ಬೆಂಗಳೂರು :
‘ಕಾಟೇರ’ ಸಿನಿಮಾ ಸಕ್ಸಸ್ ಕನ್ನಡ ಚಿತ್ರರಂಗಕ್ಕೆ ಶಕ್ತಿ ತುಂಬಿದೆ. ಕಳೆದ ವರ್ಷ ಕೊನೆಗೆ ಬಂದ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ನಮ್ಮದೇ ಮಣ್ಣಿನ ಕಥೆಯನ್ನು ಚಿತ್ರದಲ್ಲಿ ತೆರೆಗೆ ತರಲಾಗಿತ್ತು. ತರುಣ್ ಸುಧೀರ್ ನಿರ್ದೇಶನದ ಸಿನಿಮಾ ಶತದಿನೋತ್ಸವ ಆಚರಿಸಿಕೊಂಡಿತ್ತು.
ಸದ್ಯ ನಟ ದರ್ಶನ್ ‘ಡೆವಿಲ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನು ‘ಕಾಟೇರ’ ಸಕ್ಸಸ್ ಸಂಭ್ರಮಾಚರಣೆ ಮುಗಿದಿಲ್ಲ. ಚಿತ್ರಕ್ಕಾಗಿ ಕೆಲಸ ಮಾಡಿದ ಮೂವರಿಗೆ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಕಾರುಗಳನ್ನು ಉಡಗೊರೆಯಾಗಿ ನೀಡಿದ್ದಾರೆ. ಸಂಭಾಷಣೆಕಾರ ಮಾಸ್ತಿ, ಕಥೆಗಾರ ಜಡೇಶ್ ಹಾಗೂ ಸಹ ಕಲಾವಿದ ಸೂರಜ್ ಕಾರು ಉಡುಗೊರೆಯಾಗಿ ಪಡೆದಿದ್ದಾರೆ. ಇದೇ ವೇಳೆ ‘ಕಾಟೇರ’-2 ಬಗ್ಗೆ ನಟ ದರ್ಶನ್‌ಗೆ ಪ್ರಶ್ನೆ ಎದುರಾಯಿತು.
ಸೂಪರ್ ಹಿಟ್ ಸಿನಿಮಾಗಳ ಸೀಕ್ವೆಲ್ ಮಾಡುವುದು ಇತ್ತೀಚೆಗೆ ಟ್ರೆಂಡ್ ಆಗಿದೆ. ಒಂದೇ ಕಥೆಯನ್ನು 2 ಭಾಗಗಳಾಗಿ ಮಾಡುವುದು ಒಂದು ಪ್ರಯತ್ನ. ಆದರೆ ಹಿಟ್ ಆಗಿರುವ ಕಥೆಯನ್ನು ಹಿಂದಿಕ್ಕೆ ಅಥವಾ ಮುಂದಕ್ಕೆ ಎಳೆದು ಮತ್ತೊಂದು ಸಿನಿಮಾ ಮಾಡುವ ಲೆಕ್ಕಾಚಾರವೂ ಕೆಲವೊಮ್ಮೆ ನಡೆಯುತ್ತದೆ. ಅಂತಹ ಸಾಕಷ್ಟು ಉದಾಹರಣೆಗಳು ಕಣ್ಣ ಮುಂದಿವೆ. ಆದರೆ ‘ಕಾಟೇರ’ ಸೀಕ್ವೆಲ್‌ಗೆ ದರ್ಶನ್ ನೋ ಎಂದಿದ್ದಾರೆ.
