ಪಾಕಿಸ್ತಾನ ಮತ್ತೆ ಬಾಲ ಬಿಚ್ಚಿದರೆ ಆಪರೇಷನ್‌ ಸಿಂದೂರ್‌ 2.0……

ಶ್ರೀನಗರ

      ಜಮ್ಮು ಮತ್ತು ಕಾಶ್ಮೀರ ಪಹಲ್ಗಾಮ್‌ನಲ್ಲಿ ನಡೆದ ಪ್ರವಾಸಿಗರ ಮೇಲಿನ ಉಗ್ರರ ದಾಳಿಗೆ ಪ್ರತಿಯಾಗಿ ಭಾರತ ನಡೆಸಿದ ಆಪರೇಷನ್‌ ಸಿಂದೂರ್‌  ಕಾರ್ಯಾಚರಣೆಯ ಹೊಡೆತಕ್ಕೆ ಸಿಲುಕಿ ನಲುಗಿದ ಪಾಕಿಸ್ತಾನ ಇನ್ನೂ ಚೇತರಿಸಿಕೊಂಡಿಲ್ಲ. ಅದಾಗಲೇ ಭಾರತೀಯ ಸೇನೆ ಆಪರೇಷನ್‌ ಸಿಂದೂರ್‌ 2.0  ಕಾರ್ಯಾಚರಣೆಯ ಸೂಚನೆ ನೀಡಿದೆ. ಪಾಕಿಸ್ತಾನ ಈಗಾಗಲೇ 72ಕ್ಕಿಂತ ಅಧಿಕ ಉಗ್ರರ ಲಾಂಚ್‌ಪ್ಯಾಡ್‌ಗಳನ್ನು ದಟ್ಟ ಕಾಡಿಗೆ, ಒಳ ಪ್ರದೇಶಗಳಿಗೆ ವರ್ಗಾಯಿಸಿದೆ. ಪಾಕಿಸ್ತಾನ ಸರ್ಕಾರವು ಗಡಿಯಾಚೆಗಿನ ಕಾರ್ಯಾಚರಣೆಯನ್ನು ಪುನರಾರಂಭಿಸಲು ನಿರ್ಧರಿಸಿದರೆ ಭಾರಿ ಪ್ರಮಾಣದಲ್ಲಿ ಮರು ದಾಳಿ ನಡೆಸಲು ಸಿದ್ಧವಾಗಿರುವುದಾಗಿ ಬಿಎಸ್‌ಎಫ್‌ನ  ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

     “ಆಪರೇಷನ್ ಸಿಂದೂರ್ ಸಮಯದಲ್ಲಿ ಬಿಎಸ್ಎಫ್ ಗಡಿಯುದ್ದಕ್ಕೂ ಅನೇಕ ಭಯೋತ್ಪಾದಕ ಲಾಂಚ್‌ಪ್ಯಾಡ್‌ಗಳನ್ನು ನಾಶಪಡಿಸಿದ ನಂತರ, ಪಾಕಿಸ್ತಾನ ಸರ್ಕಾರವು ಅಂತಹ ಎಲ್ಲ ಸೌಲಭ್ಯಗಳನ್ನು ದಟ್ಟ ಕಾಡಿಗೆ, ಒಳ ಪ್ರದೇಶಗಳಿಗೆ ಸ್ಥಳಾಂತರಿಸಿದೆ. ಸುಮಾರು 12 ಲಾಂಚ್‌ಪ್ಯಾಡ್‌ಗಳು ಸಿಯಾಲ್‌ಕೋಟ್ ಮತ್ತು ಜಫರ್ವಾಲ್‌ನ ಒಳ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಅವು ಗಡಿಯಿಂದ ಸಾಕಷ್ಟು ಒಳಗಿವೆʼʼ ಎಂದು ಬಿಎಸ್‌ಎಫ್‌ ಡಿಐಜಿ ವಿಕ್ರಂ ಕನ್ವಾರ್‌ ತಿಳಿಸಿದ್ದಾರೆ. 

    ʼಇದೇ ರೀತಿ ಸುಮಾರು 60ರಷ್ಟು ಲಾಂಚ್‌ಪ್ಯಾಡ್‌ಗಳು ಗಡಿಯಿಂದ ದೂರವಾಗಿ ಸಾಕಷ್ಟು ಒಳ ಪ್ರದೇಶಗಳಲ್ಲಿವೆ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಲಾಗುತ್ತಿದೆ. ಅಗತ್ಯವಿದ್ದರೆ ಆಪರೇಷನ್‌ ಸಿಂದೂರ್‌ 2.0 ಆರಂಭಿಸಲು ಸಿದ್ಧ” ಎಂದು ಎಚ್ಚರಿಸಿದ್ದಾರೆ.

