಗಿದೆ. ಇದರಲ್ಲಿ ನಿಖಿಲ್ ಕಾಮತ್ ಅವರು ಎಲಾನ್ ಮಸ್ಕ್ ಪಾಡ್‌ಕ್ಯಾಸ್ಟ್ ಅನ್ನು ಟೀಕಿಸುವುದನ್ನು ಕಾಣಬಹುದು. ಕಚೇರಿಯಲ್ಲಿ ಕುಳಿತು ಅವರಿಬ್ಬರೂ ಮಾತುಕತೆ ನಡೆಸುತ್ತಿರುವ ಕಪ್ಪು ಬಿಳುಪಿನ ಈ ವಿಡಿಯೊ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಮಂದಿಯ ಗಮನ ಸೆಳೆದಿದೆ.

     ಸಾಮಾಜಿಕ ಮಾಧ್ಯಮ ಖಾತೆಯಾದ ಎಕ್ಸ್ ನಲ್ಲಿ ಜೆರೋಧಾ ಸಂಸ್ಥಾಪಕ ನಿಖಿಲ್ ಕಾಮತ್ ಅವರು ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಸಿಇಒ ಎಲಾನ್ ಮಸ್ಕ್ ಅವರೊಂದಿಗಿನ ತಮ್ಮ ಮುಂಬರುವ ಪಾಡ್‌ಕಾಸ್ಟ್ ಸಂಚಿಕೆಯ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ. ಇವರಿಬ್ಬರು ಆಫೀಸ್ ಕಚೇರಿಯಲ್ಲಿ ಕುಳಿತು ಸಂವಾದ ನಡೆಸುತ್ತಿರುವುದನ್ನು ಕಾಣಬಹುದು. 

    ಸುಮಾರು 39 ಸೆಕೆಂಡುಗಳ ಈ ವಿಡಿಯೊದಲ್ಲಿ ಅವರಿಬ್ಬರು ಕಾಫಿ ಹೀರುತ್ತಾ, ನಗುತ್ತಾ ಸಂವಾದ ನಡೆಸುವುದನ್ನು ತೋರಿಸಲಾಗಿದೆ. ಈ ವಿಡಿಯೊವನ್ನು ನಿಖಿಲ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಪಡೆದಿದೆ. ಈ ವಿಡಿಯೊಗೆ “ಕ್ಯಾಪ್ಶನ್ ದಿಸ್” ಎಂಬ ತಮಾಷೆಯ ಶೀರ್ಷಿಕೆಯನ್ನು ನೀಡಲಾಗಿದೆ.

    ನಿಖಿಲ್ ಅವರು ಈ ಪೋಸ್ಟ್ ಅನ್ನು ಎಲಾನ್ ಮಸ್ಕ್ ಅವರಿಗೆ ಟ್ಯಾಗ್‌ ಮಾಡಿದ್ದೂ, ಇದರಲ್ಲಿ ಕಾಮತ್ ಅವರ ಮುಂಬರುವ “WTF ಈಸ್?” ಪಾಡ್‌ಕಾಸ್ಟ್‌ನಲ್ಲಿ ಕಾಣಿಸಿಕೊಳ್ಳುವಿಕೆಯ ಬಗ್ಗೆ ಸುಳಿವು ನೀಡಿದೆ. ಇದರ ಪೂರ್ಣ ಸಂಚಿಕೆ ಬಿಡುಗಡೆಗಾಗಿ ಅವರಿಬ್ಬರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. 

    “WTF” ಪಾಡ್‌ ಕಾಸ್ಟ್ ನಲ್ಲಿ ಈಗಾಗಲೇ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್, ಬಯೋಟೆಕ್ ಪ್ರವರ್ತಕ ಕಿರಣ್ ಮಜುಂದಾರ್-ಶಾ, ಬಾಲಿವುಡ್ ತಾರೆ ರಣಬೀರ್ ಕಪೂರ್, ಇನ್ಫೋಸಿಸ್ ಸಹ-ಸಂಸ್ಥಾಪಕ ನಂದನ್ ನಿಲೇಕಣಿ, ಕೈಗಾರಿಕೋದ್ಯಮಿ ಕುಮಾರ್ ಬಿರ್ಲಾ, ಪರ್ಪ್ಲೆಕ್ಸಿಟಿ AI ಯ ಅರವಿಂದ್ ಶ್ರೀನಿವಾಸ್ ಮತ್ತು ಸಾಹಸೋದ್ಯಮ ಬಂಡವಾಳಶಾಹಿ ವಿನೋದ್ ಖೋಸ್ಲಾ ಸೇರಿದಂತೆ ಅನೇಕ ಗಣ್ಯರನ್ನು ಪರಿಚಯಿಸಲಾಗಿತ್ತು. ಇದರಲ್ಲಿ ಅತೀ ಹೆಚ್ಚಿನ ಆಕರ್ಷಣೆ ಪ್ರಧಾನಿ ನರೇಂದ್ರ ಮೋದಿಯವರೊಂದಿಗಿನ ಸಂದರ್ಶನವಾಗಿತ್ತು. ಅದು ಈ ವರ್ಷದ ಆರಂಭದಲ್ಲಿ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿತ್ತು. 

     ಇದೀಗ ನಿಖಿಲ್ ಮತ್ತು ಮಸ್ಕ್ ಅವರ ಸಂದರ್ಶನದ ಟೀಸರ್ ನೋಡಿ ಅನೇಕರು ಸಂಭ್ರಮ ಪಟ್ಟಿದ್ದಾರೆ. ಕೆಲವರು ಇದಕ್ಕಾಗಿ ಕುತೂಹಲದಿಂದ ಕಾಯುತ್ತಿರುವುದಾಗಿ ಹೇಳಿದರೆ, ಇನ್ನು ಕೆಲವರು ಇದು ಕೃತಕ ಬುದ್ಧಿಮತ್ತೆಯ ಕೆಲಸವಾಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಇದು ಪಾಡ್ ಕಾಸ್ಟ್ ನ ಮುಂದಿನ ಸರಣಿ ಹೌದೋ ಅಲ್ಲವೋ ಎನ್ನುವ ಅನುಮಾನಗಳು ಕಾಡಲು ಪ್ರಾರಂಭಿಸಿವೆ.

Recent Articles

spot_img

Related Stories

Share via
Copy link