“ನಾನು ಯಾವುದೇ ಕಾರಣಕ್ಕೂ ಸೀಕ್ವೆಲ್ ಸಿನಿಮಾ ಮಾಡಲ್ಲ, ‘ಕಾಟೇರ’- 2 ಬರೋದು ಬೇಡ, ಅದು ಮಾಸ್ಟರ್ ಪೀಸ್ ಸಾಕು. ಗೆದ್ದ ಎತ್ತಿನ ಬಾಲ ಹಿಡಿಯೋದು ಬೇಡ. ಆ ಕಥೆ ಮುಗೀತು. ಅಲ್ಲಿಗೆ ಸಾಕು. ನಮ್ಮ ಟೀಂ ಮುಂದಿನ ದಿನಗಳಲ್ಲಿ ಬೇರೆ ಸಿನಿಮಾ ಮಾಡ್ತೀವಿ” ಎಂದು ನಟ ದರ್ಶನ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಸ್ಟಾರ್ ನಟರು ವರ್ಷಕ್ಕೆ ಎರಡೆರಡು ಸಿನಿಮಾ ಮಾಡಬೇಕು ಎನ್ನುವ ಕೂಗು ಪದೇ ಪದೆ ಕೇಳಿ ಬರುತ್ತಲೇ ಇರುತ್ತದೆ. ಇದೇ ಪ್ರಶ್ನೆಯನ್ನು ನಟ ದರ್ಶನ್ ಮುಂದಿಟ್ಟಾಗ ಅನಿವಾರ್ಯ ಕಾರಣಗಳಿಂದ ಕೆಲವೊಮ್ಮೆ ತಡವಾಗುತ್ತದೆ ಎಂದಿದ್ದಾರೆ. ನನ್ನ ವಿಚಾರವನ್ನೇ ತೆಗೆದುಕೊಂಡರೆ ‘ಡೆವಿಲ್’ ಚಿತ್ರ ಅಕ್ಟೋಬರ್‌ಗೆ ರಿಲೀಸ್ ಎಂದು ಹೇಳಿದ್ದೆ. ಆದರೆ ಕೈಗೆ ಪೆಟ್ಟಾಯಿತು. ಇಲ್ಲದೇ ಇದ್ದಿದ್ದರೆ ಸಾಕಷ್ಟು ಚಿತ್ರೀಕರಣ ನಡೆದಿರುತ್ತಿತ್ತು. ಏನು ಮಾಡೋದು ಹೀಗಾಗುತ್ತದೆ ಎಂದಿದ್ದಾರೆ.
ಡೆವಿಲ್’ ಸಿನಿಮಾ ಆಕ್ಷನ್ ಸನ್ನಿವೇಶದ ಚಿತ್ರೀಕರಣದ ವೇಳೆ ನಟ ದರ್ಶನ್ ಎಡಗೈಗೆ ಪೆಟ್ಟಾಗಿತ್ತು. ಮೈಸೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಸರ್ಜರಿ ಮಾಡಿಸಿಕೊಂಡು ಸದ್ಯ ವಿಶ್ರಾಂತಿ ಪಡೆಯುತ್ತಿದ್ದಾರೆ. ಹಾಗಾಗಿ ‘ಡೆವಿಲ್’ ಚಿತ್ರೀಕರಣ ಸದ್ಯಕ್ಕೆ ಮುಂದೂಡಲಾಗಿದೆ. ಮಿಲನಾ ಪ್ರಕಾಶ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.
‘ಕಾಟೇರ’ ಚಿತ್ರದಲ್ಲಿ ನಾಯಕಿ ಸಹೋದರನ ಪಾತ್ರದಲ್ಲಿ ಸೂರಜ್ ನಟಿಸಿದ್ದಾರೆ. ಚಿತ್ರೀಕರಣದ ನಡುವೆ ಕೆಲ ದಿನಗಳ ಹಿಂದೆ ಅಪಘಾತದಲ್ಲಿ ಗಂಭೀರವಾಗಿ ಅವರು ಗಾಯಗೊಂಡಿದ್ದರು. ಆದರೂ ಬಂದು ‘ಕಾಟೇರ’ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ನಟಿಸಿದ್ದರು. ಸೂರಜ್ ಡೆಡಿಕೇಷನ್ ಬಗ್ಗೆ ನಟ ದರ್ಶನ್ ಮೆಚ್ಚಿಕೊಂಡರು.
ಇತ್ತೀಚೆಗೆ ನಟ ದರ್ಶನ್ ಲೋಕಸಭೆ ಚುನಾವಣೆ ಪ್ರಚಾರದಲ್ಲೂ ಭಾಗಿ ಆಗಿದ್ದರು. ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಮತಯಾಚನೆ ಮಾಡಿದ್ದರು. ದರ್ಶನ್ ಎಂಟ್ರಿಯಿಂದ ಮಂಡ್ಯ ಲೋಕಸಭೆ ಚುನಾವಣೆ ಪ್ರಚಾರ ಕಣ ರಂಗೇರಿತ್ತು. ಕಳೆದ ಬಾರಿ ಸುಮಲತಾ ಅಂಬರೀಶ್ ಪರ ದರ್ಶನ್ ಮಂಡ್ಯದಲ್ಲಿ ಪ್ರಚಾರ ಮಾಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