ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿ ಕಡ್ಡಾಯವಾಗಿ ನಿಯಮ ಪಾಲನೆಗೆ ಕ್ರಮ.

 ವಿಜಯನಗರ 

    ಜಿಲ್ಲೆಯಲ್ಲಿ 5 ಸರ್ಕಾರಿ ಮತ್ತು 75 ಖಾಸಗಿ ಸ್ಕ್ಯಾನಿಂಗ್ ಸೆಂಟರ್‌ಗಳು ಕಾರ್ಯನಿರ್ವಹಿಸುತ್ತಿವೆ. ಪಿಸಿ&ಪಿಎನ್‌ಡಿಟಿ 1994 ಕಾಯ್ದೆಯಡಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ನಿರ್ಲಕ್ಷಿಸಿದರೇ ಅಂತವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಸೆಂಟರ್ ಮುಚ್ಚಲು ಕ್ರಮ ವಹಿಸಲಾಗುವುದು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ ಹೇಳಿದರು.

   ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮಕ್ಕಳ ರಕ್ಷಣಾ ನಿರ್ದೇಶನಾಲಯ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಿವಿಧ ಇಲಾಖೆಗಳು, ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಏರ್ಪಡಿಸಿದ್ದ ಆರ್‌ಟಿಇ ಅನುಷ್ಠಾನದ ಕುರಿತು ಶಿಕ್ಷಣ ಇಲಾಖೆಯ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಶುಕ್ರವಾರ ಮಾತನಾಡಿದರು. ಮಕ್ಕಳ ಹಿತ ಮತ್ತು ಹಕ್ಕುಗಳ ರಕ್ಷಣೆಗಾಗಿ ವಿವಿಧ ಇಲಾಖೆಗಳು ಸಮನ್ವಯತೆಯಿಂದ ಕರ್ತವ್ಯ ನಿರ್ವಹಿಸಬೇಕಿದೆ. ರಾಜ್ಯದಲ್ಲಿ ಮಕ್ಕಳ ಸಹಾಯವಾಣಿಗೆ ವಿವಿಧ ಜಿಲ್ಲೆಗಳಿಂದ ದೂರುಗಳು ಹೆಚ್ಚಾಗಿ ಬರುತ್ತಿವೆ. ವಿಜಯನಗರ ಜಿಲ್ಲೆಯಿಂದ ಹೆಚ್ಚಾಗಿ ಆರೋಗ್ಯ ಮತ್ತು ಶಿಕ್ಷಣ ಸಂಬಂಧಿತ ದೂರುಗಳು ಹೆಚ್ಚಾಗಿವೆ. ರಾಜ್ಯದಲ್ಲೇ ಅಪೌಷ್ಠಿಕತೆಯಿಂದ ಬಳಲುತ್ತಿರುವವರ ಸಂಖ್ಯೆ ವಿಜಯನಗರ ಜಿಲ್ಲೆಯಲ್ಲಿ ಹೆಚ್ಚಿದೆ ಎಂಬ ಮಾಹಿತಿ ಇದೆ.

ಆರೋಗ್ಯ ಇಲಾಖೆ :

     ಜಿಲ್ಲೆಯಲ್ಲಿ 580 ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. ನಗರದ ನೂರು ಹಾಸಿಗೆ ಆಸ್ಪತ್ರೆಯ ಅಪೌಷ್ಠಿಕ ಮಕ್ಕಳ ಪುನಶ್ಚೇತನ ಘಟಕದಲ್ಲಿ ಕಳೆದ ಆರು ತಿಂಗಳ ದಾಖಲೆ ವೀಕ್ಷಿಸಿದರೇ ಒಬ್ಬರು ಸಹಿತ ನೊಂದಾಣಿ ಆಗದಿರುವುದು ಆಶ್ಚರ್ಯ ಮೂಡಿಸಿದೆ. ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ತಂಡದ ವೈದ್ಯರು, ಆರ್‌ಸಿಹೆಚ್ ಅಧಿಕಾರಿಗಳಾಗಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಸೇರಿ ಯಾವುದೇ ಒಂದು ಮಗುವನ್ನು ದಾಖಲಿಸಿರದಿರುವುದು ಕಂಡು ಬಂದಿದೆ.

