ಬೆಂಗಳೂರು :
ಬಿಗ್ ಬಾಸ್ ಕನ್ನಡ ಸೀಸನ್ 11 ಮುಗಿದ ಬಳಿಕ ಬಹುತೇಕ ಹೆಚ್ಚಿನ ಸ್ಪರ್ಧಿಗಳು ಸದಾ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಹೆಚ್ಚಿನವರು ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ಆದರೆ ಅನುಷಾ ರೈ ಮಾತ್ರ ಹೆಚ್ಚೇನು ಕಾಣಿಸಿಕೊಂಡಿಲ್ಲ. ಒಮ್ಮೆ ಮಹಾಕುಂಭ ಮೇಳಕ್ಕೆ ತೆರಳಿ ಸುದ್ದಿಯಾಗಿದ್ದರು. ಬಳಿಕ ನಟಿ, ರಾಮ ಜನ್ಮ ಭೂಮಿ ಅಯೋಧ್ಯೆಗೆ ತೆರಳಿ, ರಾಮಲಲ್ಲಾ ದರ್ಶನ ಪಡೆದು ಬಂದಿದ್ದರು. ಮೊನ್ನೆ ಗ್ರ್ಯಾಂಡ್ ಆಗಿ ಬರ್ತ್ ಡೇ ಆಚರಣೆ ಮಾಡಿ ಇನ್ಸ್ಟಾದಲ್ಲಿ ಫೋಟೋ ಹಂಚಿಕೊಂಡಿದ್ದರು. ಇದೀಗ ಬಿಗ್ ಬಾಸ್ 11ರ ಸ್ಪರ್ಧಿ ರಂಜಿತ್ ಅವರ ಮದುವೆ ಸಮಾರಂಭದಲ್ಲಿ ಇವರು ಸಖತ್ ಹೈಲೇಟ್ ಆಗಿ ಕಾಣಿಸಿಕೊಂಡಿದ್ದಾರೆ.
ಮೊನ್ನೆಯಷ್ಟೆ ಗುರು-ಹಿರಿಯರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿಯೇ ರಂಜಿತ್- ಮಾನಸ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ದೊಡ್ಡಬಳ್ಳಾಪುರದ ಮೇನ್ ರೋಡ್, ಹೊನ್ನೇನಹಳ್ಳಿಯಲ್ಲಿ ರಂಜಿತ್ ಮತ್ತು ಮಾನಸ ಗೌಡ ಅವರ ಮದುವೆ ನಡೆದಿದೆ. ನವಜೋಡಿಗೆ ಶುಭ ಹಾರೈಸಲು ಬಿಗ್ ಬಾಸ್ ಸ್ಪರ್ಧಿಗಳಾದ ತುಕಾಲಿ ಸಂತೋಷ್ ಮತ್ತು ಮಾನಸ, ಅನುಷಾ ರೈ, ಗೋಲ್ಡ್ ಸುರೇಶ್, ಲಾಯರ್ ಜಗದೀಶ್, ಯಮುನಾ, ರಜತ್, ನಟ ರಂಗಾಯಣ ರಘು ಹಾಗೂ ಶೋಭರಾಜ್ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಇಲ್ಲಿ ಮಾಧ್ಯಮಮಿತ್ರರು ಅನುಷಾ ರೈ ಅವರಿಗೆ ಒಂದು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ನುಷಾ ನೀಡಿದ ಉತ್ತರ ಇದೀಗ ಫುಲ್ ವೈರಲ್ ಆಗುತ್ತಿದೆ. “ನಿಮ್ಮದು ಯಾವಾಗ ಮದುವೆ” ಎಂದು ಅನುಷಾ ರೈ ಬಳಿ ಪ್ರಶ್ನೆ ಕೇಳಲಾಗಿದೆ. ಇದಕ್ಕೆ ಉತ್ತರಿಸಿದ ಅವರು, “ನನ್ನ ಮದುವೆ ನೋಡೋದಕ್ಕೆ ಅಷ್ಟೊಂದು ಆಸೆನಾ ನಿಮಗೆಲ್ಲಾ…? ಮೊದಲು ಹುಡುಗನ್ನು ಹುಡುಕಿ. ನಾನು ಮದುವೆ ಆಗುವ ಹುಡುಗ ನಮ್ ಡಿ ಬಾಸ್ ಥರ ಇದ್ರೆ ಸಾಕು. ಸಿಕ್ತಾರ ಆ ಥರ ಹುಡುಗ. ಕರ್ಕೊಂಡು ಬನ್ನಿ ಆ ಥರ ಹುಡುಗನ್ನ ಆಮೇಲೆ ಮದುವೆ ಆಗ್ತೀನಿ” ಎಂದು ಹೇಳಿದ್ದಾರೆ.
ಕಿರುತೆರೆ ಮತ್ತು ಬೆಳ್ಳಿತೆರೆಗಳಲ್ಲಿ ಗುರುತಿಸಿಕೊಂಡಿರುವ ಅನುಷಾ ರೈ, ಸರಯೂ, ರಾಜಕುಮಾರಿ ಸೇರಿದಂತೆ ಹಲವು ಸೀರಿಯಲ್ಗಳಲ್ಲಿ ಅಭಿನಯಿಸಿದ್ದಾರೆ. 2017ರಲ್ಲಿ ಬಿಡುಗಡೆಯಾದ ಮಹಾನುಭಾವರು ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟರು. ಆ ಬಳಿಕ ಗೋಸಿ ಗ್ಯಾಂಗ್, ಬಿಎಂಡಬ್ಲ್ಯೂ, ದಮಯಂತಿ, ರೈಡರ್, ಖಡಕ್, ಪೆಂಟಗನ್, ಧೈರ್ಯಂ ಸರ್ವತ್ರ ಸಾಧನಂ, ಅಬ್ಬಬ್ಬ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ.
