ನವದೆಹಲಿ :
ರೈಲ್ವೆ ಇಲಾಖೆಯ ನೇಮಕಾತಿ ಮತ್ತು ಬಡ್ತಿ ಪರೀಕ್ಷೆಗಳನ್ನು ಎದುರಿಸಲು ಭಾಷೆಯ ಅಡೆತಡೆ ಅನುಭವಿಸುತ್ತಿದ್ದ ಕನ್ನಡಿಗರಿಗೆ ಈಗ ಸಿಹಿ ಸುದ್ದಿ ಸಿಕ್ಕಿದೆ. ರೈಲ್ವೆ ಇಲಾಖೆಯ ಪರೀಕ್ಷೆಗಳನ್ನು ಕನ್ನಡದಲ್ಲೂ ಬರೆಯಲು ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕೃತವಾಗಿ ಸಮ್ಮತಿಸಿದ್ದಾರೆ ಎಂದು ರೈಲ್ವೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಅವರು ತಿಳಿಸಿದ್ದಾರೆ.
ಇತ್ತೀಚೆಗೆ ಬೆಂಗಳೂರಿನ ರೈಲ್ವೆ ವಿಭಾಗೀಯ ವ್ಯಾಪ್ತಿಯಲ್ಲಿ ನಡೆಯುವ ಸೀಮಿತ ವಿಭಾಗೀಯ ಸ್ಪರ್ಧಾತ್ಮಕ (ಬಡ್ತಿ) ಪರೀಕ್ಷೆಗಳು ಕೇವಲ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ಲಭ್ಯವಿರುವ ಬಗ್ಗೆ ಚರ್ಚೆ ನಡೆದಿತ್ತು. ಈ ವರದಿಯು ಕನ್ನಡಿಗ ಉದ್ಯೋಗಿಗಳಿಗೆ ಆಗುತ್ತಿರುವ ಅನ್ಯಾಯವನ್ನು ಬೆಳಕಿಗೆ ತಂದಿತ್ತು.
ಈ ಗಂಭೀರ ವಿಷಯವನ್ನು ಕೈಗೆತ್ತಿಕೊಂಡ ಸಚಿವ ವಿ. ಸೋಮಣ್ಣ ಮತ್ತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಪ್ರಧಾನಿ ಮೋದಿ ಅವರ ಮೇಲೆ ಒತ್ತಡ ಹೇರಿದ್ದರು.ಪ್ರಾದೇಶಿಕ ಭಾಷೆಗಳಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಪ್ರಧಾನಿಗಳು ಈ ಬೇಡಿಕೆಗೆಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ನಗರದ ಹೊರವಲಯದ ಸಂಸದರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸೋಮಣ್ಣ ಈ ಮಹತ್ವದ ನಿರ್ಧಾರವನ್ನು ಹಂಚಿಕೊಂಡಿದ್ದಾರೆ.