     ಶೀಘ್ರವೇ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ತಂಡ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಸಭೆ ನಡೆಸಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಮೀಕ್ಷೆ ನಡೆಸಿ ಪುನಶ್ಚೇತನ ಘಟಕಕ್ಕೆ ದಾಖಲಿಸಲು ಕ್ರಮ ವಹಿಸಬೇಕು. ಇಂದು ಆರೋಗ್ಯ ಅಧಿಕಾರಿಗಳು ಸಮಕ್ಷಮದಲ್ಲಿ ನಗರದ ಸಹಾಯ ಮತ್ತು ರಾಘವ್ ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ಧೀಡಿರ್ ಭೇಟಿ ನೀಡಿ ಪರಿಶೀಲಿಸಿದಾಗ ಸಹಾಯ ಡಯಾಗ್ನೋಸ್ಟಿಕ್ ಸೆಂಟರ್‌ನಲ್ಲಿ ಸ್ಕ್ಯಾನಿಂಗ್ ಕೊಠಡಿಯಲ್ಲಿ ಸಿಸಿ ಕ್ಯಾಮೆರಾಗಳ ಬಳಕೆ ಮಾಡಿರುವುದು ಕಾನೂನು ಬಾಹಿರ ಐಟಿ ಕಾಯ್ದೆ ಪ್ರಕಾರ ಅಪರಾಧವಾಗಲಿದೆ. ಪಿಸಿ&ಪಿಎನ್‌ಡಿಟಿ 1994 ಕಾಯ್ದೆಯಡಿ ಪ್ರತಿ ಸ್ಕ್ಯಾನಿಂಗ್ ನಲ್ಲಿ ಕಡ್ಡಾಯವಾಗಿ ವೈದ್ಯರು ಒಬ್ಬರೇ ಒಳಗಡೆ ಇದ್ದು ಸ್ಕ್ಯಾನ್ ಮಾಡಬೇಕು.

    ಆದರೆ ಈ ಎರಡು ಸ್ಕ್ಯಾನಿಂಗ್ ಸೆಂಟರ್‌ನಲ್ಲಿ ಈ ನಿಯಮ ಉಲ್ಲಂಘಿಸಿರುವುದು ಕಂಡು ಬಂದ ಹಿನ್ನಲೆಯಲ್ಲಿ ಶೋಕಾಸು ನೋಟಿಸ್ ನೀಡುವಂತೆ ಸೂಚಿಸಲಾಗಿದೆ. ಜಿಲ್ಲೆಯ ಎಲ್ಲಾ ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿ ಕಡ್ಡಾಯವಾಗಿ ನಿಯಮಗಳನ್ನು ಪಾಲಿಸಬೇಕು ನಿರ್ಲಕ್ಷಿಸಿದರೇ ಕಾನೂನು ಕ್ರಮ ಜರುಗಿಸಲಾಗುವುದು. ಕೂಡಲೇ ಜಿಲ್ಲಾ ಮಟ್ಟದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ, ಆರ್‌ಸಿಹೆಚ್ ಮತ್ತು ನೋಡಲ್ ಅಧಿಕಾರಿಗಳ ಮೂರು ತಂಡಗಳನ್ನು ರಚಿಸಿ ಪ್ರತಿ ತಂಡಗಳು 25 ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ಒಂದು ವಾರದಲ್ಲಿ ತಪಾಸಣೆ ಮಾಡುವ ಮೂಲಕ ವಿಸ್ಕೃತ ವರದಿಯನ್ನು ಸಲ್ಲಿಸಬೇಕು. ನಿಯಮ ಉಲ್ಲಂಘಿಸಿದವರ ವಿರುದ್ಧ ಕಾರಣ ಕೇಳಿ ನೋಟಿಸ್ ವಿತರಣೆ. ತಪಾಸಣೆಯಲ್ಲಿ ಅಪರಾಧ ಕಂಡು ಬಂದರೆ ಸೆಂಟರ್ ಬಂದ್ ಮಾಡಲು ಕ್ರಮ ವಹಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಶಿಕ್ಷಣ ಇಲಾಖೆ :

