ಪ್ರಪಾತಕ್ಕೆ ಬಿದ್ದ ಕಾರು : ಗ್ರಾಮ ಲೆಕ್ಕಾಧಿಕಾರಿ ಸಾವು

ಮುಂಡಗೋಡ:

    ತಡಸ ತಾಯವ್ವ ದೇಗುಲ ಬಳಿಯ ತಿರುವಿನಲ್ಲಿ ಶನಿವಾರ ರಾತ್ರಿ ಭೀಕರ ಅಪಘಾತ ಸಂಭವಿಸಿದೆ. ಹುಬ್ಬಳ್ಳಿ ಯಿಂದ ಮರಳಿ ಬರುವಾಗ ದುರ್ಘಟನೆ ನಡೆದಿದ್ದು, ತಿರುವಿನಲ್ಲಿ ಕಾರು 20 ಅಡಿ ಆಳದ ಪ್ರಪಾತಕ್ಕೆ ಬಿದ್ದಿದೆ.

     ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ನಜ್ಜು ಗುಜ್ಜಾಗಿದ್ದು, ಮುಂಡಗೋಡ ತಹಶೀಲ್ದಾರ್ ಕಾರ್ಯಾಲಯದ ವ್ಯಾಪ್ತಿಯಲ್ಲಿ ಗ್ರಾಮ ಲೆಕ್ಕಾಧಿಕಾರಿ ಯಾಗಿ ಕಾರ್ಯನಿರ್ವಹಿಸುತ್ತಿದ್ದ ತುಮಕೂರು ಜಿಲ್ಲೆ ಸಿರಾ ಮೂಲದ ಗೋಪಾಲ ಗೌಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗೋವಿಂದ ರಾಥೋಡ್ ಹಾಗೂ ಮಂಜುನಾಥ್ ಅವರಿಗೆ ಗಂಭೀರ ಗಾಯಗಳಾಗಿದ್ದು , ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಪ್ರಪಾತಕ್ಕೆ ಬಿದ್ದ ಕಾರಿನಿಂದ ಗಾಯಾಳುಗಳನ್ನು ಮೇಲಕ್ಕೆತ್ತುವಲ್ಲಿ ಮುಂಡಗೋಡ ಪೊಲೀಸ್ ಠಾಣೆಯ ಸಿಬ್ಬಂದಿಗಳು , ಮುಂಡಗೋಡ ಅಗ್ನಿಶಾಮಕ ದಳದ ಅಧಿಕಾರಿಗಳು , ಹಾಗೂ 108 ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.

     ಗ್ರಾಮ ಲೆಕ್ಕಾಧಿಕಾರಿ ಗೋಪಾಲ ಗೌಡ ಅವರ ಸಾವಿಗೆ ತಹಶೀಲ್ದಾರ್ ಕಾರ್ಯಾಲಯದ ಅಧಿಕಾರಿಗಳು ಹಾಗೂ ಸಿಬ್ಬಂದಿ ಗಳು ಹಾಗೂ ಮುಂಡಗೋಡದ ಸಾರ್ವಜನಿಕರು ಸಂತಾಪ ಸೂಚಿಸಿದ್ದಾರೆ. ತಡಸ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ಮರಣದಾರಿಯಾದ ತಿರುವು

ಹುಬ್ಬಳ್ಳಿಯಿಂದ ತಡಸ ಮಾರ್ಗವಾಗಿ ಮುಂಡಗೋಡ ಬರುವ ಸಾಕಷ್ಟು ವಾಹನ ಸವಾರರಿಗೆ , ತಾಯವ್ವ ದೇಗುಲ ಬಳಿ ಇರುವ ಅಪಾಯಕಾರಿ ತಿರುವು ಮರಣದಾರಿಯಾಗಿ ಪರಿಣಮಿಸಿದೆ. ಕಳೆದ ಎರಡು ವರ್ಷಗಳಲ್ಲಿ ಸುಮಾರು 15 ಕ್ಕೂ ಹೆಚ್ಚಿನ ಅಪಘಾತಗಳು ಸಂಭವಿಸಿದ್ದು ಅನೇಕ ವಾಹನ ಸವಾರರು ಜೀವ ಕಳೆದುಕೊಂಡಿದ್ದಾರೆ. ಹಲವರು ಗಂಭೀರ ಗಾಯಗಳಿಂದ ಶಾಶ್ವತ ಅಂಗಾಂಗ ವೈಕಲ್ಯತೆ ತುತ್ತಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂಡಗೋಡ ಹಾಗೂ ಹಾವೇರಿ ಶಿಗ್ಗಾಂವಿ ತಾಲೂಕಿನ ಲೋಕೋಪಯೋಗಿ ಅಧಿಕಾರಿಗಳು ಹಾಗೂ ಪೊಲೀಸರು ಅಪಘಾತಗಳನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯ ಮಾಡುತ್ತಿದ್ದಾರೆ.

Recent Articles

spot_img

Related Stories

Share via
Copy link