    ಬಿಎಸ್‌ಎಫ್ ಐಜಿ ಶಶಾಂಕ್ ಆನಂದ್ ಮತ್ತು ಡಿಐಜಿ ಕುಲ್ವಂತ್ ರಾಯ್ ಶರ್ಮಾ ಅವರೊಂದಿಗೆ ನಡೆದ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ವಿಕ್ರಂ ಕನ್ವಾರ್‌ ಮಾತನಾಡಿದರು. ಈ ಲಾಂಚ್‌ಪ್ಯಾಡ್‌ ಮತ್ತು ಅವುಗಳಲ್ಲಿರುವ ಭಯೋತ್ಪಾದಕರ ಸಂಖ್ಯೆ ಬದಲಾಗುತ್ತಲೇ ಇದೆ ಎಂದು ವಿಕ್ರಂ ಕನ್ವಾರ್‌ ವಿವರಿಸಿದ್ದಾರೆ. 

    “ಉಗ್ರರು ಅಲ್ಲಿ ಎಲ್ಲ ಸಮಯದಲ್ಲೂ ಇರುವುದಿಲ್ಲ. ಭಯೋತ್ಪಾದಕರನ್ನು ಭಾರತಕ್ಕೆ ಕಳುಹಿಸಬೇಕಾದಾಗ ಈ ಲಾಂಚ್‌ಪ್ಯಾಡ್‌ಗಳು ಸಕ್ರಿಯವಾಗುತ್ತವೆ. 2 ಅಥವಾ 3 ಗುಂಪುಗಳಿಗಿಂತ ಹೆಚ್ಚಿನ ಜನರನ್ನು ಅಲ್ಲಿ ಇರಿಸುವುದಿಲ್ಲ. ಅಂತಾರಾಷ್ಟ್ರೀಯ ಗಡಿಯ ಸಮೀಪವಿರುವ ಪ್ರದೇಶದಲ್ಲಿ ಪ್ರಸ್ತುತ ಯಾವುದೇ ತರಬೇತಿ ಶಿಬಿರಗಳಿಲ್ಲʼʼ ಎಂದು ಸ್ಪಷ್ಟಪಡಿಸಿದ್ದಾರೆ.

    “ಹಿಂದೆ ಜೈಶ್-ಎ-ಮೊಹಮ್ಮದ್‌ ಮತ್ತು ಲಷ್ಕರ್-ಎ-ತೈಬಾ ಉಗ್ರ ಸಂಘಟನೆಗಳು ಪ್ರತ್ಯೇಕವಾಗಿ ಚಟುವಟಿಕೆ ನಡೆಸುತ್ತಿದ್ದವು. ಆಪರೇಷನ್ ಸಿಂದೂರ್ ನಂತರ ಇವರು ಮಿಶ್ರ ಗುಂಪನ್ನು ರಚಿಸಿದ್ದಾರೆ. ಈ ಮಿಶ್ರ ಗುಂಪಿನಲ್ಲಿ ತರಬೇತಿಯನ್ನೂ ನೀಡಲಾಗುತ್ತಿದೆ” ಎಂದು ಹೇಳಿದ್ದಾರೆ.

    ʼʼಆಪರೇಷನ್ ಸಿಂದೂರ್ ಅನ್ನು ಪುನರಾರಂಭಿಸಲು ನಿರ್ಧರಿಸಿದರೆ ಸರ್ಕಾರದ ಆದೇಶಗಳನ್ನು ಪಾಲಿಸಲು ಬಿಎಸ್‌ಎಫ್ ಸಿದ್ಧʼʼ ಎಂದು ಐಜಿ ಆನಂದ್ ತಿಳಿಸಿದ್ದಾರೆ. “1965, 1971, 1999ರ ಯುದ್ಧ ಮತ್ತು ಆಪರೇಷನ್ ಸಿಂದೂರ್ ಕಾರ್ಯಾಚರಣೆಯಲ್ಲಿ ಬಿಎಸ್‌ಎಫ್ ಪಾಲ್ಗೊಂಡಿದೆ. ಸಾಂಪ್ರದಾಯಿಕ ಅಥವಾ ಹೈಬ್ರಿಡ್ ಯುದ್ಧವೇ ಆಗಿರಬಹುದು, ಎಲ್ಲದಕ್ಕೂ ಸಿದ್ಧʼʼ ಎಂದು ಘೋಷಿಸಿದ್ದಾರೆ. 

   “ಅವಕಾಶ ಸಿಕ್ಕರೆ ಮೇಯಲ್ಲಿ ಮಾಡಿದ್ದಕ್ಕಿಂತ ಹೆಚ್ಚಿನ ಹಾನಿಯನ್ನು ಉಂಟು ಮಾಡುವ ಸಾಮರ್ಥ್ಯ ಹೊಂದಿದ್ದೇವೆ. ಸರ್ಕಾರ ಯಾವುದೇ ನೀತಿಯನ್ನು ನಿರ್ಧರಿಸಿದರೂ ಬಿಎಸ್‌ಎಫ್ ಅದರಲ್ಲಿ ತನ್ನ ಪಾತ್ರವನ್ನು ವಹಿಸುತ್ತದೆ” ಎಂದು ಅವರು ಹೇಳಿದ್ದಾರೆ.

Recent Articles

spot_img

Related Stories

Share via
Copy link