     ಕಳೆದ ವರ್ಷದಲ್ಲಿ ಜಿಲ್ಲೆಯಲ್ಲಿ 9ನೇ ತರಗತಿ ಉತ್ತೀರ್ಣವಾದ ಮಕ್ಕಳ ಸಂಖ್ಯೆ 23000 ಆದರೆ 10 ತರಗತಿಗೆ ಪರೀಕ್ಷೆ ನೊಂದಾಣಿಯಾದ ಮಕ್ಕಳಿಗೆ 4000 ಮಕ್ಕಳ ವ್ಯತ್ಯಾಸ ಕಂಡು ಬಂದಿದೆ. ಈ 4000 ಮಕ್ಕಳ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳಲ್ಲಿ ಮಾಹಿತಿಯಿಲ್ಲ ಇದೊಂದು ದುರಂತವೇ ಸರಿ. ನಗರದ ಅಮರಾವತಿಯಲ್ಲಿನ ಸರ್ಕಾರಿ ಬಾಲಕಿಯರ ಪ್ರೌಢಶಾಲೆಗೆ ಭೇಟಿ ನೀಡಿದ ವೇಳೆ ಮಕ್ಕಳು ಮನೆಯಿಂದಲೇ ಊಟದ ತಟ್ಟೆಯನ್ನು ತರುತ್ತಿದ್ದಾರೆ. ಬಿಸಿಯೂಟ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ವಿದ್ಯಾರ್ಥಿಗಳಿಗೆ ಊಟದ ತಟ್ಟೆಗಳನ್ನು ನೀಡಬೇಕಿದೆ. ಹಾಗಾಗೀ ಸೋಮವಾರ ಮದ್ಯಾಹ್ನದ ಊಟಕ್ಕೆ ವಿದ್ಯಾರ್ಥಿಗಳಿಗೆ ಹೊಸ ತಟ್ಟೆಗಳನ್ನು ಖರೀದಿಸಿ ಸರಬರಾಜು ಮಾಡಬೇಕು. ಜಿಪಿಎಸ್ ಪೋಟೋ ಸಹಿತ ಮಕ್ಕಳು ಊಟ ಮಾಡುವುದನ್ನು ವರದಿ ನೀಡಬೇಕು ಇಲ್ಲದಿದ್ದರೇ ಸುಮೋಟು ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಅದೇ ಶಾಲೆಯಲ್ಲಿ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳೆಂದು ಪರಿಗಣಿಸಿ 9ನೇ ತರಗತಿಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಪುನಃ 9ನೇ ತರಗತಿಗೆ ನೊಂದಾಯಿಸಿಕೊಂಡಿರುವುದು ಕಂಡು ಬಂದಿದೆ. ಈ ಬಗ್ಗೆ ಎಷ್ಟು ವಿದ್ಯಾರ್ಥಿಗಳಿಗೆ ಹಿಗಾಗಿದೆ ಎಂಬ ವರದಿ ಸಲ್ಲಿಸಬೇಕು. ಶಾಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ನಗರಸಭೆ ಅಧಿಕಾರಿಗಳಿಗೆ ಪತ್ರ ವ್ಯವಹಾರ ಮಾಡುವ ಮೂಲಕ ಸಮಸ್ಯೆಗೆ ಪರಿಹಾರ ನೀಡಲು ಸೂಚಿಸಲಾಗಿದೆ.
ಪೊಲೀಸ್ ಇಲಾಖೆ : ನಗರದ ಗ್ರಾಮೀಣ ಠಾಣೆ ಮತ್ತು ಬಡಾವಣೆ ಠಾಣೆಗೆ ಭೇಟಿ ನೀಡಿದ ವೇಳೆ ಮಕ್ಕಳ ಪ್ರಕರಣಗಳ ಬಗ್ಗೆ ಪ್ರತ್ಯೇಕ ದಾಖಲೆಗಳ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸದಿರುವುದು ಕಂಡು ಬಂದಿದೆ. ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಶಾಲಾ ಕಾಲೇಜುಗಳಲ್ಲಿ ಪ್ರತಿ ಗುರುವಾರ ತೆರೆದ ಮನೆ ಕಾರ್ಯಕ್ರಮ ನಡೆಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಕಡ್ಡಾಯವಾಗಿ ಠಾಣೆಯಲ್ಲಿ ಮಕ್ಕಳ ಸಹಾಯವಾಣಿ ನಾಮಫಲಕಗಳು ಮತ್ತು ಕೆಲವು ಜಿಲ್ಲಾ ಮಟ್ಟದ ಅಧಿಕಾರಿಗಳ ಮಾಹಿತಿಯನ್ನು ಬೋರ್ಡ್ಗಳು ಅಳವಡಿಸಬೇಕು. ಕೂಡಲೇ ಕಾರ್ಯ ನಿರ್ವಹಣೆಯನ್ನು ಸೂಕ್ತವಾಗಿ ಕ್ರಮವಹಿಸಬೇಕು ಎಂದು ನಿರ್ದೇಶನ ನೀಡಲಾಗಿದೆ ಎಂದರು.
ಸಂಚಲನ ಮೂಡಿಸಿದ ದಿಢೀರ್ ಭೇಟಿ : ನಗರದ ಎಪಿಎಂಸಿ ಬಳಿಯಿರುವ ಬಿಸಿಎಂ ಇಲಾಖೆ ವಸತಿ ನಿಲಯ, ತಾಯಿ ಮತ್ತು ಮಕ್ಕಳ ಆಸ್ಪತ್ರೆ, ನೂರು ಹಾಸಿಗೆ ಆಸ್ಪತ್ರೆ, ಸ್ಕ್ಯಾನಿಂಗ್ ಸೆಂಟರ್‌ಗಳು, ಕಾರಾಗೃಹ, ಗ್ರಾಮೀಣ ಪೊಲೀಸ್ ಠಾಣೆ, ಬಡವಾಣೆ ಪೊಲೀಸ್ ಠಾಣೆ, ಡಿಡಿಪಿಐ ಕಚೇರಿ ಬಳಿಯ ಅಂಗನವಾಡಿ ಕೇಂದ್ರ, ಅಮರಾವತಿಯಲ್ಲಿನ ಸರ್ಕಾರಿ ಬಾಲಕಿಯರ ಪ್ರೌಢಶಾಲೆಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು. ಬಾಲಕಿಯರ ಪ್ರೌಢಶಾಲೆಯಲ್ಲಿ ಮದ್ಯಾಹ್ನ ವಿದ್ಯಾರ್ಥಿಗಳೊಂದಿಗೆ ಬಿಸಿಯೂಟ ಸವಿದರು.
ಈ ವೇಳೆ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಾಹ್ನವಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಎಸ್.ಶ್ವೇತಾ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ವೆಂಕಟೇಶ್ ರಾಮಚಂದ್ರಪ್ಪ, ಮಕ್ಕಳ ಹಕ್ಕುಗಳ ರಕ್ಷಣಾಧಿಕಾರಿ ಸುದೀಪ್ ಉಂಕಿ ವೇದಿಕೆಯಲ್ಲಿದ್ದರು. ಸಭೆಯಲ್ಲಿ ಜಿಲ್ಲಾ ಅರೋಗ್ಯ ಅಧಿಕಾರಿ ಡಾ.ಶಂಕರ ನಾಯ್ಕ್, ಆರ್‌ಸಿಎಚ್ ಅಧಿಕಾರಿ ಡಾ.ಜಂಬಯ್ಯ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ವೈ.ಎ.ಕಾಳೆ, ಬಿಸಿಎಂ ಜಿಲ್ಲಾ ಅಧಿಕಾರಿ ಜಿ.ಶಶಿಕಲಾ, ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಿಕ್ಷಣ ಇಲಾಖೆ ಅಧಿಕಾರಿಗಳು, ಸಂಯೋಜಕರು ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

Recent Articles

spot_img

Related Stories

Share via
Copy link