ಸೈಕೋ ರಂಜನ್‌ ಮೇಲೆ ಪೋಕ್ಸೋ ಕೇಸ್‌ ದಾಖಲಿಸಲು ಮುಂದಾದ ಪೊಲೀಸರು

ಬೆಂಗಳೂರು

     ರಾಜಧಾನಿಯ  ಬೀದಿಗಳಲ್ಲಿ ಮಕ್ಕಳ ಮೇಲೆ ಹಲ್ಲೆ ಮಾಡಿ ಕ್ರೌರ್ಯ ಪ್ರದರ್ಶಿಸುತ್ತಿದ್ದ ಸೈಕೋ ರಂಜನ್  ಎಂಬ ಪಾತಕಿಯ ವಿರುದ್ಧ ಪೊಲೀಸರು ಪೋಕ್ಸೋ ಕೇಸ್‌  ದಾಖಲಿಸಿ ಬಂಧಿಸಲು ಮುಂದಾಗಿದ್ದಾರೆ. ಈತ ಜಿಮ್‌ ಟ್ರೈನರ್‌  ಎಂದು ಗೊತ್ತಾಗಿದೆ. ಮಕ್ಕಳ ಮೇಲೆ ವಿಕೃತಿ ಮೆರೆಯುತ್ತಿದ್ದ ಈತನ ಹಲವು ಕರಾಳ ಕೃತ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದವು. ಈತನನ್ನು ಹೀಗೇ ಬಿಟ್ಟರೆ ಮುಂದೆ ಮಕ್ಕಳ ಸರಣಿ ಕೊಲೆಗಾರ ಆಗುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ ಎಂದು ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದ್ದರು.

 

  ಈತ ತ್ಯಾಗರಾಜ ನಗರದ ಪೋಸ್ಟ್ ಆಫೀಸ್ ರಸ್ತೆಯಲ್ಲಿ ಆಟವಾಡುತ್ತಿದ್ದ 5 ವರ್ಷದ ಮಗುವನ್ನು ಕಾಲಿನಿಂದ ಒದ್ದು ವಿಕೃತಿ ಮೆರೆದಿದ್ದ. ಒದ್ದ ಏಟಿಗೆ ಮಗು ದೂರಕ್ಕೆ ಮುಗ್ಗರಿಸಿ ಬಿದ್ದಿತ್ತು. ಬಿದ್ದ ರಭಸಕ್ಕೆ ಮಗುವಿನ ಹಣೆ, ಕಣ್ಣಿನ ಭಾಗ, ಕೈ-ಕಾಲುಗಳಲ್ಲಿ ರಕ್ತ ಸ್ರಾವವಾಗಿತ್ತು. ಈ ಸಂಬಂಧ ಸಿಸಿಟಿವಿ ದೃಶ್ಯ ಆಧರಿಸಿ ಪೊಲೀಸರು ತನಿಖೆ ನಡೆಸಲು ಮುಂದಾಗಿದ್ದಾರೆ. ಈತ ಮಕ್ಕಳ ಮೇಲೆ ಮಾತ್ರವಲ್ಲದ ಇತರ ದಾರಿಹೋಕರ ಮೇಲೆ ವಿನಾಕಾರಣ ಹಲ್ಲೆ ನಡೆಸಲು ಮುಂದಾಗುತ್ತಿದ್ದುದೂ ಪತ್ತೆಯಾಗಿದೆ. 

    ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆ ವೇಳೆ ಸೈಕೋ ರಂಜನ್ ಮಕ್ಕಳ ಮೇಲೆ ನಡೆಸಿರೋ ವಿಕೃತಿಯ ಸಾಲು ಸಾಲು ಘಟನೆಗಳು ಬೆಳಕಿಗೆ ಬಂದಿವೆ. ಸೈಕಲ್‌ನಲ್ಲಿ ಹೋಗುತ್ತಿದ್ದ ಬಾಲಕನ ತಲೆ ಕೂದಲು ಹಿಡಿದು ಗರಗರನೇ ತಿರುಗಿಸಿ ಹಲ್ಲೆ ನಡೆಸಿದ್ದ. ಒಂದು ಮಗುವಿನ ಮೇಲೆ ಬೈಕ್‌ ಹತ್ತಿಸಲು ಯತ್ನಿಸಿದ್ದ. ಹೀಗೆ ಒಂದು ವಾರದ ಅಂತರದಲ್ಲಿ ನಾಲ್ಕು ಮಕ್ಕಳಿಗೆ ಹಲ್ಲೆ ಮಾಡಿ ಕಿರುಕುಳ ನೀಡಿದ್ದಾನೆ. ವಿಪರ್ಯಾಸ ಅಂದರೆ ಇಷ್ಟೆಲ್ಲಾ ಘಟನೆಗಳು ನಡೆದಿದ್ದರೂ ಯಾವುದೇ ಮಕ್ಕಳ ಪೋಷಕರು, ಯಾವುದೇ ದೂರು ನೀಡಿರಲಿಲ್ಲ. 

    ಈ ಜಿಮ್ ಟ್ರೈನರ್‌ಗೆ ದಾರಿಹೋಕರಿಗೆ ಅನಗತ್ಯವಾಗಿ ಬೈಯುವುದು ಮತ್ತು ಮಕ್ಕಳ ಮೇಲೆ ಹಲ್ಲೆ ನಡೆಸುವುದು ಚಾಳಿಯಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಬಾಲಕನ ತಾಯಿ ನೀಡಿದ ದೂರಿನ ಮೇರೆಗೆ ಬನಶಂಕರಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದರೂ, ಸದ್ಯ ಆತ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ. ಈಗಾಗಲೇ ಒಂದು ಪ್ರಕರಣದಲ್ಲಿ ಆರೋಪಿಯನ್ನು ವಿಚಾರಣೆ ನಡೆಸಲಾಗಿದೆ. ಸದ್ಯ ಆರೋಪಿ ಸ್ಟೇಷನ್ ಬೇಲ್ ಪಡೆದು ಚೆನ್ನೈಗೆ ತೆರಳಿದ್ದಾನೆ. ಆತನ ವಿರುದ್ಧ ಪೋಕ್ಸೋ ಕೇಸ್ ದಾಖಲಿಸಿ ಬಂಧಿಸಲು ಪೊಲೀಸರು ಮುಂದಾಗಿದ್ದಾರೆ.

Recent Articles

spot_img

Related Stories

Share via
Copy link